ಬೇರೆಡೆಯೂ ನಡೆದಿದೆ ಎಂದು ಮಣಿಪುರದ ಅಭೂತಪೂರ್ವ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ – ಸುಪ್ರಿಂ

ಮಣಿಪುರದ ಮೇ 4ರ ಭೀಕರ ಘಟನೆ ಒಂದು ವೀಡಿಯೋ ಮೂಲಕ ಬಯಲಿಗೆ ಬಂದಾಗ ಅದನ್ನು ತಾನಾಗಿಯೇ ಗಮನ ತಗೊಂಡು ಸರಕಾರ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ತಾನೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದಿದ್ದ  ಸುಪ್ರಿಂಕೋರ್ಟ್ ಜುಲೈ 31ರಂದು ಇದರ ವಿಚಾರಣೆ  ವೇಳೆಯಲ್ಲಿ ಕೇಂದ್ರ ಮತ್ತು ಮಣಿಪುರ  ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ  ಮತ್ತು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ , ಹಲ್ಲೆ ಮಾಡಿದ 14 ದಿನಗಳ ನಂತರವೇ ಶೂನ್ಯ ಎಫ್‌ಐಆರ್ ಅನ್ನು ದಾಖಲಿಸಿದ್ದೇಕೆ ಎಂದು ಮಣಿಪುರ ಪೊಲೀಸರನ್ನು ಕೇಳಿದೆ. ಇದೊಂದು  ಪ್ರತ್ಯೇಕ ಘಟನೆಯಲ್ಲ , ಒಂದು ವ್ಯವಸ್ಥಿತ ಹಿಂಸಾಚಾರದ ಭಾಗವಾಗಿದೆ. ಇದನ್ನು ಬೇರೆಡೆಯ ಹಿಂಸಾಚಾರವನ್ನು ತೋರಿಸಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಟಿಪ್ಪಣಿ ಮಾಡಿರುವುದಾಗಿ ವರದಿಯಾಗಿದೆ.

ಮೇ 4 ರದ್ದು “ಭಯಾನಕ” ಘಟನೆ ಎಂದು ಕರೆದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಮಣಿಪುರ ಹಿಂಸಾಚಾರದ ಬಗ್ಗೆ ಸಲ್ಲಿಸಲಾದ ಹಲವು ಮನವಿಗಳು ಮತ್ತು ಇಬ್ಬರು ಸಂತ್ರಸ್ತ ಕುಕಿ ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸುತ್ತ  ಎಫ್‌ಐಆರ್‌ಗಳನ್ನು ದಾಖಲಿಸಿದ ನಂತರ ತೆಗೆದುಕೊಂಡ ಕ್ರಮಗಳ ಬಗ್ಗೆ ಸರಕಾರದಿಂದ ಮಾಹಿತಿಯನ್ನು ಕೋರಿದೆ ಮತ್ತು ” ಮಹಿಳೆಯರನ್ನು ಗಲಭೆಕೋರ ಜನಜಂಗುಳಿಗೇ ಹಸ್ತಾಂತರಿಸಿದಂತಿರುವ” ಕಾರಣದಿಂದಾಗಿ ತಾನು  ಈ ವಿಷಯವನ್ನು ರಾಜ್ಯ ಪೊಲೀಸರು ತನಿಖೆ ಮಾಡಬೇಕೆಂದು ಬಯಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಈ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿದಾರರ ವಕೀಲ ಬನ್ಸುರಿ  ಸ್ವರಾಜ್ ಅವರು ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ ಎಂದು ಎತ್ತಿ ತೋರಿಸಲು ಹೋದಾಗ ಮುಖ್ಯ ನ್ಯಾಯಾಧೀಶರು ನಾವು ಕೋಮು ಮತ್ತು ಸಂಕುಚಿತ ಭಾವನೆಯ  ಹಿಂಸಾಚಾರದಲ್ಲಿ  ಮಹಿಳೆಯರ ವಿರುದ್ಧ ಅಭೂತಪೂರ್ವ ಪ್ರಮಾಣದ ಹಿಂಸೆಯ ಪ್ರಕರಣವನ್ನು ಬಗ್ಗೆ ಪರಿಶೀಲಿಸುತ್ತಿದ್ದೇವೆ. ಮಹಿಳೆಯ ವಿರುದ್ಧ ಮತ್ತು ಬಂಗಾಳದಲ್ಲಿಯೂ
ಅಪರಾಧಗಳು ನಡೆಯುತ್ತಿರಬಹುದು. ಆದರೆ ಮಣಿಪುರದ ಪ್ರಕರಣ ಭಿನ್ನವಾಗಿದೆ. ಅಲ್ಲಿ ನಡೆದಿರುವುದನ್ನು ಬೇರೆಡೆಯೂ ಅದು-ಇದು   ನಡೆದಿದೆ  ಎಂದು   ಹೇಳುವ  ಮೂಲಕ ಸಮರ್ಥಿಸಲಾಗುವುದಿಲ್ಲ  ”ಎಂದು ಸಿಜೆಐ ಚಂದ್ರಚೂಡ್ ಖಾರವಾಗಿ ಉತ್ತರಿಸಿದರು ಎಂದು ವರದಿಯಾಗಿದೆ.

ಈ ಘೋರ ಘಟನೆಯ ವೀಡಿಯೋ ವೈರಲ್‍ ಆದಾಗ ಬಿಜೆಪಿಯ ಹಲವು ಮುಖಂಡರು ಇದೇ ತರ್ಕ ಹೂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಪಶ್ಚಿಮ ಬಂಗಾಳ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಕೇರಳದಲ್ಲಿ ನಿದರ್ಶನಗಳಿವೆ, ನ್ಯಾಯಾಲಯವು ಮಣಿಪುರ ಮಾತ್ರವಲ್ಲ, ಭಾರತದ ಎಲ್ಲಾ ಹೆಣ್ಣುಮಕ್ಕಳನ್ನ  ರಕ್ಷಿಸಬೇಕು ಎಂದು ಸ್ವರಾಜ್ ಆಗ್ರಹಿಸಿದಾಗ, ಮುಖ್ಯ ನ್ಯಾಯಾಧೀಶರು ಭಾರತದ ಎಲ್ಲಾ ಹೆಣ್ಣುಮಕ್ಕಳನ್ನು ರಕ್ಷಿಸಿ ಅಥವಾ ಯಾರನ್ನೂ ರಕ್ಷಿಸಬೇಡಿ ಎನ್ನುತ್ತಿದ್ದೀರಾ?” ಎಂದು ಖಾರವಾಗಿ ಪ್ರಶ್ನಿಸಿದರು.

ಘಟನೆ ನಡೆದದ್ದು  ಮೇ 4 ರಂದು ಮತ್ತು ಶೂನ್ಯ ಎಫ್‌ಐಆರ್ ಅನ್ನು ಮೇ 18 ರಂದಷ್ಟೇ ದಾಖಲಿಸಲಾಗಿದೆ.  ಎಫ್‌ಐಆರ್ ದಾಖಲಿಸಲು ಪೊಲೀಸರು 14 ದಿನಗಳನ್ನು ಏಕೆ ತೆಗೆದುಕೊಂಡರು? ಮೇ 4 ರಿಂದ ಮೇ 18 ರವರೆಗೆ ಪೊಲೀಸರು ಏನು ಮಾಡುತ್ತಿದ್ದರು? ಮೇ 4ರಂದೇ ಎಫ್‍ಐಆರ್‍ ದಾಖಲಿಸಲು ಪೋಲೀಸರಿಗೆ ಅಡ್ಡಿಯಾದ ಸಂಗತಿಯೇನು ಎಂದು ಪೀಠ ಮಣಿಪುರ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿತು.

ಎಷ್ಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮುಖ್ಯ ನ್ಯಾಯಾಧೀಶರು ಕೇಳಿದಾಗ,  ನಿರ್ದಿಷ್ಟ ಠಾಣೆಯಲ್ಲಿ ಸುಮಾರು 20 ಮತ್ತು ರಾಜ್ಯದಲ್ಲಿ 6,000 ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಮೆಹ್ತಾ ಹೇಳಿದರು. ಮುಂದುವರಿದು ಅವರು ಇಂತಹ ಘಟನೆ ನಡೆದಿರುವುದು ಸ್ಥಳೀಯ ಪೊಲೀಸರಿಗೆ ತಿಳಿದಿಲ್ಲವೇ? ಎಫ್‌ಐಆರ್ ಅನ್ನು ಒಂದು ತಿಂಗಳ ನಂತರ ಜೂನ್ 20 ರಂದು ಮ್ಯಾಜಿಸ್ಟ್ರೇಟ್‌ಗೆ ಏಕೆ ವರ್ಗಾಯಿಸಲಾಯಿತು ಎಂದೂ ಕೇಳಿದರು.

“ಸುಮಾರು 6,000 ಎಫ್‌ಐಆರ್‌ಗಳಿವೆ ಎಂದು ನೀವು ಹೇಳಿದ್ದೀರಿ. ಇವುಗಳಲ್ಲಿ ಮಹಿಳೆಯರ ಮೇಲೆ ಎಸಗಿದ  ಅಪರಾಧಗಳೆಷ್ಟು, ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ಮನೆಗಳನ್ನು ಸುಡುವಂತಹ ಇತರ ಗಂಭೀರ ಅಪರಾಧಗಳೆಷ್ಟು? ದೇಹದ ವಿರುದ್ಧದ ಅಪರಾಧಗಳು, ಆಸ್ತಿಗಳ ವಿರುದ್ಧದ ಅಪರಾಧಗಳು, ಪೂಜಾ ಸ್ಥಳಗಳ ವಿರುದ್ಧದ ಅಪರಾಧಗಳೆಷ್ಟು?”ಎಂದು ವಿವರಗಳನ್ನು ಕೇಳಿದ ನ್ಯಾಯಪೀಠ ವೀಡಿಯೊಗೆ ಸಂಬಂಧಿಸಿದಂತೆ, “ಇದು ಮಹಿಳೆಯರ ಮೇಲಿನ ದೌರ್ಜನ್ಯದ ಏಕೈಕ  ಘಟನೆಯೇ? ಇಂತಹ ಎಷ್ಟು ಎಫ್‌ಐಆರ್‌ಗಳಿವೆ?” ಎಂದೂ ಕೇಳಿರುವುದಾಗಿ ತಿಳಿದು ಬಂದಿದೆ.

ಎಫ್‌ಐಆರ್‌ಗಳ ಸಂಖ್ಯೆ ಇತ್ಯಾದಿಗಳ ಬಗ್ಗೆ ತಮ್ಮ ಬಳಿ ನಿರ್ದಿಷ್ಟ ಸೂಚನೆಗಳಿಲ್ಲ ಎಂದು ಮೆಹ್ತಾ ಉತ್ತರಿಸಿದಾಗ, ಸಿಜೆಐ ಆಶ್ಚರ್ಯ ವ್ಯಕ್ತಪಡಿಸಿದರು, ಇವೆಲ್ಲ ಮಾಧ್ಯಮಗಳಲ್ಲಿ ಇರುವ ಸಂಗತಿಗಳು. ಮಣಿಪುರ ರಾಜ್ಯ  ವಾಸ್ತವಾಂಶಗಳನ್ನು ಹೊಂದಿಲ್ಲದಿರುವುದು ನನಗೆ ಆಶ್ಚರ್ಯವಾಗಿದೆ” ಎಂದರು.

