ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ-ಭದ್ರತೆಗೆ ಖಾಕಿ ಪಡೆಗಳ ನೇಮಕ

ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವಕ್ಕೆ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅಂತಿಮ ಸಿದ್ಧತೆ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಸಿದ್ಧತೆಯನ್ನು ಪರಿಶೀಲನೆ ನಡೆಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಧಿಕಾರಿಗಳು, ಜನವರಿ 26ರಂದು ಬೆಳಗ್ಗೆ 8.58ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಆಗಮಿಸುತ್ತಾರೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ ಎಂದು ತಿಳಿಸಿದರು.

ಧ್ವಜಾರೋಹಣ ಬಳಿಕ ರಾಜ್ಯಪಾಲರು ಗೌರವರಕ್ಷೆ ