ಕೆ.ಎಸ್.ವಿಮಲ
ಈ ಬಜೆಟ್ ಈಗ ಸಾಯುತ್ತಿರುವವರಿಗೆ ನೀರೂ ಕೊಡಲು ತಯಾರಿಲ್ಲದೇ 25 ವರ್ಷಗಳ ನಂತರದ ಮುನ್ನೋಟದ ತುಪ್ಪ ಮೂಗಿಗೆ ಸವರಿ ಅಮೃತ ಕಾಲವೆಂದು ಕರೆದಿದೆ. ಅವರ ಈ ಸುಳ್ಳು ಇದು ಅನೃತಕಾಲವೆಂದು ಸಾಬೀತು ಪಡಿಸಿದೆ.
ಸಾಮಾನ್ಯ ಜ್ಞಾನದಂತೆ ಆಯವ್ಯಯ ಎಂದರೆ ಮುಂದಿನ ಒಂದು ವರ್ಷದಲ್ಲಿ ಸರಕಾರವೊಂದು ನಿರೀಕ್ಷಿಸುವ ಆದಾಯ ಮತ್ತು ನಿಭಾಯಿಸಬೇಕಾದ ಖರ್ಚುಗಳು. ಖರ್ಚುಗಳನ್ನು ವಿವಿಧ ವಲಯ, ವಿಭಾಗಗಳಿಗೆ ಆದ್ಯತೆಯ ಮೇರೆಗೆ ಹಂಚುವ ಮತ್ತು ಹಾಗೆ ಹಂಚಲು ಬೇಕಾದ ಆದಾಯ ಅಥವಾ ರೆವಿನ್ಯೂ ಸಂಗ್ರಹಕ್ಕೆ ಮಾರ್ಗೋಪಾಯಗಳನ್ನು ಸೂಚಿಸುವ ಒಂದು ಸಾಂವಿಧಾನಿಕ ಕ್ರಿಯೆ. ಇತ್ತೀಚಿನ ವರ್ಷಗಳಲ್ಲಿ ಇದೊಂದು ಕಣ್ಕಟ್ಟಿನಂತೆ ನಡೆದು ಹೋಗುತ್ತಿದೆ. ಹಾಗಿದ್ದೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಜೆಟ್ ತನ್ನದೇ ಮಹತ್ವ ಹೊಂದಿದೆ.
ಕೋವಿಡ್ ಸಂಕಷ್ಟವನ್ನು ಮರೆತ ಅರ್ಥಮಂತ್ರಿಗಳು:
ಕಳೆದ ಎರಡು ವರ್ಷಗಳಿಂದ ದೇಶದ ದುಡಿದು ತಿನ್ನುವ ಜನ ಕೋವಿಡ್ ಸಂಕಷ್ಟದಲ್ಲಿ ಕಂಗಾಲಾಗಿದ್ದಾರೆ. ನಿರುದ್ಯೋಗ, ಬಡತನ ದಾರಿದ್ರ್ಯಗಳು ಈ ಮೊದಲೇ ಜನರನ್ನು ಸಂಕಷ್ಟಕ್ಕೆ ದೂಡಿದ್ದು ಗಾಯದ ಮೇಲೆ ಉಪ್ಪು ಸುರಿದಂತೆ ಕೋವಿಡ್ ಬಂದೆರಗಿತು. ಆದರೆ ಕಳೆದ ವರ್ಷವಾಗಲೀ ಈ ವರ್ಷವಾಗಲೀ ಕೇಂದ್ರ ಒಕ್ಕೂಟ ಸರಕಾರಕ್ಕೆ ಇದರ ಬಗ್ಗೆ ಕನಿಷ್ಟ ಕಾಳಜಿ ತೋರಿಸುವ ಮನಸ್ಸೂ ಇಲ್ಲ ಎಂಬುದನ್ನು ತಮ್ಮ ಪ್ರತಿ ನಡವಳಿಕೆಯಲ್ಲಿ ತೋರಿಸಿಕೊಟ್ಟರು. ಈ ಬಾರಿಯ ಬಜೆಟ್ ಮತ್ತೊಮ್ಮೆ ಅದನ್ನು ಸಾಬೀತು ಪಡಿಸಿದೆ.
