ಚಿಕ್ಕಮಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ (ಬಿ.ವಿಜಯ್ ಕುಮಾರ್) ಅವರ ಅಂತ್ಯಕ್ರಿಯೆಯು ಸ್ವಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ನೆರವೇರಿತು.
ಸ್ನೇಹಿತ ರಘು ಅವರ ತೋಟದಲ್ಲಿ ಸಂಚಾರಿ ವಿಜಯ್ ಅವರನ್ನು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು. ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರೀಗಳು ಅಂತಿಮ ವಿಧಿವಿಧಾನ ನೆರವೇರಿಸಿದರು. ವಿಜಯ್ ಅವರ ಸಹೋದರರು ಅಂತಿಮ ವಿಧಿ ವಿಧಾನ ನೆರವೇರಿಸಿದರು. ಸಮಾಧಿ ಜಾಗಕ್ಕೆ ಬಿಲ್ವಪತ್ರೆ ವಿಭೂತಿ ಹಾಕಿ ಅಂತಿಮ ಪೂಜೆ ಸಲ್ಲಿಸಿದರು.
ಇದನ್ನು ಓದಿ: ಸಂಚಾರ ನಿಲ್ಲಿಸಿದ ಸ್ಯಾಂಡಲ್ವುಡ್ ನಟ ವಿಜಯ್ – ಸಾವಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್
ಇದಕ್ಕೂ ಮೊದಲು ರಾಜ್ಯ ಸರ್ಕಾರದ ವತಿಯಿಂದ ಸಮಾಧಿ ಸ್ಥಳದಲ್ಲಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅಂತಿಮ ವಿದಾಯ ಹೇಳಿದರು.
ಪಾರ್ಥಿವ ಶರೀರ ಮಧ್ಯಾಹ್ನ 2.30ರ ಹೊತ್ತಿಗೆ ಗ್ರಾಮಕ್ಕೆ ತಲುಪಿತು. ಸಮಾಧಿ ಸ್ಥಳದಲ್ಲೇ ಸ್ಥಳೀಯ ಸ್ನೇಹಿತರು ಮತ್ತು ಬಂಧು ಮಿತ್ರರು ಸೇರಿದಂತೆ ಕೋವಿಡ್ ನಿರ್ಬಂಧದ ಹೊರತಾಗಿಯೂ ನೂರಾರು ಮಂದಿ ಜಮಾಯಿಸಿದ್ದರು ಮತ್ತು ವಿಜಯ್ ಅವರ ಅಂತಿಮ ದರ್ಶನ ಪಡೆದರು.
ಸಚಿವ ಜೆ.ಸಿ. ಮಾಧುಸ್ವಾಮಿ, ಮಾಜಿ ಶಾಸಕ ವೈಎಸ್ವಿ ದತ್ತ ಸರ್ಕಾರದ ಪರವಾಗಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ನಟ ವಿಜಯ್ ಸಾಕುತಾಯಿ ಇಂದಿರಮ್ಮ ಕಣ್ಣೀರು ಹಾಕಿದರು. ವಿಜಯ್ ಅಂಗಾಂಗ ದಾನದಿಂದ ಆರೇಳು ಜನರಿಗೆ ನೆರವು ಸಿಕ್ಕಿದೆ. ನನ್ನ ಮಗ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಟ ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಹಲವು ಗಣ್ಯರು, ಚಿತ್ರರಂಗದವರೂ ಒಳಗೊಂಡು ಹಲವು ರಂಗಕರ್ಮಿಗಳು ಮತ್ತು ಅಭಿಮಾನಿಗಳು ಸೇರಿದ್ದರು.
38 ವರ್ಷದ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡ ಚಿತ್ರರಂಗದ ಹಲವು ಮಂದಿ ಕಣ್ಣೀರು ಹಾಕಿದರು.