ಹೆರಿಗೆಗೆಂದು ಹೋದ ಯುವತಿ ಕೋಮಾಗೆ | ಮಂಗಳೂರು ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ

ಎ.ಜೆ. ಆಸ್ಪತ್ರೆಯ ಈ ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೂಗೊಳ್ಳಬೇಕು ಎಂದು ಡಿವೈಎಫ್‌ಐ ಜಿಲ್ಲಾ ಸಮಿತಿ ಆಗ್ರಹಿಸಿದೆ

ಮಂಗಳೂರು: ಹೆರಿಗೆಗೆಂದು ಆಸ್ಪತ್ರೆಗೆ ತೆರಳಿದ್ದ ಯುವತಿ ತನ್ನ ಗರ್ಭಕೋಶ ಕಳೆದುಕೊಂಡಿದ್ದಲ್ಲದೆ, ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ ತೆರಳಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಾದ ಎ.ಜೆ. ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದಿದೆ. ಹೆರಿಗೆಯ ಶಸ್ತ್ರಚಿಕಿತ್ಸೆಯ ವೇಳೆ ಆಸ್ಪತ್ರೆಯ ವೈದ್ಯರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದಾಗಿ ಇದು ಸಂಭವಿಸಿದೆ ಎಂದು ಯುವತಿಯ ಕುಟುಂಬಿಕರು ಆರೋಪಿಸಿದ್ದಾರೆ.

ಜುಲೈ 2ರಂದು ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಬೆಳ್ತಂಗಡಿಯ ವೇಣೂರಿನ ಶಿಲ್ಪಾ(36) ಹೆರಿಗೆಗೆಂದು ದಾಖಲಾಗಿದ್ದರು. ಈ ವೇಳೆ ಹೆರಿಗೆ ನೋವು ಬಂದ ಹಿನ್ನಲೆಯಲ್ಲಿ ಶಿಲ್ಪಾ ಅವರನ್ನು ಈ ವರೆಗೆ ಪರೀಕ್ಷಿಸುತ್ತಿದ್ದ ವೈದ್ಯರಿಗೆ ಕರೆ ಮಾಡಿದಾಗ, ಅವರು ರಜೆಯ ಕಾರಣ ನೀಡಿ ಬೇರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ಹೇಳಿದ್ದಾಗಿ ಶಿಲ್ಪಾ ಅವರ ಸಹೋದರ ರವಿರಾಜ್ ಆಚಾರ್ಯ ಜನಶಕ್ತಿ ಮೀಡಿಯಾಗೆ ಹೇಳಿದ್ದಾರೆ.

ಇದನ್ನೂ ಓದಿ: ಆರೋಗ್ಯಕರ ಪರಿಸರ ಸಮತೋಲನವನ್ನು ಕಾಪಾಡುವುದು ಅತ್ಯಗತ್ಯವಾಗಿದೆ: ಸಚಿವ ಈಶ್ವರ್‌ ಖಂಡ್ರೆ

ಅದಾಗ್ಯೂ, ಶಸ್ತ್ರಚಿಕಿತ್ಸೆ ಮೂಲಕ ಶಿಲ್ಪಾ ಅವರಿಗೆ ಆರೋಗ್ಯವಂತ ಹೆಣ್ಣು ಮಗು ಹುಟ್ಟುತ್ತದೆ. ಆದರೆ ನಂತರ ಆಸ್ಪತ್ರೆಯ ವೈದ್ಯರು, ”ಶಿಲ್ಪಾ ಅವರ ಗರ್ಭಕೋಶದಲ್ಲಿ ಕಸ ಅಂಟಿಕೊಂಡಿದೆ, ಆದ್ದರಿಂದ ಗರ್ಭಕೋಶ ತೆಗೆಯಬೇಕಾಗುತ್ತದೆ” ಎಂದು ಹೇಳಿ ಶಿಲ್ಪಾರ ತಾಯಿಯಿಂದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ಈ ವೇಳೆ ಅವರಿಗೆ ತೀವ್ರ ರಕ್ತಸ್ರಾವ ಆಗಿದೆ. ರಕ್ತದೊತ್ತಡದ ಏರಿಳಿತದಿಂದಾಗಿ ”ಫಿಟ್ಸ್” ಪ್ರಾರಂಭವಾಗಿದೆ. ಇದನ್ನು ನಿಯಂತ್ರಿಸಲು ಪ್ರಯತ್ನಿಸುವ ಸಂದರ್ಭದಲ್ಲೇ ಮೆದುಳು ನಿಷ್ಕ್ರಿಯಗೊಂಡು ಬಾಣಂತಿ ಶಿಲ್ಪಾ ಕೋಮ ಸ್ಥಿತಿಗೆ ತಲುಪಿದ್ದಾರೆ.

“ನನ್ನ ತಂಗಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಕೋಮಾದಿಂದ ಹೊರಗೆ ಬಂದರೂ ಎದ್ದೇಳದ ಸ್ಥಿತಿಯಲ್ಲೆ ಇರಲಿದ್ದಾರೆ ಎಂದು ಡಾಕ್ಟರ್‌ ಹೇಳಿದ್ದಾರೆ. ಆರೋಗ್ಯವಂತ ಗರ್ಭಿಣಿ ಹೆಣ್ಣುಮಗಳು ಹೆರಿಗೆಗೆಂದು ತೆರಳಿ ಇದೀಗ ಈ ಸ್ಥಿತಿಯಲ್ಲಿ ಇದ್ದಾರೆ. ಅಲ್ಲಿನ ವೈದ್ಯರುಗಳ ನಿರ್ಲಕ್ಷ್ಯವೆ ಇದಕ್ಕೆ ಕಾರಣ. ಮೆಡಿಕಲ್ ಕಾಲೇಜು ಆಗಿರುವುದರಿಂದ ನನ್ನ ತಂಗಿಯನ್ನು ಅಲ್ಲಿಯ ವಿದ್ಯಾರ್ಥಿಗಳ ಕೈಯ್ಯಲ್ಲಿ ಚಿಕಿತ್ಸೆ ಮಾಡಿಸಲಾಗಿತ್ತೆ” ಎಂದು ರವಿರಾಜ್ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಎ.ಜೆ. ಆಸ್ಪತ್ರೆಯ ವೈದ್ಯರಾದ ಡಾ. ವೀಣಾ, “ಹೆರಿಗೆಯ ನಂತರ ಗರ್ಭಕೋಶದಲ್ಲಿ ಕಸ ಇದ್ದಿದ್ದು ಕಂಡುಬಂದಿದ್ದಕ್ಕೆ ಗರ್ಭಕೋಶವನ್ನು ತೆಗೆದಾಗ ತೀವ್ರರಕ್ತಸ್ರಾವವಾಗಿ ಮೆದುಳಿನ ಮೇಲೆ ಪರಿಣಾಮ ಬೀರಿದೆ. ಈ ಹಿಂದಿನ ಸ್ಕ್ಯಾನಿಂಗ್ ಅಲ್ಲಿ ಗರ್ಭಕೋಶದಲ್ಲಿ ಕಂಡುಬಂದಿರಲಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಿದ್ದೇವೆ. ನಮ್ಮಿಂದ ಯಾವುದೆ ನಿರ್ಲಕ್ಷ್ಯ ಸಂಭವಿಸಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಪ್ರತಾಪ್‌ ಸಿಂಹ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ ನೋಡಪ್ಪ: ಎಚ್‌. ವಿಶ್ವನಾಥ್‌

ಪ್ರಕರಣದ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾಡನಾಡಿದ ದಕ್ಷಿಣ ಕನ್ನಡ ವೈದ್ಯಾಧಿಕಾರಿ,”ನಮಗೆ ಸಂತ್ರಸ್ತೆಯ ಕಡೆಯಿಂದ ಯಾವುದೆ ದೂರು ಬಂದಿಲ್ಲ. ಆದರೆ ವಿಚಾರ ಜುಲೈ 2ನೇ ತಾರೀಕಿನಂದು ತಿಳಿದಿದೆ. ಈ ಬಗ್ಗೆ ಅಲ್ಲಿನ ವೈದ್ಯರು ನಮಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ. ಅದಾಗಿಯೂ ಬೇರೆ ಕಡೆಯಿಂದ ದೂರು ಬಂದ ಹಿನ್ನಲೆಯಲ್ಲಿ ನಮ್ಮ ಅಧಿಕಾರಿಗಳನ್ನು ತನಿಖೆಗೆ ಕಳುಹಿಸಿದ್ದೇವೆ. ನಾಳೆ ವರದಿ ಬರಲಿದ್ದು, ಒಂದು ವೇಳೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್, “ಹೆರಿಗೆಗೆ ಮೊದಲು ಕಳೆದ ಒಂಬತ್ತು ತಿಂಗಳು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನು ಯುವತಿ ಇಲ್ಲೇ ನಡೆಸಿರುತ್ತಾರೆ. ಆರ್ಥಿಕವಾಗಿ ಹಿಂದುಳಿರುವ ಕುಟುಂಬ ಇಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆಂಬ ಕಾರಣಕ್ಕೆ ಎ.ಜೆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಉಚಿತದ ಹೆಸರಿನಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಯೋಗಕ್ಕಾಗಿ ಬಡವರ ದೇಹವನ್ನು ಬಳಸುತ್ತಿದೆ. ಜೊತೆಗೆ ಸರಕಾರದ ಉಚಿತ ಯೋಜನೆಗಳ ಸ್ಕೀಮ್‌ಗಳನ್ನು ಲೂಟಿ ಹೊಡೆಯುವುದರ ಉದ್ದೇಶ ಅಡಗಿದೆ” ಎಂದು ಆರೋಪಿಸಿದರು.