ಕೋವಿಡ್ ಸಂಕಟದ ಕಾಲದಲ್ಲಿ ದೇಶ:
ಮೂಲಸೌಕರ್ಯಗಳ ಅಭಿವೃದ್ದಿ, ಪ್ರಧಾನಮಂತ್ರಿ ಗತಿಶಕ್ತಿ ಎಂಬಿತ್ಯಾದಿ ನಾಮಕರಣ ಮಾಡಿ ಜನರ ಬದುಕುವ ಶಕ್ತಿಗೆ ಬೇಕಾದ ಪೂರಕ ಸೌಲಭ್ಯಗಳನ್ನು ವಂಚಿಸಿದ ಬಜೆಟ್ ಇದು ಎಂದು ಬಹುತೇಕ ಜನಮುಖೀ ಆಲೋಚನೆ ಮಾಡುವ ಎಲ್ಲರೂ ಹೇಳುತ್ತಿದ್ದಾರೆ. ಉದಾಹರಣೆಗೆ… ಕಳೆದ ಸಾಲಿನ ಬಜೆಟ್ ನ ಪರಿಷ್ಕೃತ ಮೊತ್ತ ಜಿ.ಡಿ.ಪಿ.ಯ 16% ಇದ್ದುದನ್ನು ಈ ಬಾರಿಯ ಅಂದಾಜು ವೆಚ್ಚವನ್ನು ಮಂಡಿಸುವಾಗ 15.2%ಕ್ಕೆ ಇಳಿಸಲಾಗಿದೆ. ಸರಕಾರ ತನ್ನ ಅಂದಾಜು ವೆಚ್ಚದ ಪ್ರಸ್ತಾಪ ಮಂಡಿಸುವಾಗ ಕಳೆದ ವರ್ಷದ ಪರಿಷ್ಕೃತ ವೆಚ್ಚದ ಆಧಾರದಲ್ಲಿ ಮತ್ತು ದೇಶವಾಸಿಗಳ ಬದುಕಿನ ಅಗತ್ಯ ಮತ್ತು ವಾಸ್ತವ ಸನ್ನಿವೇಶವನ್ನು ಪರಿಗಣಿಸಿ ಅಂದಾಜು ಮಾಡಬೇಕಿತ್ತಲ್ಲವೇ?
ಹಸಿದವರಿಗೆ ಅನ್ನ ನೀಡದ ಬಜೆಟ್:
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ದಯನೀಯ ಸ್ಥಿತಿಗೆ ಕುಸಿದಿದೆ. ಅದನ್ನು ಸರಿಪಡಿಸಬೇಕೆಂದರೆ ಜನರ ಜೀವನಾಗತ್ಯ ವಸ್ತುಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ಪೂರೈಸಬೇಕಲ್ಲದೇ ಅನ್ಯ ಮಾರ್ಗವೇ ಇಲ್ಲ. ಆದರೆ ಕಾಲ್ಪನಿಕ ಅಮೃತಕಾಲದಲ್ಲಿ ವಿಹರಿಸುತ್ತಿರುವ ಸರಕಾರ ಆಹಾರ ಪದಾರ್ಥಗಳ ಮೇಲಿನ ಸಬ್ಸಿಡಿಯನ್ನು 16% ಕಡಿತಗೊಳಿಸಿದೆ.
ದೇಶದ ಜನರ ಸ್ಥಿತಿ ಕೋವಿಡ್ ದುರವಸ್ಥೆಯಿಂದ ಇನ್ನೂ ಉತ್ತಮಗೊಂಡಿಲ್ಲ. ಸಣ್ಣ ಉದ್ಯಮಗಳು ನೆಲ ಕಚ್ಚಿದ್ದು ಅದನ್ನೇ ಅವಲಂಭಿಸಿರುವ ಲಕ್ಷಾಂತರ ಜನ ಬೀದಿಪಾಲಾಗಿದ್ದಾರೆ. ಈ ಅವಧಿಯಲ್ಲಿ ಜನರ ಕನಿಷ್ಟ ಆಹಾರದ ಅಗತ್ಯವನ್ನು ಪೂರೈಸುವ ಮಾನವೀಯತೆಯನ್ನೂ ಮರೆತ ವಿತ್ತ ಮಂತ್ರಿಗಳು ಈ ಹಿಂದಿನ ಬಜೆಟ್ ಗೆ ಹೋಲಿಸಿದರೆ 80,000 ಕೋಟಿ ಕಡಿತ ಮಾಡಿದ್ದಾರೆ. ನಿಜವೆಂದರೆ ಬಡವರಿಗೆ ಕನಿಷ್ಟ ಗಂಜಿ ಒದಗಿಸುವಲ್ಲಿ ಸಹಕಾರಿಯಾಗಿದ್ದ ಉಚಿತ ಪಡಿತರ ವಿತರಣೆಯ ವಿಭಾಗವನ್ನು ವಿಸ್ತರಿಸಿ ಅದಕ್ಕಿನ್ನಷ್ಟು ಅಗತ್ಯ ವಸ್ತುಗಳನ್ನು ಸೇರಿಸಿ ಪೂರೈಸಲು ಹೆಚ್ಚುವರಿ ಹಣ ನೀಡಬೇಕಾಗಿತ್ತು. ಈಗ ಕೊಟ್ಟಿರುವ 2.06 ಲಕ್ಷ ಕೋಟಿಗಳು ಆಹಾರ ಸುರಕ್ಷಾ ಕಾನೂನಿನ ಅಡಿಯಲ್ಲಿ ಬರುವ ಕುಟುಂಬಗಳ ಅಗತ್ಯಕ್ಕಷ್ಟೇ ಸಾಕಾಗಲಿದೆ. ಎಂದರೆ ಮಾರ್ಚಿ 2022ಕ್ಕೆ ಅಂತ್ಯಗೊಳ್ಳುವ ಗರೀಬ್ ಕಲ್ಯಾಣ ಅನ್ನ ಯೋಜನೆ ಮತ್ತೆ ಮುಂದುವರೆಯಲಾರದು. ಇದು ಸಚಿವೆ ನಿರ್ಮಲಾ ಸೀತಾರಾಮನ್ ರವರ ಅಮೃತಕಾಲ.
ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನು:
ಇದು ಕೇವಲ ಮರುವಲಸಿಗ ಅಥವಾ ಹಳ್ಳಿಗಾಡಿನ ಜನರಿಗೆ ಬದುಕು ಕೊಟ್ಟಿದ್ದು ಮಾತ್ರವಲ್ಲ ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸ್ವತ್ತುಗಳ ನಿರ್ಮಾಣಕ್ಕೆ ಸಹಾಯವಾಯಿತು. ಯಾವುದೇ ಜೀವಪರ ಸರಕಾರವಿದ್ದರೆ ಅದು ಈ ಯೋಜನೆಯನ್ನು ಬಜೆಟ್ ಮೂಲಕ ಇನ್ನಷ್ಟು ಬಲಪಡಿಸಿ ಗ್ರಾಮಭಾರತದ ನಿಜವಾದ ಅಭಿವೃದ್ದಿಗೆ ತನ್ನ ಕೊಡುಗೆ ನೀಡುತ್ತಿತ್ತು. ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದು ನಗರಗಳ ಬಡವರ ಬದುಕಿಗೆ ಬಲ ಕೊಡುತ್ತಿತ್ತು. ಮತ್ತು ನಗರಾಭಿವೃದ್ದಿಯ ಕೆಲಸಗಳನ್ನು, ತ್ವರಿತಗೊಳಿಸಲು ಉಪಯೋಗಿಸುತ್ತಿತ್ತು. ಆದರೆ ಈ ಸರಕಾರ ಕಳೆದ ಸಾಲಿಗಿಂತ 25,000 ಕೋಟಿ ಕಡಿತ ಮಾಡಿದೆ. ಕಳೆದ ಬಾರಿ ಬಜೆಟ್ ನಲ್ಲಿ 78,000 ಕೋಟಿ ಇಟ್ಟು ನಂತರದ ಅಗತ್ಯಕ್ಕಾಗಿ ಮತ್ತೆ 25,000 ಕೋಟಿಯನ್ನು ಬಿಡುಗಡೆ ಮಾಡಿ, ಒಟ್ಟಾರೆಯಾಗಿ 93,000 ಕೋಟಿ ನೀಡಲಾಗಿತ್ತು. ಕೆಲವು ವಿಶ್ಲೇಷಕರ ಪ್ರಕಾರ ಇದು 1.1 ಲಕ್ಷ ಕೋಟಿಯನ್ನು ಮೀರಿತ್ತು ಎನ್ನಲಾಗಿದೆ. ಅಲ್ಲದೆಯೇ ಈ ಮೊತ್ತದಲ್ಲಿ ಕಳೆದ ವರ್ಷದ ಸಾಮಗ್ರಿಗಳ ಬಾಕಿ ಮತ್ತು ಕೂಲಿ ಪಾವತಿಯ ಬಾಕಿಗಳಿಗೇ ಸಾಕಷ್ಟು ಹಣ ವೆಚ್ಚವಾಗಲಿದೆ. ಸುಮಾರು 21,000 ಕೋಟಿ ಹಿಂದಿನ ವರ್ಷದ ಬಾಕಿ ಪಾವತಿ ಮಾಡಲಿದೆ ಎನ್ನುತ್ತವೆ ದಾಖಲೆಗಳು. ಇದಕ್ಕೆ ಕಳೆದ ವರ್ಷದ ಬಜೆಟ್ ನಲ್ಲಿ ಕೂಡ ಅಗತ್ಯಕ್ಕಿಂತ 40% ಕಡಿತ ಮಾಡಿದ್ದೇ ಕಾರಣ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ಬಹುತೇಕ ಕೆಲಸ ಮಾಡುತ್ತಿರುವವರು ಮಹಿಳೆಯರು. ಮತ್ತು ಕುಟುಂಬದ ಆದಾಯ ಸೊರಗಿದ ತಕ್ಷಣ ಅದರ ನೇರ ಪರಿಣಾಮವನ್ನು ಮೊದಲು ಎದುರಿಸುವವರೂ ಮಹಿಳೆಯರು. ವಿತ್ತ ಮಂತ್ರಿಣಿಗೆ ಈ ಯಾವ ವಾಸ್ತವದ ಅರಿವೇ ಇಲ್ಲದೇ ಅಮೃತಕಾಲವೆಂದು ವರ್ಣಿಸಿಕೊಳ್ಳುತ್ತಿರುವುದೇ ಅವರೆಷ್ಟು ಜೀವವಿರೋಧಿಗಳು ಎಂಬುದನ್ನು ತೋರಿಸುತ್ತದೆ.
ಕುಸಿದ ರಾಷ್ಟ್ರೀಯ ಸಾಮಾಜಿಕ ಸುರಕ್ಷಾ ಯೋಜನೆಗಳ ವೆಚ್ಚ:
ಎಸ್.ಸಿ./ಎಸ್.ಟಿ., ಅಲ್ಪಸಂಖ್ಯಾತರು ಮತ್ತು ಅಂಚಿನ ಸಮುದಾಯಗಳ ಕಲ್ಯಾಣ ಯೋಜನೆಗಳಿಗೆ 2021-22ರಲ್ಲಿ ಕೊಟ್ಟ ಮೊತ್ತವನ್ನೂ ಕಡಿತಗೊಳಿಸಲಾಗಿದೆ. ಕಳೆದ ಬಾರಿಯ ಪರಿಷ್ಕೃತ ಮೊತ್ತವಾಗಿದ್ದ 3.2% ನಿಂದ 2.5%ಗೆ ಕಡಿತ ಮಾಡಲಾಗಿದೆ.
ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಪಿ.ಎಂ.ಪೋಷಣ್ ಅಭಿಯಾನ್ ಎಂದು ಮರು ನಾಮಕರಣ ಮಾಡಿದ್ದಷ್ಟೇ ಲಾಭವೇ ಹೊರತೂ ಅದಕ್ಕೆ ಅಗತ್ಯವಾದ ಪೂರಕ ಬಜೆಟ್ ಹೆಚ್ಚಳ ಮಾಡಿಲ್ಲ. ಹಾಗೆಯೇ ಸಕ್ಷಮ ಪೋಷಣ್2.0 ನಾಮಾಂಕಿತ ಯೋಜನೆ ಕೂಡ ಎಲ್ಲಿದೆಯೋ ಅಲ್ಲೇ ಉಳಿದಿದೆ.
ಹೊಸ ಹೊಸ ನಾಮಕರಣ ಮಾಡುವ ಈ ಯಾವ ಯೋಜನೆಗಳೂ ಅದರ ಫಲಾನುಭವಿಗಳು ಅಲ್ಲಿ ಶ್ರಮ ವಹಿಸಿ ದುಡಿಯುವ ಅಂಗನವಾಡಿ ನೌಕರರ ಏಳ್ಗೆಗಾಗಲಿ, ಅಥವಾ ಅಂಗನವಾಡಿ ಮಕ್ಕಳಿಗೆ ಒದಗಿಸುವ ಆಹಾರದ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸಲಾಗಲಿ ಬಳಕೆಯಾಗುತ್ತಿಲ್ಲ. ಬದಲಿಗೆ 2 ಲಕ್ಷ ಹೈ ಟೆಕ್ ಅಂಗನವಾಡಿಗಳನ್ನು ಮಾಡುವರಂತೆ. ಹೊಟ್ಟೆಗೆ ಹಿಟ್ಟಿಲ್ಲದವರ ಜುಟ್ಟಿಗೆ ಮಲ್ಲಿಗೆ ಮುಡಿಸಿ ಅಣಕಿಸುವ ಈ ಪರಿಯನ್ನೇ ಅಮೃತಕಾಲವೆನ್ನೋಣವೇ?