ಇದೊಂದು ಪ್ರತ್ಯೇಕ ಘಟನೆಯಲ್ಲ , ಒಂದು ವ್ಯವಸ್ಥಿತ ಹಿಂಸಾಚಾರದ ಭಾಗವಾಗಿದೆ .ಪೊಲೀಸರೇ ತಮ್ಮನ್ನು ಆ ಜನಜಂಗುಳಿಗೆ ಒಪ್ಪಿಸಿದರು ಎಂದು ಸಂತ್ರಸ್ತರ ಹೇಳಿಕೆಗಳಿವೆ. ಇದು ನಿರ್ಭಯಾ ರೀತಿಯ ಸನ್ನಿವೇಶ ಅಲ್ಲ.  ಅದು ಕೂಡ ಭಯಾನಕವಾಗಿತ್ತು. ಆದರೆ ಒಂದು ಪ್ರತ್ಯೇಕ ಘಟನೆಯಾಗಿತ್ತು. ಇದು ಹಾಗಲ್ಲ. ಇಲ್ಲಿ, ನಾವು ವ್ಯವಸ್ಥಿತ ಹಿಂಸಾಚಾರವನ್ನು ಕಾಣುತ್ತಿದ್ದೇವೆ, ಇದನ್ನು ಭಾರತೀಯ ದಂಡ ಸಂಹಿತೆ ವಿಶೇಷ ಅಪರಾಧವೆಂದು  ಗುರುತಿಸುತ್ತ ದೆ ಎಂದು ಮುಖ್ಯ ನ್ಯಾಯಾಧೀಶರು ಭಾರತ ಸರಕಾರದ ಮುಖ್ಯ ನ್ಯಾಯವಾದಿಗಳ ಗಮನಕ್ಕೆ ತಂದರು.”ಘಟನೆಯು ವಿಶೇಷ ಅಪರಾಧವಾಗಿರುವಾಗ ನೀವು ವಿಶೇಷ ತಂಡವನ್ನು ಹೊಂದಿರುವುದು ಮುಖ್ಯವಲ್ಲವೇ” ಎಂದು ಅವರು ಮೆಹ್ತಾರನ್ನು ಕೇಳಿದರು.

ಮೂರು ತಿಂಗಳ ಹಿಂದೆ ಹಿಂಸಾಚಾರ ಪ್ರಾರಂಭವಾದಾಗಿನಿಂದ ಪ್ರಮುಖ ಸಾಕ್ಷ್ಯಗಳು ನಾಶವಾಗಿರಬೇಕು ಎಂದು ಸೂಚಿಸಿದ ಸಿಜೆಐ ಚಂದ್ರಚೂಡ್, 6,000 ಎಫ್‌ಐಆರ್‌ಗಳಲ್ಲಿ ಎಷ್ಟು ಶೂನ್ಯ ಎಫ್‌ಐಆರ್‌ಗಳು, ಎಷ್ಟನ್ನು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ಗೆ ರವಾನಿಸಲಾಗಿದೆ, ಎಷ್ಟರಲ್ಲಿ  ಕ್ರಮ ತೆಗೆದುಕೊಳ್ಳಲಾಗಿದೆ, ನ್ಯಾಯಾಂಗ ಕಸ್ಟಡಿಯಲ್ಲಿ ಎಷ್ಟಿದ್ದಾರೆ, ಲೈಂಗಿಕ ಹಿಂಸೆಯ ಪ್ರಕರಣಗಳೆಷ್ಟು, ಕಾನೂನು ನೆರವಿನ ಸ್ಥಿತಿ-ಗತಿ ಏನು ಮತ್ತು ಎಷ್ಟು 164 ಹೇಳಿಕೆಗಳನ್ನು ದಾಖಲಿಸಲಾಗಿದೆ ಮುಂತಾದ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕು ಎಂದು ಹೇಳಿದರು.

ಇಬ್ಬರು ಮಹಿಳೆಯರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಬಿಐ ತನಿಖೆಯನ್ನು ವಹಿಸಿಕೊಳ್ಳುವುದನ್ನು ಮತ್ತು ವಿಚಾರಣೆಯನ್ನು ಅಸ್ಸಾಂಗೆ ವರ್ಗಾಯಿಸುವ ಕೇಂದ್ರದ ಪ್ರಸ್ತಾಪವನ್ನು ಸಂತ್ರಸ್ತರು ವಿರೋಧಿಸುತ್ತಾರೆ ಎಂದು ಪೀಠಕ್ಕೆ ತಿಳಿಸಿದರು.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಮಾತನಾಡಿ, ಮಹಿಳೆಯರು ಇನ್ನೂ ಆಘಾತಕ್ಕೊಳಗಾಗಿರುವುದರಿಂದ ಅವರು ವಿಶ್ವಾಸ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ತಮ್ಮ ಅನುಭವವನ್ನು ನಿರೂಪಿಸಲು  ಸಾಧ್ಯವಾಗುತ್ತದೆ ಎಂದು ಹೇಳಿದರು.

