– ಎಸ್.ವೈ.ಗುರುಶಾಂತ್
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಪ್ರಸಾದ ಲಡ್ಡು. ಈ ಲಡ್ಡು ವಿಭಿನ್ನ ರುಚಿ ಇರುವ ಕಾರಣದಿಂದಲೂ ಅತ್ಯಂತ ಸುಪ್ರಸಿದ್ಧ, ಹಾಗಾಗಿ ಲಡ್ಡಿಗೆ ಭಾರೀ ಬೇಡಿಕೆ. ಈ ಬೇಡಿಕೆಗೆ ಅನುಗುಣವಾಗಿ ಪೂರೈಕೆಯೂ ಕಷ್ಟ ಸಾಧ್ಯವಾಗುವುದಿಲ್ಲ ವಾದ್ದರಿಂದ ಬೇಡಿಕೆಯೆನೂ ತಗ್ಗುವುದಿಲ್ಲ.
ತಿರುಪತಿಗೆ ಹೋಗಿ ತಿಮ್ಮಪ್ಪ, ಅಲುಮೇಲ ಮಂಗಮ್ಮನ ದರ್ಶನ ಮಾಡಿ ಬಂದವರು ಪ್ರಸಾದ, ಕೈಗೆ ಕಟ್ಟುವ ಮುಂಗೈ ದಾರ, ನಾಮ ವಿಭೂತಿ, ಫೋಟೋ ಇತ್ಯಾದಿಗಳಿಗೆ ಪೂಜೆ ಸಲ್ಲಿಸಿ ತಮ್ಮ ಆಪ್ತರಿಗೆ ಪ್ರಸಾದ ಹಂಚುವುದು ವಾಡಿಕೆ. ಬಹು ಹಿಂದೆ ಅಲ್ಲಿಯ ಕಾಳಹಸ್ತಿಗೂ ಹೋಗಿ ಬಂಗಾರದ ಹಲ್ಲಿ ದರ್ಶನ ಮಾಡಿ ಬಂದವರಿಗೆ ಹಾಗೂ ಅಲ್ಲಿಂದ ತಂದ ಫೋಟೋಗೆ ನಮಸ್ಕರಿಸಿದರೆ ಹಲ್ಲಿ ಬಿದ್ದ ದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ. ತಿರುಪತಿಗೆ ಹೋಗಿ ಬರುವುದು ಎನ್ನುವುದು ಆ ಕಾಲದಲ್ಲಿ ಜೀವಮಾನದ ಒಂದು ಸಾಧನೆಯೂ ಆಗಿರುತ್ತಿತ್ತು. ತಿರುಪತಿ ತಿಮ್ಮಪ್ಪನಿಗೂ ಭಾರತದ ಹಲವಾರು ಸಮುದಾಗಳಿಗೂ ಇರುವ ನಂಟು ಚಾರಿತ್ರಿಕ, ಧಾರ್ಮಿಕ, ಸಾಂಸ್ಕೃತಿಕವೂ ಆಗಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಭಕ್ತ ಸಮೂಹವಿದೆ. ಇಂತಹ ಅನೇಕ ಕಾರಣಗಳಿಂದ ಭಕ್ತಸಾಗರದಲ್ಲಿ ಇಳಿಕೆಯಾಗಿಯೇ ಇಲ್ಲ, ಹೆಚ್ಚುತ್ತಲೇ ಇದೆ.
ಪ್ರತಿ ವರ್ಷದ ಆದಾಯವೂ ಸಾವಿರಾರು ಕೋಟಿಗೂ ಮೀರಿ ಖಜಾನೆ ತುಂಬಿ ಹರಿಯುತ್ತದೆ. ತಿರುಪತಿ ದೇವಸ್ಥಾನ ಪ್ರಪಂಚದಲ್ಲೇ ಅತ್ಯಂತ ಸಿರಿವಂತಿಕೆಯ ದೇವಸ್ಥಾನ. ಅದರ ಒಟ್ಟು ಸಂಪತ್ತು 3 ಲಕ್ಷ ಕೋಟಿಗೂ ಮೀರಿದೆ! ಕಳೆದ 2023-24 ರಲ್ಲಿ ವಾರ್ಷಿಕ ಹುಂಡಿ ಆದಾಯ 1611 ಕೋಟಿ ರೂ.ಗಳು. ಹೂಡಿಕೆಯ ಮೇಲಿನ ಬಡ್ಡಿ 1167 ಕೋಟಿ.ರೂ. ಗಳು. ಅಲ್ಲಿ ಮಾರುವ ಪ್ರಸಾದದಿಂದ 600 ಕೋಟಿ ರೂ. ಗಳ ಗಳಿಕೆ, ದರ್ಶನದ ಟಿಕೇಟಿನಿಂದ 338 ಕೋಟಿ. ರೂ.ಗಳು, ಅರ್ಜಿತ ಸೇವೆಯಿಂದ 150 ಕೋಟಿ ರೂ. ಗಳು ಹೀಗೆ ಇವನ್ನೆಲ್ಲವನ್ನೂ ಒಳಗೊಳಿಸಿ 2024-25 ರ ಸಾಲಿನಲ್ಲಿ 5141.74 ಕೋಟಿ ರೂಪಾಯಿಗಳ ಬಜೆಟ್ ಗೆ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ ಅಂಗೀಕಾರ ನೀಡಿದೆ. ಇನ್ನು ಉಳಿದ ಆದಾಯದ ಮೂಲಗಳು ಅನೇಕ. ಅರ್ಚಕರಿಗೂ ಅಲ್ಲಿ ಸಂಬಳ ಇದೆ.
ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ: ಭಕ್ತರ ಭಾವನೆಗಳ ಜೊತೆ ಆಟವಾಡುವುದು ಬೇಡ, ನಿಜ ಏನೆಂದು ತಿಳಿಯಬೇಕಿದೆ
ಆದರೆ ಹಲವಾರು ದೇವಸ್ಥಾನಗಳನ್ನು ನೋಡಿದರೆ ನೇರ ಆದಾಯಗಳನ್ನು ಮೀರಿದ ಆದಾಯ ಇದ್ದೇ ಇರುತ್ತದೆ. (ತಟ್ಟೇ ಕಾಸು/ದಕ್ಷಿಣೆ). ಕೆಲವು ವರ್ಷಗಳ ಹಿಂದೆ ಸ್ವಾಮಿಯ ಸೇವೆ ಮಾಡುವ ಪ್ರಧಾನ ಅರ್ಚಕರ ಮಗಳ ಮದುವೆಗೆ ಹಾಕಿದ ಬಂಗಾರದ ಆಭರಣ (ತಗಡಿನ ಹೊದಿಕೆ ಎನ್ನಬಹುದು) ಪ್ರಮಾಣವೇ ಪ್ರಮಾಣೀಕರಣ!
ಹೀಗೆ ಅನೇಕ ಸಂಗತಿಗಳು, ಓರೆಕೋರೆಗಳು ಇದ್ದಾಗ್ಯೂ ಸಾರ್ವಜನಿಕರ ಈ ಹಣ ಸಾರ್ವಜನಿಕರ ಉದ್ದೇಶಕ್ಕಾಗಿಯೇ ಸರ್ಕಾರ ಬಳಸುತ್ತದೆ ಎನ್ನುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.