ನೆಲೆ ಕಳೆದುಕೊಳ್ಳುತ್ತಿರುವ ಜೆಂಡರ್ ಬಜೆಟ್:
ಹಲವು ವರ್ಷಗಳ ನಿರಂತರ ಒತ್ತಡದ ಮೂಲಕ ಜಾರಿಗೆ ಬಂದ ಜೆಂಡರ್ ಬಜೆಟ್ ಎನ್ನುವ ಕಲ್ಪನೆಗೂ ಕೂಡ ಕೊಡಲಿ ಪೆಟ್ಟು ನೀಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಜೆಂಡರ್ ಬಜೆಟಿಂಗ್ ನ ಪರಿಷ್ಕೃತ ಮೊತ್ತವು ಜಿ.ಡಿ.ಪಿ.ಯ 0.71% ಆಗಿತ್ತು. ಅದರ ಆಧಾರದಲ್ಲಿ ಇನ್ನಷ್ಟು ಹೆಚ್ಚು ಮಾಡುವ ಬದಲು ಅದನ್ನು 0.66% ಗೆ ಇಳಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯಕ್ಕೆ 2022-23 ರ ಒಟ್ಟು ವೆಚ್ಚದ 0.10% ಒಳಗೇ ಸೀಮಿತಗೊಳಿಸಲಾಗಿದೆ. ಹೆಚ್ಚುತ್ತಿರುವ ಬಡತನ, ಉದ್ಯೋಗ ಕಡಿತ ಮತ್ತು ಆದಾಯ ಕುಸಿತದಿಂದ ನೇರ ಬಾಧೆಗೆ ಒಳಗಾಗುವ ಮಹಿಳೆಯರ ಕಲ್ಯಾಣಕ್ಕೆ ಮಹಿಳಾ ವಿತ್ತ ಮಂತ್ರಿಗಳಿಗೆ ಗಮನವಿದೆ ಎಂದು ಭಾವಿಸೋಣವೇ? ಮಿಷನ್ ಶಕ್ತಿ, ಸಾಮರ್ಥ್ಯ, ವಾತ್ಸಲ್ಯ ಮುಂತಾದ ಹೆಸರಿನ ಕಣ್ಕಟ್ಟುಗಳು ಪೂರಕ ಹಣಕಾಸಿನ ನೆರವಿಲ್ಲದೆಯೇ ಕಾರ್ಯನಿರ್ವಹಿಸಲಾರವು. ಮಹಿಳೆಯರ ಮೇಲೆ ನಡೆಯುತ್ತಿರುವ ಅನಿಯಂತ್ರಿತ ದೌರ್ಜನ್ಯಗಳೆದುರು, ಆದಾಯ ಕುಸಿತದಿಂದ ಜನರ ಆಹಾರ ಬಳಕೆಯಲ್ಲಿ ಗಣನೀಯ ಕುಸಿತವಾಗಿದ್ದು ರಕ್ತ ಹೀನತೆ, ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ ಕೇವಲ ಮಂತ್ರಕ್ಕೆ ಮಾವಿನಕಾಯಿ ಉದುರಿಸುವ ಮಂತ್ರಿಣಿ ಇದು ಯಾರಿಗೆ ಅಮೃತಕಾಲವಮ್ಮಾ?
ಜಾಹೀರಾತಿಗೆ ಲಕ್ಷಾಂತರ ಜನರ ತೆರಿಗೆ ಹಣ ಲೂಟಿ:
ಮಹಿಳೆಯರ ಬದುಕು ಬಂಗಾರ ಮಾಡುವ ಉಜ್ವಲಾ ಯೋಜನೆಯ ಪ್ರಚಾರಕ್ಕೆ ಜನರ ತೆರಿಗೆ ಹಣವನ್ನು ಪೋಲು ಮಾಡಲಾಯಿತು. ಆದರೀಗ ಅದೇ ಎಲ್.ಪಿ.ಜಿ. ಸಿಲೆಂಡರ್ ಸಬ್ಸಿಡಿಯನ್ನು ಯಾವ ದಯಾ ದಾಕ್ಷಿಣ್ಯ ಇಲ್ಲದೆಯೇ ಕಡಿತ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸುಮಾರು 200 ರೂಪಾಯಿಗಳಷ್ಟು ಏರಿಸಲಾಯಿತು. ಗ್ಯಾಸ್ ಸಬ್ಸಿಡಿಯನ್ನು ಈಗ ಮತ್ತಷ್ಟು ಕಡಿಮೆ ಮಾಡುವ ಪ್ರಸ್ತಾಪವಿದೆ. ಎಂದರೆ ಕ್ರಮೇಣ ಗ್ಯಾಸ್ ಸಬ್ಸಿಡಿಯನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಮನೆಯ ಬಜೆಟ್ ಹೊಂದಿಸಿಕೊಳ್ಳುವ ಗೃಹಿಣಿಗೆ ಇದು ಸುಡು ಬೆಂಕಿಯಾಗಿ ಸುಡಲಿದೆ.
