ಮಣಿಪುರ | 2 ತಿಂಗಳು ಕಾನೂನು ಸುವ್ಯವಸ್ಥೆ ಸಂಪೂರ್ಣ ಸ್ಥಗಿತ – ಸುಪ್ರೀಂಕೋರ್ಟ್‌ ಕಳವಳ

ಆರೋಪಿ ಪೊಲೀಸರನ್ನು ಏಕೆ ಪ್ರಶ್ನಿಸಲಿಲ್ಲ ಎಂದಿರುವ ಸುಪ್ರೀಂಕೋರ್ಟ್‌ ಆಗಸ್ಟ್ 7 ರಂದು ರಾಜ್ಯದ ಡಿಜಿಪಿಗೆ ಸಮನ್ಸ್ ನೀಡಿದೆ ಮಣಿಪುರ

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರವನ್ನು ಮೇಲೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಪೊಲೀಸರು ತನಿಖೆಗೆ ಅಸಮರ್ಥರಾಗಿದ್ದಾರೆ ಮತ್ತು ಅಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಮಣಿಪುರ ಪೊಲೀಸರಿಂದ ಎಫ್‌ಐಆರ್‌ಗಳ ನೋಂದಣಿ ಮತ್ತು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ.

“ತನಿಖೆ ತುಂಬಾ ಜಡವಾಗಿದೆ. ಎಫ್‌ಐಆರ್ ದಾಖಲಿಸಲು ಸಾಧ್ಯವಾಗದ ಮಟ್ಟಿಗೆ ಸಾಂವಿಧಾನಿಕ ಯಂತ್ರ ಸ್ಥಗಿತಗೊಂಡಿದೆ. ಬಹುಶಃ ಪ್ರವೇಶಿಸಲು ಸಾಧ್ಯವಾಗದ ಕಾರಣ ಪೊಲೀಸರು ಬಂಧಿಸಲು ಸಾಧ್ಯವಾಗದಿರುವುದು ಸರಿಯೇ. ಕಾನೂನು ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಬೇಕು” ಎಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಹೇಳಿದೆ.

ಇದನ್ನೂ ಓದಿ: ಮಣಿಪುರ ಬೆತ್ತಲೆ ಪ್ರಕರಣ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಸಂತ್ರಸ್ತೆಯರು

ಆಗಸ್ಟ್ 7 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಂದು ಮಣಿಪುರದ ಪೊಲೀಸ್ ಮಹಾನಿರ್ದೇಶಕರಿಗೆ ಸುಪ್ರೀಂ ಕೋರ್ಟ್ ಸಮನ್ಸ್ ನೀಡಿದೆ. ಲೈಂಗಿಕ ದೌರ್ಜನ್ಯವೆಸಗುತ್ತಿರುವ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡ ಇಬ್ಬರು ಮಹಿಳೆಯರನ್ನು ಜನಸಮೂಹಕ್ಕೆ ಹಸ್ತಾಂತರಿಸಿದ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆ ಮಾಡದಿರುವ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆಗಳನ್ನು ಎತ್ತಿದೆ. “ಕಾನೂನು ಮತ್ತು ಸುವ್ಯವಸ್ಥೆಯನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಜನರಿಗೆ ಮತ್ತೇನಾಗುತ್ತದೆ?” ಎಂದು ಸುಪ್ರೀಂಕೋರ್ಟ್‌ ಕೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯವು ಸಹಜ ಸ್ಥಿತಿಗೆ ಮರಳುತ್ತಿದ್ದು, ಸಿಬಿಐ ದಾಖಲಿಸಿರುವ ಎಫ್‌ಐಆರ್‌ಗಳ ಕುರಿತು ತನಿಖೆ ಆರಂಭಿಸಿದೆ. ಇತರೆ ಪ್ರಕರಣಗಳನ್ನೂ ಸಿಬಿಐಗೆ ವರ್ಗಾಯಿಸಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಮತ್ತೆ ಕೇಳಿದ ಸುಪ್ರೀಂ ಕೋರ್ಟ್, “ಸಿಬಿಐ 6,000 ಎಫ್‌ಐಆರ್‌ಗಳನ್ನು ತನಿಖೆ ಮಾಡಲು ಸಾಧ್ಯವೆ? ಮೇ 4 ರಿಂದ ಜುಲೈ 27 ರವರೆಗೆ ಪೊಲೀಸರು ಉಸ್ತುವಾರಿ ವಹಿಸಿರಲಿಲ್ಲ. ಅವರು ಅಸಮರ್ಥರಾಗಿದ್ದರು ಅಥವಾ ಕಾರ್ಯನಿರ್ವಹಿಸಲು ಇಷ್ಟವಿರಲಿಲ್ಲ. ಇವುಗಳನ್ನು ವಿಂಗಡಿಸಲು ನಾವು ಕೆಲವು ಕಾರ್ಯವಿಧಾನಗಳನ್ನು ಸ್ಥಾಪಿಸಬೇಕಾಗಿದೆ. 6,500 ಎಫ್‌ಐಆರ್‌ಗಳನ್ನು ನಾವು ಸಿಬಿಐ ಮೇಲೆ ಹಾಕಲು ಸಾಧ್ಯವಿಲ್ಲ” ಎಂದು ಹೇಳಿದೆ.