“ಅತ್ಯಾಚಾರದ ಸಂತ್ರಸ್ತರು ಅದರ ಬಗ್ಗೆ ಮಾತನಾಡುವುದಿಲ್ಲ. ಅವರು ತಮ್ಮ ಆಘಾತದಿಂದ ಹೊರಬರುವುದಿಲ್ಲ. ಮೊದಲಿಗೆ ವಿಶ್ವಾಸವನ್ನು ಬೆಳೆಸಬೇಕಾಗಿದೆ. ಇಂದು ಸಿಬಿಐ ತನಿಖೆ ಆರಂಭಿಸಿದರೆ ಮಹಿಳೆಯರು ಎಲ್ಲ ವಿಷಯಗಳನ್ನು ಬಹಿರಂಗಪಡಿಸುತ್ತಾರೆಯೇ ಎಂಬುದು ನಮಗೆ ಗೊತ್ತಿಲ್ಲ” ಎಂದ ಅವರು ಮುಂದುವರೆದು ಅತ್ಯಾಚಾರದಿಂದ ಬದುಕುಳಿದವರೊಂದಿಗೆ ವ್ಯವಹರಿಸುವ ಅನುಭವವಿರುವ ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ಉನ್ನತ ಅಧಿಕಾರದ ಸಮಿತಿಯ ರಚನೆಗೆ ಕರೆ ನೀಡಿದರು, “ಅತ್ಯಾಚಾರದ ಸಂತ್ರಸ್ತೆ ತನ್ನ ಕಥೆಯನ್ನು ಎಷ್ಟೊಂದು ಬಾರಿ ಪುನರಾವರ್ತಿಸಬೇಕು? ಪೊಲೀಸರಿಗೆ ಹೇಳಬೇಕು, ಸಿಬಿಐಗೆ ಹೇಳಬೇಕು – ಇದು ಅಂತ್ಯವಿಲ್ಲದ ಪ್ರಕ್ರಿಯೆ” ಎನ್ನುತ್ತ ಇಂತಹ ಪ್ರಕರಣಗಳನ್ನು ನಿಭಾಯಿಸಿದ ಅನುಭವವಿರುವ ಮತ್ತು ಅಲ್ಲಿನ ಸ್ಥಳೀಯ ಸಮುದಾಯಗಳೊಂದಿಗೆ ಸಂವಹನವಿರುವ ಸೈಯದಾ ಹಮೀದ್, ಉಮಾ ಚಕ್ರವರ್ತಿ, ರೋಶನಿ ಗೋಸ್ವಾಮಿ ಅವರ ಹೆಸರನ್ನು ಸೂಚಿಸಿದ ಅವರು, ಸಂತ್ರಸ್ತರೊಂದಿಗೆ ಸಂವಹನ ನಡೆಸಬಲ್ಲ ಮಹಿಳೆಯರ ಸಮಿತಿಯನ್ನು ರಚಿಸುವಂತೆ ಪೀಠವನ್ನು ಕೋರಿದರು. ಆ ಸಮಿತಿಯು ನ್ಯಾಯಾಲಯಕ್ಕೆ ವರದಿ ಸಲ್ಲಿಸಬಹುದು ಮತ್ತು ಅದರ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಸೂಚಿಸಿದರು.

ಇದನ್ನೂ ಓದಿ:ಮಣಿಪುರ ಹಿಂಸಾಚಾರ | ಯುವತಿಯರ ಬೆತ್ತಲೆ ಮೆರವಣಿಗೆ; ಸಾಮೂಹಿಕ ಅತ್ಯಾಚಾರ

ಜೈಸಿಂಗ್ ಅವರ ಸಲಹೆಗಳು “ಪರಿಗಣನೆಗೆ ಅರ್ಹವಾಗಿವೆ” ಎಂದ ಮುಖ್ಯ ನ್ಯಾಯಾಧೀಶರು, ಆದರೆ ಸಿಆರ್.ಪಿ.ಸಿ.(ಅಪರಾಧ ಸಂಹಿತೆಯ) ಅಡಿಯಲ್ಲಿ  ಈ ತನಿಖೆ ನಡೆಯಬೇಕಾದ್ದರಿಂದ ಈ ಪ್ರಕ್ರಿಯೆ ಆ ಚೌಕಟ್ಟಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂದು ಕೇಳಿದರು.

ಸಿಆರ್.ಪಿ.ಸಿ ಪ್ರಕಾರವೇ ತನಿಖೆ ನಡೆಯಬೇಕು, ಆದರೆ ಹೇಳಿಕೆಗಳ ದಾಖಲೆಗಳನ್ನು  ಉನ್ನತ ಅಧಿಕಾರದ ಸಮಿತಿ ಮಾಡಬಹುದು ಎಂದು ಜೈಸಿಂಗ್ ಉತ್ತರಿಸಿದರು.

‘ವಿಮೆನ್‍ ಇನ್‍ ಗವರ್ನೆನ್ಸ್ ಇಂಡಿಯಾ’ (ಭಾರತ ಆಳ್ವಿಕೆಯಲ್ಲಿ ಮಹಿಳೆಯರು) ಎಂಬ ಸಂಘಟನೆಯ ಪರವಾಗಿ ವಾದ ಮಂಡಿಸಿದ ವಕೀಲೆ ವೃಂದಾ ಗ್ರೋವರ್ ಅವರು ಮೇ ತಿಂಗಳಲ್ಲಿ ಇಬ್ಬರು ಕುಕಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆಯ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿದರು. ಆದರೆ ಅವರ ಮೃತದೇಹದ ಬಗ್ಗೆ ಕುಟುಂಬದವರಿಗೆ ಯಾವುದೇ ಮಾಹಿತಿ ಇಲ್ಲ. ಅಂತಹ ಹೆಚ್ಚಿನ ಪ್ರಕರಣಗಳಲ್ಲಿ, ಎಫ್‌ಐಆರ್ ದಾಖಲಾತಿಯನ್ನು ಮೀರಿ, ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

“ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಹೋಗದಿದ್ದರೆ ಯಾವುದೇ ಮಹಿಳೆ ಏಕೆ ಹೇಳುತ್ತಾಳೆ?” ಎಂದ ಅವರು ಮಣಿಪುರದಲ್ಲಿ ಎಲ್ಲ ಸಮುದಾಯಗಳ ಮಹಿಳೆಯರ ಮೇಲೆ  ಲೈಂಗಿಕ ಅಪರಾಧಗಳು ನಡೆಯುತ್ತಿವೆ ಎಂಬುದು ನಿಜವಾದರೂ, ಕುಕಿ ಮಹಿಳೆಯರ ಮೇಲೆ ಗುರಿಯಿಟ್ಟು  ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಕೇಳಿದರು.

ಸಮುದಾಯಗಳನ್ನು ಹೆಸರಿಸುವುದು ಮತ್ತಷ್ಟು ಹಿಂಸಾಚಾರಕ್ಕೆ ಉತ್ತೇಜನ ನೀಡಬಹುದು ಎಂದು ಹೇಳಲು ಭಾರತ ಸರಕಾರದ ಸಾಲಿಸಿಟರ್‌ ಜನರಲ್ ಮಧ್ಯಪ್ರವೇಶಿಸಿದಾಗ, ಅಪರಾಧಗಳ ಗುರಿ-ನಿರ್ದೇಶಿತ ಸ್ವರೂಪವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಗ್ರೋವರ್ ಉತ್ತರಿಸಿದರು ಮತ್ತು ಕೋಮು ಹಿಂಸಾಚಾರದ ಸಮಯದಲ್ಲಿ ಅತ್ಯಾಚಾರವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(ಜಿ) ಅಡಿಯಲ್ಲಿ ಪ್ರತ್ಯೇಕ ಅಪರಾಧವಾಗಿ ವ್ಯವಹರಿಸಲಾಗುತ್ತದೆ ಎಂದು ಅವರ ಗಮನಕ್ಕೆ ತಂದರು.

Donate Janashakthi Media

Leave a Reply

Your email address will not be published. Required fields are marked *