ನವದೆಹಲಿ: ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ರೋಸ್ ಅವೆನ್ಯೂ ಕೋರ್ಟ್ ಮಾರ್ಚ್ 20 ರವರೆಗೆ ವಿಸ್ತರಿಸಿದೆ. ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದಿದ್ದ ಅವಧಿ ಮುಗಿದಿದ್ದು, ಇದೀಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಇಂದು(ಮಾರ್ಚ್ 06) ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ, ಸಿಬಿಐ ವಕೀಲರು ಸದ್ಯಕ್ಕೆ ಸಿಸೋಡಿಯಾ ಅವರನ್ನು ಸಿಬಿಐ ವಶಕ್ಕೆ ಕೋರುವುದಿಲ್ಲ ಎಂದು ತಿಳಿಸಿದರು. ಸಿಸೋಡಿಯಾ ಪರ ವಕೀಲರು ನ್ಯಾಯಾಲಯದಲ್ಲ ವಾದಿಸಿದರು.
ನ್ಯಾಯಂಗ ಬಂಧನದ ಅವಧಿಯಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಕನ್ನಡಕ ನೋಟ್ಬುಕ್, ಪೆನ್ನು ಮತ್ತು ಭಗವದ್ಗೀತೆಯನ್ನು ಕೊಂಡೊಯ್ಯಲು ಕೋರ್ಟ್ ಅನುಮತಿ ನೀಡಿದೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧವನ್ನು ಹೊಂದಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ.
ಸಿಬಿಐ (ಕೇಂದ್ರಾ ತನಿಖಾ ಸಂಸ್ಥೆ) ಫೆಬ್ರವರಿ 26ರಂದು ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತ್ತು. ಬಂಧನದ ಬಳಿಕ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂಪುಟಕ್ಕೆ ರಾಜೀನಾಮೆ ನೀಡಿದರು. ಕಳೆದ ನ್ಯಾಯಲಯ ವಿಚಾರಣೆಯಲ್ಲಿ ಸಿಸೋಡಿಯಾ ಅವರು ಸರಿಯಾಗಿ ತನಿಖೆಗೆ ಸ್ಪಂದಿಸುತ್ತಿಲ್ಲ ಎಂದು ಸಿಬಿಐ ದೂರಿತ್ತು. ಮತ್ತೊಂದೆಡೆ ಸುದೀರ್ಘ ಗಂಟೆಗಳ ಕಾಲ ಪುನರಾವರ್ತಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಸಿಸೋಡಿಯಾ ಅವರು ಪ್ರತಿಯಾಗಿ ದೂರಿದ್ದರು.