ಆನ್‌ಲೈನ್ ಶಿಕ್ಷಣವೆಂಬ ಹಿಂಸೆ:
ಸಾಂಕ್ರಾಮಿಕದ ಕಾರಣದಿಂದ, ಅದನ್ನು ನಿಭಾಯಿಸುವಲ್ಲಿ ವೈಜ್ಞಾನಿಕ ಮತ್ತು ಸಮತೋಲಿತ ಮಾರ್ಗಗಳನ್ನು ಹುಡುಕದೇ, ಸಕಾಲಕ್ಕೆ ಸಮರ್ಪಕ ಕಾರ್ಯವಿಧಾನಗಳನ್ನೂ ಅಳವಡಿಸದೇ ತೆಗೆದುಕೊಂಡ ಕ್ರಮಗಳಿಂದಾಗಿ ಬಹಳ ಅವ್ಯವಸ್ಥೆಗೆ ಒಳಗಾಗಿದ್ದರಲ್ಲಿ ಶಿಕ್ಷಣ ಕ್ಷೇತ್ರವೂ ಕೂಡ ಒಂದು. ಅಲ್ಲಿ ಆನ್ ಲೈನ್ ತರಗತಿಗಳು ಎಂಬ ಒಂದು ಹೊಸ ಆವಿಷ್ಕಾರ ಅನಿವಾರ್ಯವೂ ಇದ್ದಿರಬಹುದು. ಆದರೆ ಅಲ್ಲಿ ಬಹುತೇಕ ಹುಡುಗಿಯರು ಬಹಳಷ್ಟು ತೊಂದರೆಗೆ ಒಳಗಾದರು. ಎರಡು ವರ್ಷಗಳ ಅನುಭವದ ನಂತರದ ಈ ಬಜೆಟ್ ಸ್ವಲ್ಪವಾದರೂ ಮುನ್ನೋಟವಿದ್ದ ಸರಕಾರವಾಗಿದ್ದಲ್ಲಿ ದೇಶದ ಭವಿಷ್ಯವಾದ ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯಕ್ಕಾಗಿ ಸಮರ್ಪಕ ಶಿಕ್ಷಣ ವ್ಯವಸ್ಥೆಗಾಗಿ ಹಿಂದಿಗಿಂತ ಹೆಚ್ಚು ಅನುದಾನ ಮೂಲಸೌಕರ್ಯಗಳಿಗಾಗಿ ಮೀಸಲಿಟ್ಟು ವಿಶೇಷ ಕ್ರಮಗಳನ್ನು ಜಾರಿಗೆ ತರಬಹುದಿತ್ತು. ಆದರೆ ಅದರ ಬದಲು ಮಹಿಳಾ ವಿರೋಧಿ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಜೊತೆಗೆ ಇನ್ನಷ್ಟು ಆನ್ ಲೈನ್ ಮತ್ತು ವರ್ಚುಯಲ್ ವೇದಿಕೆಗಳಿಗೆ ಪ್ರಾಶಸ್ತ್ಯ ನೀಡಿದೆ. ಟಿವಿ ಮೂಲಕ ಶಿಕ್ಷಣ, ಇ ವಿದ್ಯಾ ಯೋಜನೆ ಮತ್ತು ಡಿಜಿಟಲ್ ಯುನಿವರ್ಸಿಟಿಗಳಿಗೆ ಹಣ ಕಾಯ್ದಿರಿಸಿದೆ. ಶಿಕ್ಷಣಕ್ಕಾಗಿ ಮೀಸಲಿರಿಸುವ ಹಣವನ್ನು ವರ್ಷದಿಂದ ವರ್ಷಕ್ಕೇ ಏರಿಸುವ ಬದಲು ಅಗತ್ಯಕ್ಕಿಂತ ಅತೀ ಕಡಿಮೆ ಕೊಡಲಾಗುತ್ತಿರುವುದೇ ಆಕ್ಷೇಪಾರ್ಹ, ಅದರಲ್ಲಿ ಈಗ ವರ್ಚುಯಲ್ ವೇದಿಕೆಗೆ ಆದ್ಯತೆ ಕೊಡುವ ಮೂಲಕ ಹುಡುಗಿಯರ ಶಿಕ್ಷಣದ ಅವಕಾಶವನ್ನು ಕಸಿಯುವುದೇ ಆಗಿದೆ. ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಷಿಪ್ ಮುಂತಾಗಿ ಪ್ರೋತ್ಸಾಹಕರ ಕ್ರಮಗಳ ಬದಲು ಆನ್‌ಲೈನ್ ಶಿಕ್ಷಣದ ಅಗತ್ಯಗಳಿಗೆ ಸೌಲಭ್ಯ ಪೂರೈಕೆಗೆ ಗಮನ ಹರಿಯಲಿದೆ.