ಇಂತಹ ಧೈವ ಕ್ಷೇತ್ರದಲ್ಲಿ ಭಾರಿ ಹಗರಣವೊಂದು ನಡೆದಿರುವ ಆರೋಪದ ಸುದ್ದಿ ಹೊರ ಬಂದಿದೆ. ಅಲ್ಲಿನ ಲಡ್ಡು ತಯಾರಿಕೆಯಲ್ಲಿ ಬಳಸಲಾಗುವ ತುಪ್ಪದಲ್ಲಿ ಮೀನಿನ ಎಣ್ಣೆ,ದನಗಳ ಮತ್ತು ಹಂದಿಗಳ ಕೊಬ್ಬು ಮಿಶ್ರಣ ಮಾಡಿರುವುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಸ್ವತಃ ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವೇ ಎಮ್.ಡಿ.ಎ. ಶಾಸಕರ ಸಭೆಯಲ್ಲಿ ಹೇಳಿದ್ದಾರೆ. ಅದನ್ನು ಸಮರ್ಥಿಸುವ ಪ್ರಯೋಗಾಲಯದ ರಿಪೋರ್ಟ್ ತೋರಿಸಿದ್ದಾರೆ. ಇದು ಲಡ್ಡು ತಯಾರಿಕೆಯ ಪದಾರ್ಥಗಳ ಬಳಕೆಯ ಗುಣಮಟ್ಟ, ಮಾನದಂಡಗಳ ನಗ್ನ ಉಲ್ಲಂಘನೆ ಮತ್ತು ಕಲಬೆರೆಕೆಯ ಭಾರಿ ವಂಚನೆ ಆಗಿದೆ ಎಂದಾಯ್ತು. ಪ್ರಸಾದ ಪವಿತ್ರವೆಂದು ನಂಬಿ ಸ್ವೀಕರಿಸುವ ಭಕ್ತರಿಗೆ ಈ ಸುದ್ದಿ ದಿಗ್ಭ್ರಮೆ ತಂದಿದೆ. ಕಲಬೆರಕೆಯಾಗಿದ್ದಲ್ಲಿ ಭಕ್ತರ ಧಾರ್ಮಿಕ ನಂಬಿಕೆಗಳಿಗೆ ಬಗೆದ ವಂಚನೆಯಾಗಿದ್ದು ಇದು ಅಘಾತಕಾರಿ ಎಂದು ಆಕ್ರೋಶವೂ ವ್ಯಕ್ತವಾಗಿದೆ.
ಈ ಬಗ್ಗೆ ಖಂಡಿತಕ್ಕೂ ಸೂಕ್ತ ತನಿಖೆ ಆಗಲೇಬೇಕು, ತಕ್ಕ ಕಠಿಣ ಶಿಕ್ಷೆ ಆಗಲೇಬೇಕು. ಕೇವಲ ಧಾರ್ಮಿಕ ಎನ್ನುವುದಕ್ಕೆ ಮಾತ್ರ ಅಲ್ಲ, ಕಳಪೆ, ಕಲಬೆರಕೆ ಗುಣ ಮಟ್ಟದ ಉತ್ವನ್ನ, ವಂಚನೆ ಯಂತಹ ಪ್ರಶ್ನೆಗಳ ಆಧಾರದಲ್ಲೂ.
ಈ ಪ್ರಕರಣ ಈಗ ಇನ್ಮೂ ಒಂದಷ್ಟು ಮುಂದಕ್ಕೆ ಹೋಗುತ್ತಿದೆ. ಹಿಂದೆ 2020 ರಲ್ಲಿ ಇಲ್ಲಿನ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪವನ್ನು ಕದ್ದು ಕಡಿಮೆ ಬೆಲೆಗೆ ಹೊರಗೆ ಮಾರಲಾಗುತ್ತಿದೆ, ಅದನ್ನು ಖರೀದಿಸಿದವರು ಹೆಚ್ಚಿನ ಬೆಲೆಗೆ ಮಾರಲಾಗುತ್ತಿರುವ ಭ್ರಷ್ಟ ಪ್ರಕರಣವದು. ಅದರ ವಿಚಾರಣೆಯೂ ನಡೆದಿದೆ.
