ಅಹಮದಾಬಾದ್: 1993 ಮತ್ತು 2014 ರ ನಡುವೆ ಶೌಚ ಗುಂಡಿ ಸ್ವಚ್ಛತೆ (ಮ್ಯಾನುಯಲ್ ಸ್ಕ್ಯಾವೆಂಜಿಂಗ್) ವೇಳೆ ಸಾವನ್ನಪ್ಪಿದ 16 ನೈರ್ಮಲ್ಯ ಕಾರ್ಮಿಕರ ಕುಟುಂಬಕ್ಕೆ ಪರಿಹಾರವನ್ನು ಪಾವತಿಸದಿರುವ ಬಗ್ಗೆ ಗುಜರಾತ್ ಹೈಕೋರ್ಟ್ ಬುಧವಾರ ರಾಜ್ಯದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರಿಗೆ ಪರಿಹಾರ ಯಾಕೆ ನೀಡಿಲ್ಲ ಎಂದು ಅಫಿಡವಿಟ್‌ನಲ್ಲಿ ಕಾರಣವನ್ನು ವಿವರಿಸಲು ನಿರ್ದೇಶಿಸಿದೆ.
2013 ರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ವಿರೋಧಿ ಕಾನೂನನ್ನು ಅಳವಡಿಸಿಕೊಳ್ಳಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ. ಸರ್ಕಾರವು ಈ ಪದ್ಧತಿಯನ್ನು ತೊಡೆದುಹಾಕುವ ಸ್ಥಿತಿಯಲ್ಲಿದೆಯೇ ಅಥವಾ ಅದಕ್ಕಾಗಿ ನೈರ್ಮಲ್ಯ ಕಾರ್ಮಿಕರ ಸಹಾಯವನ್ನು ತೆಗೆದುಕೊಳ್ಳುತ್ತಿದೆಯೇ ಎಂಬುದನ್ನು ತಿಳಿಸಲು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಾಯೆ ಅವರ ನ್ಯಾಯಾಲಯವು ಸರ್ಕಾರದೊಂದಿಗೆ ಕೇಳಿದೆ.
ಇದನ್ನೂ ಓದಿ: ಕೊರೊನಾದ ಉಪ ರೂಪಾಂತರಿ JN.1 ಅಲೆ ಮುಗಿದಿದೆ; ಭಯ ಬೇಡ ಎಂದ ತಜ್ಞರು!
ಮ್ಯಾನುಯಲ್ ಸ್ಕ್ಯಾವೆಂಜರ್ ನಿಷೇಧ ಮತ್ತು ಆ ಉದ್ಯೋಗ ಮಾಡುತ್ತಿದ್ದವರ ಪುನರ್ವಸತಿ ಕಾಯಿದೆ-2013 ಅನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಅಹಮದಾಬಾದ್ ಮೂಲದ ಎನ್‌ಜಿಒ ಮಾನವ್ ಗರಿಮಾ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಮೃತ 16 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಕುಟುಂಬಕ್ಕೆ ಇನ್ನೂ ಪರಿಹಾರವನ್ನು ನೀಡಿಲ್ಲ ಎಂದು ವಿಚಾರಣೆ ವೇಳೆ ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ವೇಳೆ ನ್ಯಾಯಾಲಯವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕೆಲವರಿಗೆ ಪರಿಹಾರ ನೀಡಿ ಮತ್ತೆ ಕೆಲವರಿಗೆ ಅದರಿಂದ ಹೊರಗಡೆ ಇಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅರ್ಜಿದಾರರು ಸಲ್ಲಿಸಿರುವ ಮೃತರ ಪಟ್ಟಿಯಲ್ಲಿ ಹೆಸರಿರುವ 16 ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡದಿರುವ ಕಾರಣಗಳನ್ನು ದಾಖಲಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ನಗರಾಭಿವೃದ್ಧಿ ಮತ್ತು ನಗರ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಕೇಂದ್ರೀಯ ಉಪ್ಪು ಮತ್ತು ಸಾಗರ ರಾಸಾಯನಿಕಗಳ ಸಂಶೋಧನಾ ಸಂಸ್ಥೆಯ (CSMCRI) ಆವರಣದಲ್ಲಿನ ಒಳಚರಂಡಿ ತೊಟ್ಟಿಗೆ ಪ್ರವೇಶಿಸಿ ಗಂಭೀರ ಗಾಯಗೊಂಡ ನೈರ್ಮಲ್ಯ ಕಾರ್ಮಿಕರೊಬ್ಬರು ಉಸಿರುಕಟ್ಟಿ ಸಾವನ್ನಪ್ಪಿದ್ದರು. ಈ ವೇಳೆ ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದರು. ಗುಜರಾತಿನ ಭಾವನಗರ ನಗರದಲ್ಲಿ ಇತ್ತೀಚೆಗೆ ನಡೆದ ಈ ಘಟನೆಯನ್ನು ನ್ಯಾಯಾಲಯವು ಗಮನಿಸಿದೆ. ಈ ಘಟನೆ ಕುರಿತು ವರದಿ ಸಲ್ಲಿಸುವಂತೆ ಕೂಡಾ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.