ಉಳ್ಳವರಿಗೆ ಪಾಯಸ-ದುಡಿದು ದೇಶ ಕಟ್ಟುವವರಿಗೆ ವಿಷ:
ಎಲ್ಲ ಕಾರ್ಪೊರೇಟ್ ತೆರಿಗೆದಾರರಿಗೆ 3% ತೆರಿಗೆ ರಿಯಾಯಿತಿ ಘೋಷಣೆಯಾಗಿದೆ. ಆದರೆ ಅದೇ ವೇಳೆಗೆ ಮಧ್ಯಮ ವರ್ಗದ ನೌಕರರ ತೆರಿಗೆ ವಿಧಾನದಲ್ಲಿ ದುಡಿಯುವ ಮಹಿಳೆಯರ ತೆರಿಗೆಯಲ್ಲಿ ಯಾವುದೇ ರಿಯಾಯಿತಿ ಕೊಟ್ಟಿಲ್ಲ. ಇದಲ್ಲದೇ ಕಳೆದ ಎರಡು ವರ್ಷಗಳಲ್ಲಿ ಮೇಲ್ ಸ್ತರದ ಶ್ರೀಮಂತರ ಆದಾಯದಲ್ಲಿ ಮಿತಿಮೀರಿ ಹೆಚ್ಚಳವಾಗಿದೆ. ಕೇವಲ 10% ಅತಿ ಶ್ರೀಮಂತರು 75% ಸಂಪತ್ತಿನ ಒಡೆತನ ಹೊಂದಿದ್ದಾರೆ. ಕೆಳಗಿನ 60% ಜನರು 5% ಗಿಂತ ಕಡಿಮೆ ಸಂಪತ್ತನ್ನು ಹಂಚಿಕೊಂಡಿದ್ದಾರೆ. ಈ ಅಸಮಾನತೆಯ ಪ್ರಮಾಣವನ್ನು ಕಡಿಮೆ ಮಾಡಲು ಸಂಪತ್ತಿನ ಮೇಲೆ ತೆರಿಗೆ ಹಾಕುವ ಮತ್ತು ಅದರ ಮೂಲಕ ದುಡಿದು ಬದುಕುವ, ದೇಶ ಕಟ್ಟುವ ಜನರಿಗೆ ಒಂದಿಷ್ಟಾದರೂ ಸಹನೀಯ ಬದುಕು ಕೊಡಬಹುದಿತ್ತು. ದುಡಿಯುವ ಜನ ಸಮುದಾಯ ಮತ್ತವರ ಕುಟುಂಬಗಳು ಜನಸಂಖ್ಯೆಯ ಸುಮಾರು 80% ಇದ್ದು ಅವರ ಮೇಲೆ ಪರೋಕ್ಷ ತೆರಿಗೆಯ ಹೊರೆ ಹೊರಿಸಲಾಗಿದೆ.
ಹೆಚ್ಚಿದ ನಿರುದ್ಯೋಗ ನೆಲ ಕಚ್ಚಿದ ಬದುಕು:
ನಿರುದ್ಯೋಗದ ಪ್ರಮಾಣ ದೇಶದಲ್ಲಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಮಹಿಳಾ ನಿರುದ್ಯೋಗ ಪ್ರಮಾಣ ನಗರ ಪ್ರದೇಶಗಳಲ್ಲಿ 19.9%ಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 12.8% ಗೆ ಡಿಸೆಂಬರ್ 2021ರಲ್ಲಿ ದಾಖಲೆಯಾಗಿದೆ. ಸಾಲದ ಶೂಲಕ್ಕೆ ಈ ವಿಭಾಗ ಸಿಕ್ಕಿ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಹಸಿವಿನಿಂದ ನರಳುತ್ತಿರುವ ಕುಟುಂಬಗಳ ಆಕ್ರಂದನಕ್ಕೆ ಕಿವಿಗೊಡದ ಸರಕಾರ ಈ ಕಾಲವನ್ನು ಅಮೃತಕಾಲವೆಂದು ಕರೆದುಕೊಳ್ಳುತ್ತಿದೆ.
