ಮಂಗಳೂರು: ರಾಜ್ಯದ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಕೋಮು ದ್ವೇಷ ಹರಡುವ ಮೂಲಕ ಜನತೆಯನ್ನು ಭಯಭೀತಿಗೊಳಿಸುವ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಇದೀಗ ಭಜರಂಗದಳದ ಕಾರ್ಯಕರ್ತರು ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕರು ರಾತ್ರಿ 12 ಗಂಟೆಗೆ ಸುತ್ತಾಡುತ್ತಿದ್ದರು ಎಂದು ಬಜರಂಗದಳದ ಕಾರ್ಯಕರ್ತರು ಅವರನ್ನು ತಡೆದು ಪ್ರಶ್ನಿಸಿ ಹಲ್ಲೆಗೆ ಮುಂದಾಗಿರುವ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಸುಳ್ಯದಲ್ಲಿ ಮುಸ್ಲಿಂ ಜೋಡಿಗೆ ಮುಸ್ಲಿಂ ಯುವಕರೇ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಇದೀಗ ಬಜರಂಗದಳದ ಕಾರ್ಯಕರ್ತರು ಮುಸ್ಲಿಂ ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಗರದ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೊಠಾರ ಪ್ರದೇಶದಲ್ಲಿ ನಡೆದಿದೆ.
ಸಂಜೆ ಕಾಲೇಜಿನಲ್ಲಿ ಓದುತ್ತಿರುವ ಇಬ್ಬರು ಯುವತಿಯರು ಮುಸ್ಲಿಂ ಯುವಕರಿಬ್ಬರ ಜೊತೆ ತಡರಾತ್ರಿ ನಡೆದುಕೊಂಡು ಹೋಗುತ್ತಿದ್ದರು. ಅವರನ್ನು ತಡೆದು ನಿಲ್ಲಿಸಿದ್ದ ಸಂಘಪರಿವಾರದ ಬಜರಂಗದಳ ಸಂಘಟನೆಯ ಕಾರ್ಯಕರ್ತರು ‘ನೀವು ಇಷ್ಟು ರಾತ್ರಿಯಲ್ಲಿ ಒಟ್ಟಿಗೆ ತಿರುಗಾಡುತ್ತಿರುವುದೇಕೆ’ ಎಂದು ಬೆದರಿಕೆ ಹಾಕಿದ್ದಾರೆ.
ಹಲ್ಲೆಗೆ ಒಳಗಾದ ಯುವಕರು ಊಟಕ್ಕೆ ಹೋಗಿದ್ದಾಗಿ ಹೇಳಿದ್ದಾರೆ. ಇಷ್ಟೊಂದು ರಾತ್ರಿ ಹೋಟೆಲ್ ಎಲ್ಲಿ ಇರುತ್ತೆ ಎಂದು ಬಜರಂಗದಳದ ಕಾರ್ಯಕರ್ತರು ಪ್ರಶ್ನಿಸಿ ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣ ಸ್ಥಳದಲ್ಲೇ ಇದ್ದ ಪೊಲೀಸರು ಇದನ್ನು ತಡೆದಿದ್ದು, ಹಲ್ಲೆಗೆ ಆಸ್ಪದ ನೀಡಿಲ್ಲ. ಬಳಿಕ ಉರ್ವಾ ಪೊಲೀಸ್ ಠಾಣೆಗೆ ಯುವಕರನ್ನು ಕರೆತಂದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.