- ನ. 2 ರಂದು ಲಖನೌ, 11 ರಂದು ಅಹಮದಾಬಾದ್ ವಿಮಾನ ನಿಲ್ದಾಣದ ನಿರ್ವಹಣೆ ಅದಾನಿ ಏರ್‌ಪೋರ್ಟ್‌ಗೆ ಹಸ್ತಾಂತರ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶುಕ್ರವಾರ (ಅಕ್ಟೋಬರ್ 30) ಮಧ್ಯ ರಾತ್ರಿ ಅಧಿಕೃತವಾಗಿ ಅದಾನಿ ಸಂಸ್ಥೆಗೆ ಹಸ್ತಾಂತರವಾಗಿದೆ. ಈ ಮೂಲಕ ಇನ್ನು ಮುಂದೆ ಈ ನಿಲ್ದಾಣದ ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆ ಅದಾನಿ ಏರ್‌ಪೋರ್ಟ್‌ನದ್ದಾಗಿದೆ.
ಈ ಹಿಂದೆ ಅಕ್ಟೋಬರ್ 31ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯ ಹೊಣೆಯನ್ನು ಅದಾನಿ ಗ್ರೂಪ್‍ಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಅದರಂತೆ ಶುಕ್ರವಾರ ಮಧ್ಯರಾತ್ರಿಯೇ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ನವೆಂಬರ್ 2 ಮತ್ತು 11 ರಂದು ಕ್ರಮವಾಗಿ ಲಖನೌ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣದ ನಿರ್ವಹಣೆಯೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಅದಾನಿ ಏರ್‌ಪೋರ್ಟ್‌ಗೆ ಹಸ್ತಾಂತರವಾಗಲಿದೆ.
ಈ 3 ವಿಮಾನ ನಿಲ್ದಾಣಗಳ ಆಡಳಿತವನ್ನು ವಹಿಸಿಕೊಳ್ಳಲು ಅದಾನಿ ಗ್ರೂಪ್‌ಗೆ ನವೆಂಬರ್ 12ರ ಡೆಡ್‌ಲೈನ್ ನೀಡಲಾಗಿತ್ತು. ಅದಕ್ಕೂ ಮೊದಲೇ ಎಲ್ಲಾ ವಿಮಾನ ನಿಲ್ದಾಣಗಳನ್ನುಗೌತಮ್ ಅದಾನಿ ನೇತೃತ್ವದ ಕಂಪನಿ ತನ್ನ ವಶಕ್ಕೆ ಪಡೆದುಕೊಳ್ಳಲಿದೆ.
2019ರ ಫೆಬ್ರವರಿಯಲ್ಲಿ ನಡೆದ ಹರಾಜಿನ ಈ ಮೂರು ವಿಮಾನ ನಿಲ್ದಾಣಗಳು ಸೇರಿ ದೇಶದ 6 ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಗ್ರೂಪ್ ಗೆದ್ದುಕೊಂಡಿತ್ತು. ಆದರೆ ಕೊರೊನಾ ಕಾರಣಕ್ಕೆ ಇದರಲ್ಲಿ ಮೂರು ಏರ್ಪೋರ್ಟ್‌ಗಳ ನಿರ್ವಹಣೆಯನ್ನು ನಿಗದಿತ ಸಮಯಕ್ಕೆ ಕಂಪನಿ ವಹಿಸಿಕೊಂಡಿರಲಿಲ್ಲ. ಈಗಾಗಲೇ ಗುವಾಹಟಿ, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳ ನಿರ್ವಹಣೆ ಅದಾನಿ ಕಂಪನಿಗೆ ಹಸ್ತಾಂತರವಾಗಿದ್ದು, ಇದೇ ಸಾಲಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರ್ಪಡೆಯಾಗಿದೆ.