ಮಣಿಪುರ | 5 ತಿಂಗಳ ನಂತರ ಇಂಟರ್‌ನೆಟ್ ನಿಷೇಧ ತೆರವು ಮಾಡುವುದಾಗಿ ಸಿಎಂ ಘೋಷಣೆ

ಇಂಫಾಲ್: ಕಳೆದ ಐದು ತಿಂಗಳಿನಿಂದ ಜನಾಂಗೀಯ ಹಿಂಸಾಚಾರಗಳಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಹೇರಲಾಗಿದ್ದ ಇಂಟರ್‌ನೆಟ್‌ ನಿಷೇಧವನ್ನು ಸೆಪ್ಟೆಂಬರ್ 23 ರ ಶನಿವಾರ ತೆಗೆದುಹಾಕುವುದಾಗಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಘೋಷಿಸಿದ್ದಾರೆ. ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ತಕ್ಷಣ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಲಾಗಿತ್ತು.

ಮೇ ನಂತರ ರಾಜ್ಯದಲ್ಲಿ ನಿರಂತವಾಗಿ ಹಿಂಸಾಚಾರ ನಡೆದ ಕಾರಣಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಗಣಿಸಿ ಇಂಟರ್‌ನೆಟ್‌ ನಿಷೇಧವನ್ನು ನಿಯತಕಾಲಿಕವಾಗಿ ವಿಸ್ತರಿಸಲಾಗಿತ್ತು. ಇಂಟರ್‌ನೆಟ್‌ ನಿಷೇಧ ತೆಗೆದುಹಾಕಬೇಕು ಎಂದು ಎಲ್ಲಾ ವರ್ಗದ ಜನರು ಮನವಿ ಮಾಡುತ್ತಲೆ ಇದ್ದರು. ಜೊತೆಗೆ ಮಣಿಪುರ ಹೈಕೋರ್ಟ್ ಕೂಡಾ ನಿಷೇಧ ತೆರವು ಮಾಡುವಂತೆ ಆದೇಶ ನೀಡಿದ್ದು, ಹೀಗಾಗಿ ರಾಜ್ಯ ಸರ್ಕಾರವು ಈ ಹಿಂದೆ ನಿಷೇಧವನ್ನು ಭಾಗಶಃ ತೆಗೆದುಹಾಕಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಆರೆಸ್ಸೆಸ್‌ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?

ರಾಜ್ಯದಲ್ಲಿ ಅಕ್ರಮ ಅಫೀಮು ಸಾಗುವಳಿ ನಾಶ ಮುಂದುವರಿಯಲಿದೆ ಎಂದು ಹೇಳಿರುವ ಮುಖ್ಯಮಂತ್ರಿ, “ರಾಜ್ಯ ಪಡೆಗಳು ಅಕ್ರಮ ಅಫೀಮು ಕೃಷಿಯನ್ನು ನಾಶಪಡಿಸುವುದನ್ನು ಮುಂದುವರೆಸಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಕ್ರಮ ಅಫೀಮು ವ್ಯಾಪಾರದ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.

ಈ ಮಧ್ಯೆ, ಕರ್ಫ್ಯೂ ಧಿಕ್ಕರಿಸಿ ಹೆಚ್ಚಿನ ಮಹಿಳೆಯರು ಸೇರಿದಂತೆ ನೂರಾರು ಜನರು ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸ್ಥಳೀಯ ನಾಯಕ ಮೊಯರಂಗೇಮ್ ಆನಂದ್ ಸಿಂಗ್ (45) ಅವರನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)  ಮರು ಬಂಧನಕ್ಕೆ ಒಳಪಡಿಸುವುದರ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಇಂಫಾಲ ಪೊಲೀಸ್ ಠಾಣೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿರುವ ಮೊಯಿರಾಂಗೇಮ್ ಅವರ ಪತ್ನಿ, ”10 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಪತಿಯನ್ನು ಮತ್ತೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ” ಎಂದು ಹೇಳಿದ್ದಾರೆ.

“ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿ ಉಗ್ರಗಾಮಿ ಸಂಘಟನೆಯ ತರಬೇತಿ ಪಡೆದ ಮೊಯಿರಾಂಗೇಮ್‌ ಅವರನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಅಥವಾ ಮಣಿಪುರದ ಹೊರಗೆ ಕರೆದೊಯ್ಯುವ ಸಾಧ್ಯತೆಯಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ವಿಡಿಯೊ ನೋಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್‌ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್‌ Janashakthi Media

Donate Janashakthi Media

Leave a Reply

Your email address will not be published. Required fields are marked *