ಈಗ ಹೊರ ಬಂದಿರುವ ಹಗರಣದ ತನಿಖೆ, ಅದರಲ್ಲಿ ಯಾರ ಪಾತ್ರ ಏನು ಎನ್ನುವುದಿನ್ನೂ ತಿಳಿದಿಲ್ಲ. ಅದು ಗಂಭಿರ ಆಳ ತನಿಖೆಯ ನಂತರವೇ ಬರಬೇಕು. ಆದರೆ ಕೆಲವರು ವಿಚಿತ್ರ ವಾದ ವೈಖರಿ ಮಂಡಿಸುತ್ತಾ ಅಪರಾಧಿಯ ಶೋದ ಮುಗಿಸಿಯೇ ಬಿಟ್ಟಿದ್ದಾರೆ. ಅವರ ತನಿಖೆಯ ಜಾಡು ಹೀಗಿದೆ. ನಡೆದಿರುವುದು ಯಾರ ಕಾಲದಲ್ಲಿ? ಆಗ ಮುಖ್ಯಮಂತ್ರಿ ಆಗಿದ್ದವರು ಯಾರು? ವೈ.ಎಸ್.ಆರ್. ಕಾಂಗ್ರೆಸ್ ನ ಜಗನ್ ಮೋಹನರೆಡ್ಡಿ ಅಲ್ಲವೇ?. ಈತ ಕ್ರಿಶ್ಚಿಯನ್ ಮತಧರ್ಮಕ್ಕೆ ಸೇರಿದಾತ. ಹಾಗಾಗಿ ಹಿಂದುಗಳ ಪಾವಿತ್ರ್ಯ ರಕ್ಷಣೆ ಆಗಲು ಸಾಧ್ಯವೇ? ಎನ್ನುವ ವಾದ. ಅದರಲ್ಲೂ ವಾಟ್ಸ್ ಅಪ್ ಯೂನಿವರ್ಸಿಟಿ ಯಲ್ಲಿ ಭರ್ಜರಿ ಪ್ರಚಾರ ಆರಂಭಗೊಂಡಿದೆ.
ಬಿಜೆಪಿಯ ನೇತೃತ್ವದ ಎನ್.ಡಿ.ಎ. ಭಾಗವಾಗಿರುವ ತೆಲುಗು ದೇಶಂನ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ `ಸನಾತನ ಧರ್ಮವನ್ನು ರಕ್ಷಿಸಲು ಏನೆಲ್ಲವನ್ನೂ ಮಾಡಬೇಕಿದೆ’ ಎಂದು ಹೇಳಿದ್ದಾರೆ. ಮುಂದುವರಿದು `ರಾಷ್ಟ್ರ ಮಟ್ಟದಲ್ಲಿ ಸನಾತನ ಧರ್ಮ ರಕ್ಷಣಾ ಮಂಡಳಿ ರಚಿಸುವ ಕಾಲವೀಗ ಬಂದಿದೆ. ಅದು ದೇಶದ ಎಲ್ಲಾ ದೇವಸ್ಥಾನ ಗಳಿಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಬೇಕು `ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದು ಕೊಂಡಿದ್ದಾರೆ! ಇದಕ್ಕೆ ತತ್ ಕ್ಷಣವೇ ಪ್ರತಿಕ್ರಿಯಿಸಿರುವ ಖ್ಯಾತ ನಟ ಪ್ರಕಾಶ್ ರೈ ಯವರು `ಪ್ರಿಯ ಪವನ್ ಕಲ್ಯಾಣ್ ರವರೇ, ನೀವು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿರುವ ರಾಜ್ಯದಲ್ಲಿನ ಸಮಸ್ಯೆ. ಅದನ್ನು ತನಿಖೆ ಮಾಡಿ, ಅಪರಾಧಿಗಳನ್ನು ಪತ್ತೆ ಹಚ್ಚಿ, ಶಿಕ್ಷೆ ಕೊಡಿಸಿ’ ಎಂದಿದ್ದಾರೆ. ಅಂದರೆ ಇದನ್ನು ರಾಷ್ಟ್ರೀಯ ಮಟ್ಟಕ್ಕೆ ಹಬ್ಬಿಸುವ ಉದ್ದೇಶವನ್ನು ಪ್ರಶ್ನಿಸಿ, ಟೀಕಿಸಿದ್ದಾರೆ.
ಪವನ್ ಕಲ್ಯಾಣ್ ಇಂತಹ ಮಾತುಗಳನ್ನು ವಿವೇಕದಿಂದ ತೆಗೆದುಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಎಂದು ಕಾಣುತ್ತದೆ. ವೇದ ಘೋಷಗಳ ನಡುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ನಟ ಪವನ್ ಕಲ್ಯಾಣ್ ಈ ಕಲಬೆರೆಕೆಗೆ ಒಂದು ವಾರ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ನಡೆದಿರಬಹುದಾದ ಕ್ರಿಮಿನಲ್ ಕೃತ್ಯವನ್ನು ಬಳಸಿ ಭಾವನಾತ್ಮಕವಾಗಿ ಬಳಸಿಕೊಳ್ಳಲು ಸಕ್ರಿಯವಾಗಿದ್ದಾರೆ. ಅದಕ್ಕೆ ಧಾರ್ಮಿಕತೆಯನ್ನು, ಅನ್ಯ ಧರ್ಮೀಯರ ಕುತಂತ್ರ ಎನ್ನುವುದನ್ನು ಬಿಂಬಿಸಿ ಅದರ ದುರ್ಬಳಕೆಗೆ ನಾಯ್ಡು, ಕಲ್ಯಾಣ ಬಳಗ, ಬಿಜೆಪಿ ನಾಯಕರು ಇಳಿಯುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಒಳಗೊಂಡು ಸಂಘಪರಿವಾರ, ಸುಗುಣೇಂದ್ರ ತೀರ್ಥರಂತಹ ಮಠಾಧೀಶರು ದೇವಸ್ಥಾನ ಗಳನ್ನು ಸರ್ಕಾರದ ಸುಪರ್ದಿನಿಂದ `ಹಿಂದುಗಳ’ ಕೇಗೆ ಅಂದರೆ ಶಾಸಗಿಯವರಿಗೆ ಕೊಟ್ಟು ಬಿಡಿ `ಎಂಬ ಧಾರ್ಮಿಕ ಉದ್ಯಮದ ಅಜೆಂಡಾವನ್ನು ಮುಂದೆ ಒತ್ತಿದ್ದಾರೆ.
ಈ ಆರೋಪವನ್ನು ಜಗನ್ ಮೋಹನ ರೆಡ್ಡಿ, ಆ ಪಕ್ಷದ ನಾಯಕರು ಅಲ್ಲಗೆಳೆದಿದ್ದಾರೆ. ವೈಎಸ್ಆರ್ ಕಾಂಗ್ರೆಸ್ ನ ನಾಯಕರು ಪ್ರಯೋಗಾಲಯದ ವರದಿಯ ಸತ್ಯಾಸತ್ಯತೆಯನ್ನೇ ಪ್ರಶ್ನಿಸಿದ್ದಾರೆ! ಅದು ಬಿಜೆಪಿ ಎನ್.ಡಿ.ಎ. ಸರ್ಕಾರದ ಅಡಿಯಲ್ಲಿರುವ ಕೇಂದ್ರದ ಪ್ರಯೋಗಾಲಯದ ವರದಿ, ಅದರಲ್ಲಿ ದುರುದ್ದೇಶವೇ ಇದೆ ಎಂದು ಆರೋಪಿಸಿದ್ದಾರೆ.
ವಿಷಯ ಇಲ್ಲಿ ತುಪ್ಪದ ಪೂರೈಕೆಯಲ್ಲಿ ಕಲಬೆರೆಕೆಯ ಆರೋಪ ಬಂದಿದೆ. ಹಿಂದೆ ನಂದಿನಿ ತುಪ್ಪ ದುಬಾರಿ ಎಂದು ತಮಿಳುನಾಡಿನ ಉದ್ಯಮಿಯ ತುಪ್ಪ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಅಲ್ಲಿಂದ ತೆಗೆದು ಕೊಳ್ಳಲಾಗಿತ್ತು. ಚಂದ್ರಬಾಬು ನಾಯ್ಡು ಸರ್ಕಾರ ಮತ್ತೇ ನಂದಿನಿ ತುಪ್ಪವನ್ನೇ ಬಳಸಲು ಸೂಚಿಸಿದೆ. ಮೇಲಾಗಿ ಇದರ ಎಲ್ಲಾ ವ್ಯವಹಾರಗಳು ನಡೆಯುವುದು ದೇವಸ್ಥಾನದ ಮಂಡಳಿಯ ಆಡಳಿತದಲ್ಲಿ.
ಈಗ ತನಿಖೆಗೆ ಒಳಪಡಿಸಬೇಕಾದ್ಸು ಉದ್ಯಮಿಯನ್ನು. ಹಾಗೇ ಈ ಕಂಟ್ರಾಕ್ಟ್ ವ್ಯವಹಾರದಲ್ಲಿ ಏನಾದರೂ ಭ್ರಷ್ಟಾಚಾರ ನಡೆದಿದೆಯೇ ಎಂದು ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಬೇಕು. ಇದೇ ಮುಖ್ಯ. ಅದರ ಬದಲು ರಾಜಕೀಯ ರಾಡಿ ಎಬ್ಬಿಸುವುದಾಗಲೀ, ಅದನ್ನೇ ನೆಪವಾಗಿರಿಸಿ ಧಾರ್ಮಿಕ ಭಾವನೆಗಳನ್ನು ಎತ್ತಿ ಕಟ್ಟುವುದಾಗಲೀ ಕೂಡದು. ಜನರಿಗೆ ಸತ್ಯ ತಿಳಿಯಬೇಕು. ಶುದ್ದ ವಸ್ತುಗಳನ್ನು ಬಳಸಿಕೊಂಡು ಪ್ರಸಾದ ಪೂರೈಕೆ ಆಗಬೇಕು.
ಒಂದು ಅಂಶವನ್ನು ಗಮನಿಸಬೇಕಾದ್ದು, ತೆಲುಗು ಭಾಷಿಕ ರಾಜ್ಯಗಳಾದ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಇರುವ ಆಂದ್ರ ಮತ್ತು ತೆಲಂಗಾಣಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಉತ್ಸುಕವಾಗಿದೆ. ಅದರಲ್ಲೂ ನೆಲಮೂಲದಲ್ಲಿ ಆರ್.ಎಸ್.ಎಸ್. ಇಡಿಯಾಗಿ ತನ್ನ ಪರಿವಾರವನ್ನು ಯುದ್ದೋಪಾಧಿಯಲ್ಲಿ ಕಾರ್ಯಾಚರಣೆಗೆ ಇಳಿಸಿದೆ. ಅದರ ಅಪಾಯದ ನೆರಳು ಎದ್ದು ತೋರಿಸುತ್ತಿದೆ. ಈ ಬಾರಿ ಆಂದ್ರ ವಿಧಾನಸಭೆಯಲ್ಲಿ ಸ್ಪರ್ದಿಸಿದ್ದ 10 ರಲ್ಲಿ 8 ಶಾಸಕರನ್ನು ಹೊಂದಿರುವ ಬಿಜೆಪಿ ಪಕ್ಷ ತನ್ನ ಉತ್ತಮ ಹಾಜರಿಯನ್ನು ತೋರಿಸಿದೆ. ಅದನ್ನು ಮತ್ತಷ್ಟು ವಿಸ್ತರಿಸಲು ಅತಿ ಧಾರ್ಮಿಕತೆ ಬೆಳವಣಿಗೆ ಮತ್ತು ಮತೀಯ ವಿಭಜನೆಯನ್ನು ಆಧರಿಸಿದೆ.
ತಿರುಪತಿ ಲಡ್ಡು ಪ್ರಕರಣದಲ್ಲಿ ಪ್ರತಿಕ್ರಿಯಿಸುವಾಗ ಇವೆಲ್ಲ ಸಂಗತಿಗಳನ್ನು ಜನತೆ ಗಮನದಲ್ಲಿರಿಸಬೇಕು.
ಇದನ್ನೂ ನೋಡಿ: ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಬಾಲಕ ಸಾವು – ಮುಖ್ಯಮಂತ್ರಿ ಚಂದ್ರು ಆರೋಪJanashakthi Media