“ಆಸ್ಪತ್ರೆ ಆಡಳಿತ ಮಂಡಳಿ ಸಭೆಯನ್ನು ಕರೆದು ಮನೆಮಂದಿ ಜೊತೆ ಮಾತುಕತೆ ನಡೆಸಿ ಆಸ್ಪತ್ರೆ ಮತ್ತು ವೈದ್ಯರ ಕಡೆಯಿಂದ ಏನೂ ಸಮಸ್ಯೆಗಳಾಲಿಲ್ಲ ಎಂದು ಹೇಳಿದೆ. ಜೊತೆಗೆ ದುರ್ಘಟನೆಗೆ ಕನಿಕರ ವ್ಯಕ್ತಪಡಿಸಿ ಕುಟುಂಬಿಕರನ್ನು ಸಮಾಧಾನ ಮಾಡಿ ಸಮಸ್ಯೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ”

“ಹಾಗಾದರೆ ಆರೋಗ್ಯವಂತ ಗರ್ಭಿಣಿ ಹೆಣ್ಣು ಮಗಳ ಮೇಲಾದ ಅನ್ಯಾಯಕ್ಕೆ ಹೊಣೆ ಯಾರು? ಎಲ್ಲಾ ತಂತ್ರಜ್ಞಾನವನ್ನು ಅಳವಡಿಸಿ ಪ್ರತಿಷ್ಠಿತವೆಂದು ಕರೆದುಕೊಳ್ಳುವ ಆಸ್ಪತ್ರೆಯಲ್ಲಿ ಯಾವುದೇ ಎಡವಟ್ಟುಗಳಾಗದೆ ಆರೋಗ್ಯಯುತವಾಗಿ ಗರ್ಭಿಣಿ ಹೆಣ್ಣುಮಗಳ ಹೆರಿಗೆ ಮಾಡಿಸಲು ಯಾಕೆ ಸಾಧ್ಯವಾಗಿಲ್ಲ? ಬಣ್ಣ ಬಣ್ಣದ ಜಾಹಿರಾತು ನೀಡಿ ಆರೋಗ್ಯದ ಕಾಳಜಿ, ನುರಿತ ವೈದ್ಯರು, ಗುಣಮಟ್ಟದ ಚಿಕಿತ್ಸೆ ಹೆಸರಲ್ಲಿ ಧೈರ್ಯ ತುಂಬಿ ಆಹ್ವಾನಿಸುವ ಆಸ್ಪತ್ರೆಯು ಈ ರೀತಿ ಎಡವಟ್ಟಾದ ಚಿಕಿತ್ಸೆಯಿಂದ ಜೀವವನ್ನೇ ಕಳೆದುಕೊಳ್ಳುವ ಕುಟುಂಬಗಳಿಗೆ ಯಾವ ರೀತಿಯ ಧೈರ್ಯವನ್ನು ತುಂಬುತ್ತದೆ?” ಎಂದು ಸಂತೋಷ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹೊಟ್ಟೆ ನೋವು: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಎ.ಜೆ. ಮೆಡಿಕಲ್ ಆಸ್ಪತ್ರೆಯಲ್ಲಿ ನಡೆದ ಪ್ರಕರಣವನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಸಂತೋಷ್ ಬಜಾಲ್ ಒತ್ತಾಯಿಸಿದ್ದು, ತಪ್ಪಿತಸ್ಥ ವೈದ್ಯರ ಮೇಲೆ ಮತ್ತು ಬೇಜವಾಬ್ದಾರಿ ವಹಿಸಿದ ಆಸ್ಪತ್ರೆಯ ವಿರುದ್ಧ ಸೂಕ್ತ ಕ್ರಮಕೂಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *