ನವದೆಹಲಿ: ಮಣಿಪುರದ ಇಂಫಾಲ್‌ನ ಪಶ್ಚಿಮ ಕಾಂಟೊ ಸಬಲ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಸೇನಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಲೀಮಾಖೋಂಗ್‌ನ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣಾ ಹಿಂಸಾಚಾರ ಆರಂಭವಾಗಿ 45 ದಿನಗಳು ಉರುಳಿದರೂ ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಹಿಂಸಾಚಾರದಿಂದ ಇಲ್ಲಿಯವರೆಗೆ 115 ಜನರು ಪ್ರಾಣ ಕಳೆದುಕೊಂಡಿದ್ದು, 60 ಸಾವಿರ ಮಂದಿ ನೆಲೆ ಕಳೆದುಕೊಂಡಿದ್ದಾರೆ. ಶಾಂತಿ ಪುನರ್ ಸ್ಥಾಪನೆಗೆ ಭಾರತೀಯ ಸೇನೆ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮೊಕ್ಕಾಂ ಹೂಡಿದ್ದು ಸಂಘರ್ಷ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ.
ಮತ್ತೊಂದೆಡೆ ಕೇಂದ್ರ ಮತ್ತು ಮಣಿಪುರದ ಬಿಜೆಪಿ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಳ್ಳುವ ಸಂಬಂಧ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳುತ್ತಿವೆ. ಇದರ ಭಾಗವಾಗಿಯೇ ಮೈತೇಯಿ ಮತ್ತು ಕುಕಿ ಸಮುದಾಯದ ಬೇಡಿಕೆ ಈಡೇರಿಸುವುದಾಗಿ ಹೇಳಿದರೂ ಶಾಂತಿ ಸ್ಥಾಪನೆಯು ಮರೀಚಿಕೆಯಾಗಿದೆ.