ಮನುವಾದಿ ಮಾಧ್ಯಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಬ್ಯಾನರ್ ಹಾಕಿದ ಅಂಬೇಡ್ಕರ್ ಯುವಕ ಸಂಘ

ಬೆಂಗಳೂರು: ಗಣರಾಜ್ಯೋತ್ಸವ ಆಚರಣೆ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿದ ಆರೋಪಕ್ಕೆ ಗುರಿಯಾಗಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಗೌಡಪಾಟೀಲ ವಜಾಕ್ಕೆ ಒತ್ತಾಯಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾರಂಭದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.

ಶನಿವಾರ(ಫೆ.19) ನಗರದ ಫ್ರೀಡಂ ಪಾರ್ಕ್‍ನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿ ಅಪಮಾನಗೈದ ಘಟನೆಯೂ ನಮ್ಮ ಕಣ್ಣು ತೆರೆಸಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.

ಆದರೆ, ಕನ್ನಡ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡದ್ದನ್ನು ಖಂಡಿಸಿ ಮನುವಾದಿ ಮಾಧ್ಯಮಗಳ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಲಿತರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲವೊಂದು ಸುದ್ದಿ ಮಾಧ್ಯಮಗಳ ವಿರುದ್ಧ ಸಾರ್ವಜನಿಕವಾಗಿ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಆಕ್ರೋಶ ಇದೀಗ ಹಳ್ಳಿಗಳಲ್ಲಿ ಕೂಡ ಕಂಡುಬಂದಿದೆ. ದಲಿತ ವಿರೋಧಿ ಮನುವಾದಿ ಕನ್ನಡ ನ್ಯೂಸ್ ಮಾಧ್ಯಮಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಾರ್ವಜನಿಕವಾಗಿ ಬ್ಯಾನರ್ ಅಳವಡಿಸಿದ ಘಟನೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ನಡೆದಿದೆ.

‘ದಲಿತ ಪರ ಹೋರಾಟಗಳನ್ನು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಮಾಡದ ದಲಿತ ವಿರೋಧಿ ಕನ್ನಡ ಸುದ್ದಿ ಮಾಧ್ಯಮಗಳಿಗೆ ಶ್ರದ್ಧಾಂಜಲಿ,  ದಲಿತರೆಲ್ಲರೂ ಕನ್ನಡದ ಸುದ್ದಿ ಮಾಧ್ಯಮಗಳನ್ನು ಬಹಿಷ್ಕರಿಸಿ’ ಎಂದು ಬರೆಯಲಾಗಿದೆ.

ಸತ್ತೇಗಾಲ ಪರಿಸರದ ಡಾ. ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಸದಸ್ಯರು ಈ ಬ್ಯಾನರ್ ಅಳವಡಿಸಿದ್ದು, ದಲಿತರೆಲ್ಲರೂ ಮನುವಾದಿ ಮಾಧ್ಯಮಗಳನ್ನು ಬಹಿಷ್ಕರಿಸಬೇಕೆಂದು ಯುವಕ ಸಂಘ ಕರೆ ನೀಡಿದೆ.

ನಮ್ಮನ್ನು ನೀವು ಗೌರವಿಸಲಿಲ್ಲವೆಂದರೆ ನಿಮ್ಮನ್ನು ನಾವೇಕೆ ಗೌರವಿಸಬೇಕು? ನಮ್ಮ ಮನೆಯೊಳಗೇಕೆ ನಿಮ್ಮನ್ನು ಏಕೆ ಬಿಟ್ಟುಕೊಳ್ಳಬೇಕು? ಎಂದು ಬರಹಗಾರ, ಸಾಹಿತಿ ರಘೋತ್ತಮ ಹೊ.ಬ ಟ್ವೀಟ್ ಮಾಡಿದ್ದಾರೆ. ಜೊತೆಗೆ ಹಲವು ದಲಿತ ಹೋರಾಟಗಾರರು ಮನುವಾದಿ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮನುವಾದಿ ಮಾಧ್ಯಮಗಳನ್ನು ಬಹಿಷ್ಕಾರ ಹಾಕಿ ಎಂದು ಸಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *