ಮಂಗಳೂರು ಸ್ಫೋಟ ಪ್ರಕರಣ: ಶಾರೀಕ್ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ-ಎಡಿಜಿಪಿ ಅಲೋಕ್ ಕುಮಾರ್

ಮಂಗಳೂರು: ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ವ್ಯಕ್ತಿ ತೀರ್ಥಹಳ್ಳಿಯ ಶಾರೀಕ್ ಎಂಬವನು ಎಂದು ದೃಢಪಟ್ಟಿದೆ. ಶಿವಮೊಗ್ಗದಿಂದ ಪೊಲೀಸರು ಕರೆಸಿಕೊಂಡಿದ್ದ ಮಲತಾಯಿ ಶಬಾನಾ, ಸೋದರಿ ಆತಿಯಾ, ತಾಯಿಯ ತಂಗಿ ಯಾಸ್ಮಿನ್‌ ಅವರು ಈತನೇ ಶಾರಿಕ್‌ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅಲೋಕ್‌ ಕುಮಾರ್‌, ಕೊಯಮತ್ತೂರು, ತಮಿಳುನಾಡು, ಕೇರಳ ಎಲ್ಲೆಡೆ ಸುತ್ತಾಡಿ ಮೈಸೂರಿಗೆ ಬಂದಿದ್ದ ಶಾರೀಕ್ ಈ ಹಿಂದೆ  ಶಿವಮೊಗ್ಗದ ಪ್ರಕರಣವೊಂದರಲ್ಲಿ ಇವನು ಇದ್ದ. ಪೊಲೀಸರ ದಾಳಿ ವೇಳೆ ಶಾರೀಕ್ ಉಳಿದುಕೊಂಡಿದ್ದ ಮೈಸೂರಿನ ಮನೆಯಲ್ಲಿಯೂ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ನಮಗೆ ಮತ್ತೆ ಅವನ ಫೋಟೋ ನೋಡಿ ಶಾರೀಕ್ ಅಂತಾ ಗೊತ್ತಾಗಿತ್ತು. ಆದರೂ ಅವರ ಮನೆಯವರನ್ನ ಕರೆಸಿ ಗುರುತು ಪತ್ತೆ ಮಾಡಿದ್ದೇವೆ ಎಂದರು.

ಶಾರೀಕ್‌ಗೆ ಯಾರು ಹಣದ ವ್ಯವಸ್ಥೆಯನ್ನು ಮಾಡುತ್ತಿದ್ದರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈತನಿಗೆ ಆರ್ಥಿಕ ನೆರವು ನೀಡುತ್ತಿದ್ದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶಾರೀಕ್ ಆಗಸ್ಟ್ 15, 2022ರ ಶಿವಮೊಗ್ಗ ಗಲಾಟೆ ಬಳಿಕ ಎಚ್ಚೆತ್ತುಕೊಂಡಿದ್ದ. ಅಗಸ್ಟ್ 23ರ ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಮೈಸೂರಿಗೆ ಬಂದಿದ್ದ ಆತ ಬಾಡಿಗೆ ಮನೆಯಲ್ಲಿದ್ದ, ಅಲ್ಲದೆ, ಮೊಬೈಲ್ ತಯಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದರು.

2020ರಲ್ಲಿ ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣ ಅವನ ಮೇಲೆ ದಾಖಲಾಗಿತ್ತು. ಶಾರೀಕ್‌ ಯುಎಪಿಎ ಕಾಯ್ದೆಯಡಿ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದನು. ಆಗಲೇ ಮನೆಯವರು ಬುದ್ದಿ ಹೇಳಿದ್ದರಂತೆ. ಶಿವಮೊಗ್ಗದಲ್ಲಿ ಜಬೀವುಲ್ಲ ಕೇಸ್ ವಿಚಾರಣೆ ವೇಳೆ ಇವರ ಮಾಹಿತಿ ಗೊತ್ತಾಗಿತ್ತು. ಮುನೀರ್ ಬಂಧನ ಬಳಿಕ ಶಾಕೀರ್ ಟ್ರಯಲ್ ಬ್ಲಾಸ್ಟ್ ಮಾಡಿದ್ದು ಗೊತ್ತಾಗಿದೆ. ಆದರೆ ಇದ್ಯಾವ ವಿಚಾರವೂ ಮೈಸೂರು ಮನೆ ಮಾಲೀಕನಿಗೆ ಗೊತ್ತಿಲ್ಲ ಎಂದರು.

ಮೊನ್ನೆ ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ ಬಸ್ ನಲ್ಲಿ ಮಂಗಳೂರಿಗೆ ಒಬ್ಬನೇ ಬಂದಿದ್ದಾನೆ. ನಾವು ಕೊಯಮತ್ತೂರು ಮತ್ತು ತಮಿಳುನಾಡು ಪೊಲೀಸರ ಜೊತೆ ಸಂಪರ್ಕ ಇದ್ದೇವೆ. ಕೊಯಮತ್ತೂರು ಸ್ಪೋಟಕ್ಕೆ ಸಂಪರ್ಕ ಇದೆಯಾ ಅನ್ನೋ ಬಗ್ಗೆ ಸ್ಪಷ್ಟವಾಗಿಲ್ಲ. ಆದರೆ ಕೊಯಮತ್ತೂರು ಮತ್ತು ತಮಿಳುನಾಡಿನ ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಇವನ ಕೈವಾಡವೇನಾದರೂ ಇದೆಯೇ ಎಂಬುದರ ಬಗ್ಗೆಯೂ ತನಿಖೆ ಆಗುತ್ತೆ ಎಂದು ತಿಳಿಸಿದರು.

ಮಂಗಳೂರಿನ ನಾಗುರಿ ಯಿಂದ ಸ್ಪೋಟಗಳನ್ನು ತೆಗೆದುಕೊಂಡು ನಿಗದಿತ ಜಾಗಕ್ಕೆ ಹೋಗುತ್ತಿದ್ದ. ಆದರೆ, ಅವನು ಎಲ್ಲಿಗೆ ಹೋಗುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿಲ್ಲ. ಆರೋಪಿ ಅವನು ಗುಣಮುಖವಾದ ಬಳಿಕ ಈ ವಿಚಾರ ತಿಳಿದುಬರಲಿದೆ. ವಾರದ ಹಿಂದೆ ಒಮ್ಮೆ ಮಂಗಳೂರಿಗೆ ಬಂದು ಸುತ್ತಾಡಿ ಹೋಗಿದ್ದಾನೆ. ಮೈಸೂರಿನಿಂದ ಇಬ್ಬರು ಹಾಗೂ ಮಂಗಳೂರಿನ ಒಬ್ಬರನ್ನ ಪ್ರಕರಣ ಸಂಬಂಧ ವಶಕ್ಕೆ ಪಡೆಯಲಾಗಿದೆ. ಇವನು ವಿದೇಶದ ಒಂದು ಉಗ್ರ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದ ಎಂಬುವುದು ತಿಳಿದು ಬಂದಿದೆ ಎಂದು ಅಲೋಕ್‌ ಕುಮಾರ್‌ ಮಾಹಿತಿ ನೀಡಿದರು.

ಶಾರೀಕ್ ಬಾಂಬ್ ಅನ್ನ ಸರಿಯಾಗಿ ಜೋಡಿಸಿರಲಿಲ್ಲ, ಅದರಲ್ಲಿ ಅವನು ನಿಪುಣನೂ ಅಗಿರಲಿಲ್ಲ. ಸ್ಪೋಟಕವನ್ನು ತಯಾರಿಸಲು ಬೇಕಾದ ವಸ್ತುಗಳನ್ನು ಕೆಲವೊಂದು ಆನ್ ಲೈನ್‌ ಮೂಲಕ ಮತ್ತೆ ಕೆಲವನ್ನು ನೇರವಾಗಿ ಖರೀದಿ ಮಾಡಿದ್ದಾನೆ. ಸಿಮ್ ಕಾರ್ಡ್ ಖರೀದಿಗಾಗಿ ಕೊಯಮತ್ತೂರು ಮೂಲದ ಒಬ್ಬರ ಆಧಾರ್ ಕಾರ್ಡ್ ಬಳಕೆ ಮಾಡಿದ್ದಾನೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿ ನಾಲ್ಕು ಜನ ಇದ್ದಾರೆ. ಮೂವರು ವಶದಲ್ಲಿದ್ದು, ಒಬ್ಬನನ್ನ ಊಟಿಯಿಂದ ಕರೆ ತರ್ತಾ ಇದೀವಿ. ಇದು ಕರ್ನಾಟಕ ಪೊಲೀಸರ ಸ್ವತಂತ್ರ ತನಿಖೆ, ಆದರೆ ಕೇಂದ್ರ ತನಿಖಾ ದಳದ ಜೊತೆ ಸಂಪರ್ಕದಲ್ಲಿ ಇದ್ದೇವೆ ಎಂದು ವಿವರಿಸಿದ್ದಾರೆ.‌

Donate Janashakthi Media

Leave a Reply

Your email address will not be published. Required fields are marked *