ಮಣಿಪುರ: ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ! 8000ಕ್ಕೂ ಹೆಚ್ಚು ಜನರ ಸ್ಥಳಾಂತರ

ಇಂಫಾಲ: ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು  ಮಣಿಪುರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನೆಲೆಯಲ್ಲಿ ಹಿಂಸಾಚಾರ ಹತ್ತಿಕ್ಕಲು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ಗೆ ಬುಲಾವ್ ನೀಡಲಾಗಿದೆ.

ಇಂಫಾಲ್, ಚುರಾಚಂದ್‌ಪುರ ಹಾಗೂ  ಕಾಂಗ್‌ಪೋಕ್ಪಿಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ನಿನ್ನೆ ರಾತ್ರಿ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಮಣಿಪುರ ಸರಕಾರ ರಾಜ್ಯದಲ್ಲಿ 5 ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

ಹಿಂಸಾಚಾರದ ನಂತರ ರಾಜ್ಯದ ವಿವಿಧ ಹಿಂಸಾಪೀಡಿತ ಪ್ರದೇಶಗಳಲ್ಲಿನ ಸುಮಾರು 8,000 ಜನರಿಗೆ ಸೇನಾ ಶಿಬಿರಗಳು ಹಾಗೂ  ಸರಕಾರಿ ಕಚೇರಿ ಆವರಣದಲ್ಲಿ ಆಶ್ರಯ ನೀಡಲಾಯಿತು.  ಮೇಟಿ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗಕ್ಕೆ ಸೇರಿಸಬೇಕೆಂಬ ತಮ್ಮ ಬೇಡಿಕೆಯನ್ನು ಪ್ರತಿಭಟಿಸಲು ವಿದ್ಯಾರ್ಥಿಗಳ ಸಂಘಟನೆಯು ಕರೆ ನೀಡಿದ್ದ ‘ಬುಡಕಟ್ಟು ಏಕತಾ ಮೆರವಣಿಗೆ’ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಮೇಟಿ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆ ತೀವ್ರಗೊಳ್ಳುತ್ತಿದ್ದು, ಇದರ ವಿರುದ್ಧ ಮೆರವಣಿಗೆಗೆ ಕರೆ ನೀಡಿರುವುದಾಗಿ ತಿಳಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಆಂದೋಲನಕಾರರು ಭಾಗವಹಿಸಿದ್ದರು ಮತ್ತು ಟೋರ್ಬಂಗ್ ಪ್ರದೇಶದಲ್ಲಿ ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದವರ ನಡುವೆ ಹಿಂಸಾಚಾರ ವರದಿಯಾಗಿದೆ.

ನನ್ನ ರಾಜ್ಯವನ್ನು ರಕ್ಷಿಸಿ : ನನ್ನ ರಾಜ್ಯ ಮಣಿಪುರ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು ಗುರುವಾರ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಣಿಪುರದ ಪರಿಸ್ಥಿತಿ ಸರಿಯಿಲ್ಲ. ನಿನ್ನೆ ರಾತ್ರಿಯಿಂದ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿ ಪರಿಸ್ಥಿತಿ ಮತ್ತು ಶಾಂತಿ, ಭದ್ರತೆಯನ್ನು ಕಾಪಾಡುವ ಕುರಿತು ಕ್ರಮಗಳ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಹಿಂಸಾಚಾರದಲ್ಲಿ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರಾದೃಷ್ಟಕರ ಸಂಗತಿ. ಈ ಪರಿಸ್ಥಿತಿಯು ಶೀಘ್ರಗತಿಯಲ್ಲಿ ಸಹಜ ಸ್ಥಿತಿಗೆ ಮರಳಬೇಕೆಂದು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ, ಇಂಫಾಲ್, ಬಿಷ್ಣುಪುರ್ ಮತ್ತು ಮೋರೆ ಇತ್ಯಾದಿಗಳಲ್ಲಿ ಕೆಲವು ಘರ್ಷಣೆಗಳು, ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಇದರಿಂದ ಆಸ್ತಿ-ಪಾಸ್ತಿ, ಮನೆಯ ಹಾನಿಯ ಜೊತೆಗೆ ಅಮೂಲ್ಯವಾದ ಜೀವಗಳು ಹೋಗಿವೆ, ಇದು ತುಂಬಾ ದುರದೃಷ್ಟಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *