ಬೆಂಗಳೂರು: ತೆರಿಗೆ ಪಾವತಿಸದ ವಿರುದ್ಧ ಬಿಬಿಎಂಪಿ ಕಾರ್ಯಾಚರಣೆ ಮುಂದುವರಿದಿದ್ದು, ಪ್ರತಿಷ್ಠಿತ ಮಂತ್ರಿ ಮಾಲ್ ಮುಖ್ಯದ್ವಾರಕ್ಕೆ ಬೀಗ ಜಡಿದ ನಂತರ ತೆರಿಗೆ ಹಣ ವಸೂಲಿ ಆಗಿದೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಬಗ್ಗೆ ಹಲವು ಬಾರಿ ನೋಟಿಸ್ ನೀಡಿ ಕಟ್ಟುವಂತೆ ಬಿಬಿಎಂಪಿ ಮಲ್ಲೇಶ್ವರಂ ನಲ್ಲಿರುವಂತ ಮಂತ್ರಿ ಮಾಲ್ ಗೆ ಸೂಚಿಸಲಾಗಿತ್ತು.
27 ಕೋಟಿ ರೂ. ತೆರಿಗೆ ಬಾಕಿ: 27 ಕೋಟಿ 22 ಲಕ್ಷ 6 ಸಾವಿರದ 302 ರೂಪಾಯಿ ಆಸ್ತಿ ತೆರಿಗೆ ಕಟ್ಟದೆ ಮಂತ್ರಿ ಮಾಲ್ ಮಾಲೀಕರು ಬಾಕಿ ಉಳಿಸಿಕೊಂಡಿದ್ದರು. ಆಸ್ತಿ ತೆರಿಗೆ ಪಾವತಿಸುವಂತೆ ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಲವು ಬಾರಿ ನೊಟೀಸ್ ನೀಡಿತ್ತು. ಆದರೆ ಮಾಲ್ ಮಾಲೀಕರು ಇದಕ್ಕೆ ಸ್ಪಂದಿಸಿರಲಿಲ್ಲ. ಈ ನಿಟ್ಟಿನಲ್ಲಿ ಇಂದು ಕಠಿಣ ಕ್ರಮಕ್ಕೆ ಮುಂದಾದ ಬಿಬಿಎಂಪಿ ಮಾಲ್ ನ ಮುಖ್ಯ ದ್ವಾರಕ್ಕೆ ಬೀಗ ಜಡಿದಿದೆ.
ಇಂದು ಬೆಳಗ್ಗೆ ಸಿಬ್ಬಂದಿಯೊಂದಿಗೆ ಮಂತ್ರಿ ಮಾಲ್ ಗೆ ತೆರಳಿದ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಮುಖ್ಯ ದ್ವಾರಕ್ಕೆ ಬೀಗ ಹಾಕಿದ್ದಾರೆ. ಬೆಳ್ಳಂಬೆಳಗ್ಗೆ ಮಾಲ್ ಗೆ ಹೋದ ಗ್ರಾಹಕರು ವಾಪಸ್ ಆಗಿದ್ದಾರೆ. ಬಳಿಕ ಮಂತ್ರಿ ಮಾಲ್ ಮಾಲೀಕರು ₹ 5 ಕೋಟಿಯ ಡಿ.ಡಿ ಪಾವತಿಸಿದರು. ಆ ಬಳಿಕವಷ್ಟೇ ಮಾಲ್‌ನ ಮಳಿಗೆಗಳು ವಹಿವಾಟು ನಡೆಸಲು ಬಿಬಿಎಂಪಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು.
ಚೆಕ್ ಬೌನ್ಸ್ : ಈ ಹಿಂದೆ ಆಸ್ತಿ ತೆರಿಗೆ ಪಾವತಿಗೆ ಮಾಲ್ ಆಡಳಿತ ಮಂಡಳಿ ಬಿಬಿಎಂಪಿಗೆ ಚೆಕ್ ನೀಡಿತ್ತು. ಆದರೆ ಅದು ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚೆಕ್ ಬೌನ್ಸ್ ಕೇಸು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
2017ರ ಬಳಿಕ ಮಂತ್ರಿ ಮಾಲ್ ಇಲ್ಲಿಯವರೆಗೆ ಆಸ್ತಿ ತೆರಿಗೆಯನ್ನು ಪಾವತಿಸಿರಲಿಲ್ಲ. ಇದರಿಂದಾಗಿ ಬಡ್ಡಿ ಸಹಿತ 37 ಕೋಟಿಯಷ್ಟು ಆಸ್ತಿ ತೆರಿಗೆ ಬಾಕಿ ಉಳಿದಿತ್ತು. ಹೀಗಾಗಿ ಬಾಕಿ ಆಸ್ತಿ ತೆರಿಗೆ ಪಾವತಿಸುವಂತೆ ಇಂದು ಬಿಬಿಎಂಪಿ ಅಧಿಕಾರಿಗಳು ಮಂತ್ರಿಮಾಲ್ ಗೆ ಬೀಗ ಹಾಕಿದ ಬಳಿಕ ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ 5 ಕೋಟಿ ಆಸ್ತಿ ತೆರಿಗೆ ಪಾವತಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಾಕಿದ್ದ ಬೀಗವನ್ನು ಬಿಬಿಎಂಪಿ ತೆಗೆದಿದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಆಸ್ತಿ ತೆರಿಗೆ ಪಾವತಿ ಮಾಡದಿದ್ದರೆ ಮತ್ತೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.