ಮನುವಾದಿಗಳ ಅಧಿಕಾರ ಇರುವವರೆಗೂ ಅಸ್ಪೃಶ್ಯತೆ ಆಚರಣೆ ನಿಲ್ಲದು

ನಿತ್ಯಾನಂದಸ್ವಾಮಿ

ಅಮಾನವೀಯವಾದ ಅಸ್ಪೃಶ್ಯತಾ ಆಚರಣೆಯ ಪ್ರಕರಣವೊಂದು ಕುಷ್ಟಗಿ ತಾಲೂಕಿನ ಮಿಯಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚನ್ನದಾಸರ ಸಮುದಾಯಕ್ಕೆ ಸೇರಿದ ಎರಡು ವರ್ಷದ ಪುಟ್ಟ ಮಗುವೊಂದು ಆಟವಾಡುತ್ತಾ ಆಂಜನೇಯ ದೇವಾಲಯ ಪ್ರವೇಶಿಸಿದೆ. ಇದನ್ನು ಗಮನಿಸಿದ ಮಗುವಿನ ತಂದೆ ಒಳಗೆ ಹೋಗಿ ಮಗುವನ್ನು ಎತ್ತಿಕೊಂಡು ಬಂದಿದ್ದರು. ಇದನ್ನು ನೋಡಿದ ದೇವಸ್ಥಾನದ ಅರ್ಚಕ ಮತ್ತು ಗ್ರಾಮದ ಕೆಲ ಸವರ್ಣೀಯರು ಆಕ್ಷೇಪ ಎತ್ತಿದರು. ನಂತರ ಸಭೆ ಸೇರಿದ ಮುಖಂಡರು ಮಗುವಿನ ಪಾಲಕರಿಗೆ 25 ಸಾವಿರ ರೂ. ದಂಡ ವಿಧಿಸಿದರು. ದೇವಸ್ಥಾನ ಅಪವಿತ್ರಗೊಂಡಿದೆ ಎಂದೂ, ಶುದ್ದೀಕರಣಕ್ಕೆ ಹೋಮ ಹವನ ಮಾಡಿಸಬೇಕಾಗುವುದೆಂದೂ, ಅದಕ್ಕಾಗಿ ಬೇಕಾಗುವ ಹಣವನ್ನು ಸಹ ಮಗುವಿನ ಪಾಲಕರು ನೀಡಬೇಕೆಂದು ದೇವಸ್ಥಾನದ ಆರ್ಚಕರು ಸೂಚಿಸಿದರು.

ಮುಗ್ಧ ಮಗುವಿನ ಪಾಲಕರಿಗೆ ದಂಡ ವಿಧಿಸಿದ ಘಟನೆ ನಡೆದದ್ದು ಸೆಪ್ಟೆಂಬರ್‌ 4ರಂದು ಚನ್ನದಾಸರ ಸಮುದಾಯದವರು ದೂರು ನೀಡಿರಲಿಲ್ಲ. ತಮ್ಮದು ಕಡಿಮೆ ಜನಸಂಖ್ಯೆ ಹೊಂದಿರುವ ಸಮಾಜ. ದೂರು ನೀಡಿದರೆ ತಮಗೆ ತೊಂದರೆಯಾದಿತು ಎಂಬ ಭಯದಿಂದ ಅವರು ದೂರು ನೀಡಿರಲಿಲ್ಲ. ಆದರೆ ವಿಷಯ ತಿಳಿದ ವಿವಿಧ ಪ್ರಗತಿಪರ ಸಂಘಟನೆಗಳು ಈ ಅಸ್ಪೃಶ್ಯತಾ ಆಚರಣೆಯನ್ನು ಖಂಡಿಸಿ ಪ್ರತಿಭಟಿಸತೊಡಗಿದ ನಂತರ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅತ್ತ ಹೆಜ್ಜೆ ಹಾಕಿದರು. ಕಾಟಾಚಾರದ ಶಾಂತಿ ಸಭೆಯನ್ನು ನಡೆಸಿದರು. ಈ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಗ್ರಾಮದ ಮುಖಂಡರಿಗೆ ಎಚ್ಚರಿಕೆ ನೀಡಿ ದೂರು ದಾಖಲಿಸಿಕೊಳ್ಳದೆ ಹಿಂತಿರುಗಿದರು. ಕೊಪ್ಪಳ ಜಿಲ್ಲಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿದ ನಂತರ ಪ್ರಕರಣಕ್ಕೆ ಬಿಸಿ ತಟ್ಟುವಂತಾಯಿತು. ಯಾರೂ ದೂರು ನೀಡದಿದ್ದರೂ ಸರ್ಕಾರದ ವತಿಯಿಂದಲೇ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಅವರು ಘೋಷಣೆ ಮಾಡಿದರು. ನಂತರ ಸಮಾಜ ಕಲ್ಯಾಣ ಅಧಿಕಾರಿ ನೀಡಿದ ದೂರಿನ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಲಾಗಿದೆ.

ಮಿಯಾಪುರದ ಈ ಘಟನೆ ನಮ್ಮ ಸಮಾಜದಲ್ಲಿ ಅಸ್ಪೃಶ್ಯತೆ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎಂಬುದನ್ನು ನಮ್ಮ ಮನಸ್ಸುಗಳ ಎದುರು ನಿಲ್ಲಿಸುತ್ತದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮನುವಾದಿಗಳು ಅಧಿಕಾರಕ್ಕೆ ಬಂದ ದಿನದಿಂದ ದೇಶದಲ್ಲಿ ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಪುಟ್ಟ ಮಕ್ಕಳನ್ನು ಸಹ ತಾರತಮ್ಯಕ್ಕೆ ಒಳಪಡಿಸಲಾಗುತ್ತಿದೆ.

ಈ ಪ್ರಕರಣದಲ್ಲಿ ಪೊಲೀಸರ ಪಾತ್ರ ಬಹುತೇಕವಾಗಿ ಇತರ ಅಸ್ಪೃಶ್ಯತಾ ಪ್ರಕರಣದಲ್ಲಿ ನಾವು ಕಾಣುವಂತೆಯೇ ಇತ್ತು. ಪೊಲೀಸರು ದಿನಗಟ್ಟಲೆ ಆ ಕಡೆ ತಲೆಹಾಕಲೇ ಇಲ್ಲ. ಪ್ರಕರಣವನ್ನು ದಾಖಲು ಮಾಡಲು ಅವರು ವಿಳಂಬ ಮಾಡಿದ್ದು ಅಪರಾಧಿಗಳಿಗೆ ಬೆಂಬಲ ವ್ಯಕ್ತಪಡಿಸಿದಂತಾಗಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರ ಧೋರಣೆ ಇದೇ ರೀತಿ ಆಕ್ಷೆಪಾರ್ಹವಾಗಿರುತ್ತದೆ. ದೂರುಗಳನ್ನು ದಾಖಲು ಮಾಡಿಕೊಳ್ಳುವುದಿಲ್ಲ. ಎಫ್‌ಐಆರ್ ದಾಖಲು ಮಾಡಿದರೂ ಅಪರಾಧಿಗಳಿಗೆ ಜಾಮೀನು ಪಡೆದು ಪಾರಾಗಲು ಅವಕಾಶ ಕಲ್ಪಿಸಲಾಗುತ್ತದೆ. ಶಾಂತಿ ಸಭೆ, ರಾಜಿ ಪಂಚಾಯ್ತಿ ಎಂಬ ಹೆಸರಿನಲ್ಲಿ ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ. ಹೀಗಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವುದೇ ಅಪರೂಪ. ಸದರಿ ಪ್ರಕರಣದಲ್ಲಿ ತಮ್ಮ ಕರ್ತವ್ಯ ಪಾಲನೆಯಲ್ಲಿ ವಿಫಲರಾದ ಪೊಲೀಸರ ವಿರುದ್ಧ ಕಾನೂನು ಕ್ರಮ ಜರಗಿಸುವುದು ಅಗತ್ಯವಿದೆ.

ಅಸ್ಪೃಶ್ಯತೆ ಆಚರಿಸಿದ ತಪ್ಪಿಗೆ ಕೇವಲ 5 ಮಂದಿಯನ್ನು ಬಂಧಿಸಲಾಗಿದೆ ಎನ್ನಲಾಗುತ್ತದೆ. ಜಾತಿ ನಿಂದನೆಯಲ್ಲಿ ಪಾಲ್ಗೊಂಡ ಎಲ್ಲರ ವಿರುದ್ಧವೂ ಕ್ರಮ ಜರುಗಿಸಬೇಕು. ದೇವಸ್ಥಾನದ ಆರ್ಚಕನನ್ನು ಕೂಡಲೇ ವೃತ್ತಿಯಿಂದ ವಜಾ ಮಾಡಿ ಬೇರೆಯವರನ್ನು ನೇಮಿಸಬೇಕು. ಮಗುವಿನ ಪಾಲಕರಿಗೆ ಸೂಕ್ತ ರಕ್ಷಣೆಯನ್ನೂ, ಸಮಾಜ ಕಲ್ಯಾಣ ಇಲಾಖೆಯಿಂದ ಗರಿಷ್ಠ ಪರಿಹಾರವನ್ನು ನೀಡಬೇಕು. ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ದೊರೆಯದಂತೆ ಪರ್ಯಾಯ ಎಫ್‌ಐಆರ್ ದಾಖಲಿಸಬೇಕು. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ನೀಡಿದಂತಾಗಲು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು.

Donate Janashakthi Media

Leave a Reply

Your email address will not be published. Required fields are marked *