ಮಣಿಪುರ ಹಿಂಸಾಚಾರ | ಪೊಲೀಸ್ ಶಸ್ತ್ರಾಗಾರ ಲೂಟಿ ಮಾಡಿದ ದುಷ್ಕರ್ಮಿಗಳು!

ಪೊಲೀಸ್‌ ಅಧಿಕಾರಿಯ ತಲೆಗೆ ಸ್ನೈಪರ್‌ನಿಂದ ಗುಂಡು ಹಾರಿಸಿ ಕೊಲ್ಲಲಾಗಿದೆ ಮಣಿಪುರ

ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರದ ಜೊತೆಗೆ ಶಸ್ತ್ರಾಸ್ತ್ರಗಳ ಲೂಟಿಗಳು ಮುಂದುವರೆದಿದೆ. ಆಗಸ್ಟ್ 3ರ ಗುರುವಾರ ಬೆಳಿಗ್ಗೆ ನರಸೇನಾದಲ್ಲಿರುವ ಭಾರತೀಯ ರಿಸರ್ವ್‌ನ ಎರಡನೇ ಬೆಟಾಲಿಯನ್‌ನಲ್ಲಿ ಪೊಲೀಸ್ ಶಸ್ತ್ರಾಸ್ತ್ರಗಳನ್ನು ಗುಂಪೊಂದು ಲೂಟಿ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೆ ಗುರುವಾರ ಇಂಫಾಲ್ ವೆಸ್ಟ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪೊಲೀಸ್‌ ಅಧಿಕಾರಿಯ ತಲೆಗೆ ಸ್ನೈಪರ್‌ನಿಂದ ಗುಂಡು ಹಾರಿಸಲಾಯಿತು ಎಂದು ವರದಿಯಾಗಿದೆ.

ಪ್ರಸ್ತುತ ಮಣಿಪುರದ ಹಿಂಸಾತ್ಮಕ ಘರ್ಷಣೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ರಾಜ್ಯದ ಹಿಂಸಾಚಾರದ ಸ್ಥಿತಿಯ ಬಗ್ಗೆ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌ ರಾಜ್ಯದ ಡಿಜಿಪಿಯನ್ನು ಖುದ್ದಾಗಿ ಹಾಜರಾಗಲು ಆದೇಶಿಸಿತ್ತು. ಈ ವಿಚಾರಣೆ ಇಂದು ನಡೆಯಲಿದೆ. ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಶಸ್ತ್ರಾಸ್ತ್ರ ಲೂಟಿಯ ದಾಳಿ ಬೆಳಿಗ್ಗೆ ನಡೆದಿದೆ.

ಇದನ್ನೂ ಓದಿ: ದ್ವೇಷಾಪರಾಧ: 3 ಮುಸ್ಲಿಮರಿಗೆ ಗುಂಡಿಕ್ಕಿ ‘ಭಾರತದಲ್ಲಿರಬೇಕಾದರೆ ಮೋದಿ ಯೋಗಿಗೆ ಮತಹಾಕಿ’ ಎಂದ ರೈಲ್ವೆ ಪೊಲೀಸ್ ಅಧಿಕಾರಿ!

“ಬೆಳಿಗ್ಗೆ ಸುಮಾರು 09:45ಕ್ಕೆ 40/45 ಲಘು ವಾಹನಗಳ ಜೊತೆಗೆ ಕಾಲ್ನಡಿಗೆಯಲ್ಲಿ ಬಂದ 500 ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮುಖ್ಯ ಗೇಟ್ ಮತ್ತು ಕ್ವಾರ್ಟರ್ ಗೌರ್‌ನ ಕಾವಲುಗಾರರನ್ನು ಹತ್ತಿಕ್ಕಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ” ಎಂದು ಆಗಸ್ಟ್ 3ರಂದು ದಾಖಲಾದ ಎಫ್‌ಐಆರ್ ಹೇಳಿದೆ.

ಎಎಫ್ ರೈಫಲ್, ಐಎನ್‌ಎಸ್‌ಎಎಸ್ ರೈಫಲ್‌ಗಳು, ಎಲ್‌ಎಂಜಿಗಳು, ಪಿಸ್ತೂಲ್‌ಗಳು, ಕಾರ್ಬೈನ್‌ಗಳು, ಡಿಟೋನೇಟರ್‌ಗಳು, ಸ್ಪೇರ್ ಬ್ಯಾರೆಲ್‌ಗಳು, ಪಿಸ್ತೂಲ್‌ಗಳು, ಜಿಎಫ್ ರೈಫಲ್‌ಗಳು, ಮೋರ್ಟಾರ್‌ಗಳು, ಅಶ್ರುವಾಯು ಬಂದೂಕುಗಳು, ಅಮೋಗ್ ಕಾರ್ಬೈನ್‌ಗಳು, ಎಸ್‌ಎಲ್‌ಆರ್ ಗನ್‌ಗಳು, ವಿವಿಧ ಗನ್‌ಗಳು ಮತ್ತು ಮ್ಯಾಗಜೀನ್‌ಗಳಂತಹ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ.

ದುಷ್ಕರ್ಮಿಳ ಗುಂಪು ಬಾಗಿಲನ್ನು ಒಡೆದು ಒಳ ಪ್ರವೇಶಿಸಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಪೊಲೀಸರು 327 ಸುತ್ತು ಮದ್ದುಗುಂಡುಗಳು ಮತ್ತು 20 ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಲೂಟಿಯನ್ನು ತಪ್ಪಿಸಲು ಪ್ರಯತ್ನಿಸಿದರೂ, ಅದೆಲ್ಲವೂ ವ್ಯರ್ಥವಾಯಿತು ಎಂದು ಎಫ್‌ಐಆರ್ ಬಹಿರಂಗಪಡಿಸಿದೆ.

ಇದನ್ನೂ ಓದಿ: ಮಾನಹಾನಿ | ಹೊಸ ದಿಗಂತ ಸೇರಿ 4 ಸಂಪಾದಕರಿಂದ ಬೇಷರತ್ ಕ್ಷಮೆ ಯಾಚನೆ!

ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಸಂಘರ್ಷ ಪ್ರಾರಂಭವಾದಾಗಿನಿಂದ ರಾಜ್ಯದ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡಲಾಗಿದೆ. ಇಲ್ಲಿಯವರೆಗೆ ಸುಮಾರು 4,000 ಶಸ್ತ್ರಾಸ್ತ್ರಗಳು ಮತ್ತು ಲಕ್ಷಗಟ್ಟಲೆ ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದ್ದು, ಅದರಲ್ಲಿ ಕೇವಲ 1,600 ಶಸ್ತ್ರಾಸ್ತ್ರಗಳನ್ನು ಮಾತ್ರ ವಾಪಾಸು ವಶಪಡಿಸಿಕೊಳ್ಳಲಾಗಿದೆ ಎಂದು ದಿ ಹಿಂದೂ ವರದಿ ಹೇಳಿದೆ.

ಈ ಹಿಂದೆಯೂ ಹಲವಾರು ಶಸ್ತ್ರಾಸ್ತ್ರಗಳನ್ನು ದೋಚಿರುವ ಘಟನೆಗಳು ನಡೆದಿವೆ. ಹಲವು ಸಂದರ್ಭಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಶಸ್ತ್ರಾಸ್ತ್ರಗಳನ್ನು ವಾಪಾಸು ನೀಡುವಂತೆ ಮನವಿ ಮಾಡಿದ್ದರು. ಕಳೆದ ಮೇ ತಿಂಗಳಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸುವಂತೆ ಜನರಿಗೆ ಮನವಿ ಮಾಡಿದ್ದರು. ಬಿಜೆಪಿ ಶಾಸಕರೊಬ್ಬರು ರಾಜ್ಯ ಸರ್ಕಾರ ಯಾವುದೇ ಪ್ರತೀಕಾರ ಮಾಡುವುದಿಲ್ಲ ತಮ್ಮ ಶಸ್ತ್ರಾಸ್ತ್ರಗಳನ್ನು ‘ಇಲ್ಲಿಡಿ’ ಎಂದು ಡ್ರಾಪ್ ಬಾಕ್ಸ್ ಒಂದನ್ನು ಅಳವಡಿಸಿ ಜನರಿಗೆ ಮನವಿ ಮಾಡಿದ್ದರು.

ವಿಡಿಯೊ ನೋಡಿ: ಅಭಿನಯಕ್ಕಾಗಿ ಪೌರ ಕಾರ್ಮಿಕನಾದ ಬಾಲಕ – ಒಂದು ದಿನ ಅವರೊಂದಿಗೆ ಸುತ್ತಾಟ Janashakthi Media

Donate Janashakthi Media

Leave a Reply

Your email address will not be published. Required fields are marked *