ಇದುವರೆಗೆ ದಾಖಲಾಗಿರುವ 6,253 ಎಫ್‌ಐಆರ್‌ಗಳಲ್ಲಿ ಕೇವಲ 252 ಮಂದಿಯನ್ನು ಬಂಧಿಸಲಾಗಿದೆ ಎಂದು ಮಣಿಪುರ ಸರ್ಕಾರ ಸಲ್ಲಿಸಿರುವ ಸ್ಥಿತಿ ವರದಿಯಲ್ಲಿ ಸೂಚಿಸಲಾಗಿದೆ. ಕೊಲೆ, ಅತ್ಯಾಚಾರ, ಬೆಂಕಿ, ಲೂಟಿ, ಮಹಿಳೆಯರ ಮೇಲಿನ ದೌರ್ಜನ್ಯ, ಧಾರ್ಮಿಕ ಪೂಜಾ ಸ್ಥಳಗಳ ಧ್ವಂಸ ಮತ್ತು ಘೋರ ಗಾಯದಂತಹ ಗಂಭೀರ ಅಪರಾಧಗಳನ್ನು ಒಳಗೊಂಡ ಎಫ್‌ಐಆರ್‌ಗಳನ್ನು ಗುರುತಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಬೇರೆಡೆಯೂ ನಡೆದಿದೆ ಎಂದು ಮಣಿಪುರದ ಅಭೂತಪೂರ್ವ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ – ಸುಪ್ರಿಂ

ಅಲ್ಲದೆ, ಘಟನೆ ಸಂಭವಿಸಿದ ದಿನಾಂಕ, ಶೂನ್ಯ ಎಫ್‌ಐಆರ್ ನೋಂದಣಿ ದಿನಾಂಕ, ಸಾಮಾನ್ಯ ಎಫ್‌ಐಆರ್ ನೋಂದಣಿ ದಿನಾಂಕ, ಸಾಕ್ಷಿ ಹೇಳಿಕೆಗಳನ್ನು ದಾಖಲಿಸಿದ ದಿನಾಂಕ, ಸೆಕ್ಷನ್ 164 ಸಿಆರ್‌ಪಿಸಿ ಅಡಿಯಲ್ಲಿ ಹೇಳಿಕೆಗಳನ್ನು ದಾಖಲಿಸಿದ ದಿನಾಂಕ ಮತ್ತು ಬಂಧನಗಳನ್ನು ಮಾಡಿದ ದಿನಾಂಕದ ಪ್ರಕರಣವಾರು ವಿವರಗಳನ್ನು ಕೇಳಿದೆ. ಅಷ್ಟೆ ಅಲ್ಲದೆ ಪುನರ್ವಸತಿ ಉದ್ದೇಶಗಳಿಗಾಗಿ ನೀಡಲಾಗುವ ಪರಿಹಾರದ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.

ಮಣಿಪುರದಲ್ಲಿ ಬೆತ್ತಲೆ ಪರೇಡ್ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಳ್ಳದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸಿಬಿಐಗೆ ಸೂಚಿಸಿದ್ದು, ಮಧ್ಯಾಹ್ನ 2 ಗಂಟೆಗೆ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ದಾಖಲಿಸಲಾದ ಮನವಿಗಳನ್ನು ಆಲಿಸಲು ನಿರ್ಧರಿಸಿತ್ತು. ಆದರೆ, ವಿಚಾರಣೆಯ ಕೊನೆಯಲ್ಲಿ ಸಂತ್ರಸ್ತೆಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಿಬಿಐಗೆ ಅನುಮತಿ ನೀಡಿತು.

ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದ ಮನವಿಗಳ ಜೊತೆಗೆ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಬುಡಕಟ್ಟು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ. ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲು ನಿವೃತ್ತ ನ್ಯಾಯಾಧೀಶರು ಮತ್ತು ವಿಷಯ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ | ರಾಷ್ಟ್ರಪತಿಗೆ ವರದಿ ಸಲ್ಲಿಸಿದ ದೆಹಲಿ ಮಹಿಳಾ ಆಯೋಗ

ಎಫ್‌ಐಆರ್ ದಾಖಲಿಸಲು 18 ದಿನಗಳಿಗಿಂತ ಹೆಚ್ಚು ವಿಳಂಬವಾಗಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಸಿಜೆಐ ನೇತೃತ್ವದ ಪೀಠವು, “ಮೇ 4 ರಂದು ತಕ್ಷಣವೇ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಅಡ್ಡಿ ಏನಿತ್ತು?” ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದೆ.

ಬೆತ್ತಲೆಯಾಗಿ ಪರೇಡ್‌ಗೆ ಒಳಗಾದ ಮಹಿಳೆಯರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ತನಿಖೆಯನ್ನು ಸಿಬಿಐಗೆ ವರ್ಗಾಯಿಸುವುದನ್ನು ವಿರೋಧಿಸಿದರು. ಲೈಂಗಿಕ ಹಿಂಸಾಚಾರ ಪ್ರಕರಣಗಳ ತನಿಖೆಗೆ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚನೆಗೆ ಅವರು ಒತ್ತಾಯಿಸಿದರು.

ವಿಡಿಯೊ ನೋಡಿ: ಮಂಗಳೂರು: ಹೆರಿಗೆಗೆಂದು ತೆರಳಿದ ಯುವತಿ ಮೃತ; ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ Janashakthi Media

Donate Janashakthi Media

Leave a Reply

Your email address will not be published. Required fields are marked *