ಕಾಂಗ್ರೆಸ್‌ನಿಂದ ಮಣಿಪುರ to ಮುಂಬೈವರೆಗೆ 6 ಸಾವಿರ ಕಿ.ಮೀ. ‘ಭಾರತ್ ನ್ಯಾಯ್ ಯಾತ್ರೆ’!

ನವದೆಹಲಿ: ಜನವರಿ 14 ರಿಂದ ಮಣಿಪುರದಿಂದ ಮುಂಬೈವರೆಗೆ 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಒಳಗೊಂಡ ಕಾಂಗ್ರೆಸ್ ಪಕ್ಷವೂ “ಭಾರತ ನ್ಯಾಯ ಯಾತ್ರೆ” ನಡೆಸಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಬುಧವಾರ ಪ್ರಕಟಿಸಿದ್ದಾರೆ. ಆದರೆ ಇದು ‘ಭಾರತ್ ಜೋಡೋ’ ಯಾತ್ರೆಯಂತೆ ಕೇವಲ ನಡೆದುಕೊಂಡು ಹೋಗುವುದಿಲ್ಲ, ಬದಲಾಗಿ ಬಹುತೇಕ ಬಸ್‌ಗಳ ಮೂಲಕವು ಯಾತ್ರೆ ಮುನ್ನಡೆಯಲಿದೆ ಎಂದು ಪಕ್ಷವು ಹೇಳಿದೆ.

“ರಾಹುಲ್ ಗಾಂಧಿ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ಆರಂಭಿಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಭಿಪ್ರಾಯಪಟ್ಟಿತ್ತು… ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಜನವರಿ 14ರಿಂದ ಮಾರ್ಚ್ 20ರವರೆಗೆ ಮಣಿಪುರದಿಂದ ಮುಂಬೈವರೆಗೆ ‘ಭಾರತ ನ್ಯಾಯ ಯಾತ್ರೆ’ ನಡೆಸಲು ನಿರ್ಧರಿಸಿದೆ” ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಲ್ಲಡ್ಕ ಪ್ರಭಾಕರ ಭಟ್‌ನನ್ನು ಕೂಡಲೇ ಬಂಧಿಸಿ | ಸಿಪಿಐ(ಎಂ) ನಾಯಕಿ ಕೆ. ನೀಲಾ

“ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4,500 ಕಿ.ಮೀ ಪ್ರಯಾಣಿಸಿದರು. ಅದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ಯಾತ್ರೆಯಾಗಿದೆ. ಅವರು ಭಾರತ್ ಜೋಡೋ ಯಾತ್ರೆಯ ಅನುಭವದೊಂದಿಗೆ ಈ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ” ಎಂದು ಕಾಂಗ್ರೆಸ್‌ ವೇಣುಗೋಪಾಲ್ ಹೇಳಿದ್ದಾರೆ.

“ಈ ಯಾತ್ರೆಯ ವೇಳೆ ಕಾಂಗ್ರೆಸ್‌ ಪಕ್ಷವು ದೇಶದ ಮಹಿಳೆಯರು, ಯುವಕರು ಮತ್ತು ತಳ ಸಮುದಾಯದೊಂದಿಗೆ ಸಂವಾದವನ್ನು ನಡೆಸುತ್ತದೆ” ಎಂದು ಅವರು ಹೇಳಿದ್ದಾರೆ.

“ಭಾರತ ನ್ಯಾಯ ಯಾತ್ರೆಯು ಒಟ್ಟು 6,200 ಕಿ.ಮೀ ಕ್ರಮಿಸಲಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಮೂಲಕ ಯಾತ್ರೆಯು ಮಹಾರಾಷ್ಟ್ರ ತಲುಪಲಿದೆ. ಒಟ್ಟು 14 ರಾಜ್ಯಗಳು ಮತ್ತು 85 ಜಿಲ್ಲೆಗಳನ್ನು ಯಾತ್ರೆ ಒಳಗೊಳ್ಳಲಿದೆ. ಭಾರತ್ ನ್ಯಾಯ್ ಯಾತ್ರೆಯು ಬಹುತೇಕ ಬಸ್‌ಗಳಲ್ಲಿ ನಡೆಯುತ್ತದೆಯಾದರೂ, ಸ್ವಲ್ಪ ಮಟ್ಟಿಗೆ ನಡೆಯುವ ಮೂಲಕ ಕೂಡಾ ಯಾತ್ರೆ ಮುನ್ನಡೆಯುತ್ತದೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.

ಇದನ್ನೂ ಓದಿ: ಯುಪಿ ಜೋಡೋ ಯಾತ್ರೆ ಆರಂಭಿಸಿದ ಕಾಂಗ್ರೆಸ್

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ”ಭಾರತ್ ಜೋಡೋ ಯಾತ್ರೆ” ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಸುಮಾರು 150 ದಿನಗಳ ಕಾಲ ನಡೆದಿತ್ತು. ಬಿಜೆಪಿ ನೇತೃತ್ವದ ಭಾರತ ಸರ್ಕಾರದ “ವಿಭಜಕ ರಾಜಕೀಯ”ದ ವಿರುದ್ಧ ದೇಶವನ್ನು ಒಂದುಗೂಡಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿತ್ತು. ಈ ಯಾತ್ರೆಯನ್ನು ರಾಹುಲ್ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ M. K. ಸ್ಟಾಲಿನ್ ಅವರು ಪ್ರಾರಂಭಿಸಿದ್ದರು.

ಈ ಯಾತ್ರೆಯ ಮೂಲಕ ಕಾಂಗ್ರೆಸ್ ತಾನು ಕಳೆದುಕೊಂಡ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ ಎಂದು ಭಾವಿಸಿದ್ದು, ಹಾಗಾಗಿ ಅದೇ ರೀತಿಯ ಯಾತ್ರೆಯನ್ನು ಮತ್ತೆ ನಡೆಸುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕವು ಡಿಸೆಂಬರ್ 20 ರ ಬುಧವಾರದಿಂದ ಯುಪಿ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದೆ. ಸಹರಾನ್‌ಪುರದ ಶಾಕುಂಭಾರಿ ದೇವಿ ದೇವಸ್ಥಾನದಿಂದ ಆರಂಭವಾಗಿದ್ದ 20 ದಿನಗಳ ಈ ಯಾತ್ರೆಯು 11 ಜಿಲ್ಲೆಗಳು ಮತ್ತು 16 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

ವಿಡಿಯೊ ನೋಡಿ: ಪ್ರಚೋದನಾಕಾರಿ ಭಾಷಣ ಮಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಸಿಪಿಐಎಂ ಒತ್ತಾಯ Janashakthi Media

Donate Janashakthi Media

Leave a Reply

Your email address will not be published. Required fields are marked *