ಮಣಿಪುರ ಹಿಂಸಾಚಾರ: ಜೂನ್ 26ಕ್ಕೆ ಸರ್ವಪಕ್ಷಗಳ ಸಭೆ ಕರೆದ ಅಮಿತ್ ಶಾ

ನವದೆಹಲಿ: ಮೇ 3 ರಿಂದ ನಿರಂತರ ಹಿಂಸಾಚಾರ ನಡೆಯುತ್ತಿರುವ ಮಣಿಪುರ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಜೂನ್ 24 ರಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ.

ಈ ಬಗ್ಗೆ ಬುಧವಾರ ರಾತ್ರಿ ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. “ಮಣಿಪುರ ರಾಜ್ಯದ ಪರಿಸ್ಥಿತಿಯನ್ನು ಚರ್ಚಿಸಲು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಜೂನ್ 24ರ ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬುಧವಾರ ಸಂಜೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗೃಹ ಸಚಿವರನ್ನು ಭೇಟಿ ಮಾಡಿದ್ದರು. ಅದರ ನಂತರ ಈ ಘೋಷಣೆ ಹೊರಬಿದ್ದಿದೆ.

ಇದನ್ನೂ ಓದಿ: ನಿಲ್ಲದ ಮಣಿಪುರ ಹಿಂಸಾಚಾರ : ಬಹುಸಂಖ್ಯಾಕವಾದ – ಧ್ರುವೀಕರಣದ ರಾಜಕೀಯದ ದುಷ್ಫಲ?

ಬಿಸ್ವಾ ಶರ್ಮಾ ಅವರು ಬಿಜೆಪಿ ನೇತೃತ್ವದ ಮೈತ್ರಿ ಕೂಟವಾದ NDA ಯ ಈಶಾನ್ಯ ಭಾರತದ ಅಂಗ NEDA (ನಾರ್ತ್-ಈಸ್ಟ್ ಡೆಮಾಕ್ರಟಿಕ್ ಅಲೈಯನ್ಸ್) ಯ ಸಂಚಾಲಕರೂ ಆಗಿದ್ದಾರೆ. ಹದಿನೈದು ದಿನಗಳ ಹಿಂದೆ ಅವರು ಮಣಿಪುರದ ರಾಜಧಾನಿ ಇಂಫಾಲ್‌ಗೆ ಭೇಟಿ ನೀಡಿ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಹಲವಾರು ರಾಜಕೀಯ ಮುಖಂಡರನ್ನು ಭೇಟಿ ಮಾಡಿದ್ದರು.

ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನ ನೀಡುವಂತೆ ಮೀಟೈ ಸಮುದಾಯ ಮೇ 3 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ವೇಳೆ ಸಮುದಾಯವು ಆಯೋಜಿಸಿದ್ದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ಯಲ್ಲಿ ಮಣಿಪುರ ರಾಜ್ಯದಲ್ಲಿ ಹಿಂಸಾತ್ಮಕ ಘರ್ಷಣೆಗಳು ಪ್ರಾರಂಭವಾಗಿತ್ತು.

ಮಣಿಪುರ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿವರೆಗೆ ಸುಮಾರು 120 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಕಳೆದ ತಿಂಗಳು ನಾಲ್ಕು ದಿನಗಳ ಕಾಲ ಮಣಿಪುರ ಪ್ರವಾಸದಲ್ಲಿದ್ದು, ಅಲ್ಲಿ ಶಾಂತಿಯನ್ನು ಮರಳಿ ತರುವ ಪ್ರಯತ್ನ ನಡೆಸಿದ್ದರು.

Donate Janashakthi Media

Leave a Reply

Your email address will not be published. Required fields are marked *