ಇದನ್ನೂ ಓದಿ: ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನಿನ ಮೇಲೆ ಸರಕಾರದ ಅಕ್ರಮ ದಾಳಿ
“ಇದು ಕಣ್ಣಾಮುಚ್ಚಾಲೆಯಲ್ಲ, ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಸಂತ್ರಸ್ತರ ಪಟ್ಟಿ ಇದ್ದಿದ್ದರೆ, ನೀವು ಅವರಿಗೆ ಏಕೆ ಪರಿಹಾರ ನೀಡಿಲ್ಲ ಎಂಬುದಕ್ಕೆ ಕಾರಣಗಳ ವಿವರಣೆಯನ್ನು ನೀಡಬೇಕು. ಶೂನ್ಯ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನೀತಿಯನ್ನು ಅಳವಡಿಸಿಕೊಳ್ಳಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನೀವು ಅಗತ್ಯವಿರುವ ಯಂತ್ರಗಳನ್ನು ಹೊಂದಿದ್ದೀರಾ? ನೀವು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಅನ್ನು ತೊಡೆದುಹಾಕುವ ಸ್ಥಿತಿಯಲ್ಲಿದ್ದೀರಾ ಅಥವಾ ನೀವು ಇನ್ನೂ ಈ ಜನರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೀರಾ? ನಮಗೆ ಸ್ಪಷ್ಟ ಉತ್ತರ ಬೇಕಾಗಿದೆ” ಎಂದು ಅವರು ಕೇಳಿದ್ದಾರೆ.
2016 ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಲ್ಲಿಸಿದ ಸಿವಿಲ್ ಅರ್ಜಿಯಲ್ಲಿ ಅರ್ಜಿದಾರರು 2013 ರ ಕಾನೂನಿನ ನಿಬಂಧನೆಗಳನ್ನು ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ. ಮ್ಯಾನುವಲ್ ಸ್ಕ್ಯಾವೆಂಜಿಂಗ್ ನಿಷೇಧಿಸುವ ಮತ್ತು ಅದರ ಸರಿಯಾದ ಅನುಷ್ಠಾನ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. ಎನ್‌ಜಿಒ ಸಲ್ಲಿಸಿರುವ ಪಿಐಎಲ್‌ನಲ್ಲಿ ಮೃತಪಟ್ಟ ಪ್ರತಿಯೊಬ್ಬ ಮ್ಯಾನ್‌ಹೋಲ್ ಕಾರ್ಮಿಕರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ 2016 ರಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
2023 ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ನಿಂಗಾಗಿ ಸಾವು ಮತ್ತು ಅಂಗವಿಕಲತೆ ಆದರೆ ಆ ವೇಳೆ ಪರಿಹಾರ ಮೊತ್ತವಾಗಿ 30 ಲಕ್ಷ ರೂ. ನೀಡಬೇಕು ಎಂದು ಹೇಳಿದೆ.
ವಿಡಿಯೊ ನೋಡಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರ ನೆನೆಯೋಣ Janashakthi Media