ಗ್ರಾಮೀಣ ಅಭಿವೃದ್ದಿಯ ಹೆಸರು ರೈತರಿಗೆ ಕೆಸರು:
ಈ ಬಜೆಟ್ ರೈತ ಮತ್ತು ಕೃಷಿ ವಿರೋಧಿ ಧೋರಣೆಯನ್ನೇ ಪ್ರಕಟಪಡಿಸಿದೆ. ಹೋರಾಟದ ಕಣದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಅಮೃತಕಾಲ ಒದಗಿ ಬರಲಿಲ್ಲ. ಗ್ರಾಮೀಣಾಭಿವೃದ್ದಿಯ ಪಾಲಿನಲ್ಲಿಯೂ 5.59% ನಿಂದ 5.23% ಗೆ ಇಳಿಸಲಾಗಿದೆ. ಕನಿಷ್ಟ ಬೆಂಬಲ ಬೆಲೆಗೊಂದು ಕಾನೂನಿನ ಬೇಡಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದಲ್ಲದೇ ಸಂಸತ್ತಿನಲ್ಲಿ ದಾರಿ ತಪ್ಪಿಸುವ ರೀತಿಯ ಅಂಕಿ ಸಂಕಿಗಳನ್ನು ಮುಂದಿಟ್ಟಿದ್ದಾರೆ. ಈ ಕ್ರಮಗಳು ಒಟ್ಟು ಗ್ರಾಮೀಣಾಭಿವೃದ್ದಿಯನ್ನು ಕುಂಠಿತಗೊಳಿಸುತ್ತದೆ. ಜೊತೆಗೇ ಗ್ರಾಮೀಣ ಭಾಗದ ಮಹಿಳೆಯರನ್ನು ಇನ್ನೂ ಶೋಚನೀಯ ಸ್ಥಿತಿಗೆ ತಳ್ಳುತ್ತದೆ. ಭಾರತದ ಆಹಾರ ನಿಗಮಕ್ಕೆ ಕೊಡುವ ಅನುದಾನದಲ್ಲಿಯೂ ಕಡಿತ ಮಾಡಲಾಗಿದೆ. ಅಲ್ಲದೆಯೇ ಗೊಬ್ಬರದ ಸಬ್ಸಿಡಿಯನ್ನೂ ಕಡಿತ ಮಾಡಲಾಗಿದೆ. ಫಸಲ್ ಭೀಮಾ ಯೋಜನೆಯಲ್ಲಿಯೂ 500 ಕೋಟಿ ಕಡಿತ ಮಾಡಿದ್ದು ಪಿ.ಎಂ.ಕಿಸಾನ್ ಯೋಜನೆಯಲ್ಲಿಯೂ ಮೊದಲಿಗಿಂತ 9% ಕಡಿಮೆ ಮಾಡಲಾಗಿದೆ. ಆಹಾರ ದಾಸ್ತಾನು ಮತ್ತು ಗೋಡೌನುಗಳಿಗೆ 28% ಕಡಿತ ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಆರ್ಥಿಕ ಸಮೀಕ್ಷೆ ಬಹಳ ಸ್ಪಷ್ಟವಾಗಿ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯ 10,218 ರೂಪಾಯಿಗಳು ಎಂದು ಹೇಳಿದೆ. ಆದರೆ ಇದಾವುದನ್ನೂ ಪರಿಗಣನೆಗೇ ತೆಗೆದುಕೊಳ್ಳದ ಸರಕಾರ ಈಗ ಸಾಯುತ್ತಿರುವವರಿಗೆ ನೀರೂ ಕೊಡಲು ತಯಾರಿಲ್ಲದೇ 25 ವರ್ಷಗಳ ನಂತರದ ಮುನ್ನೋಟದ ತುಪ್ಪ ಮೂಗಿಗೆ ಸವರಿ ಅಮೃತ ಕಾಲವೆಂದು ಕರೆದಿದೆ. ಅವರ ಈ ಸುಳ್ಳು ಇದು ಅನೃತಕಾಲವೆಂದು ಸಾಬೀತು ಪಡಿಸಿದೆ.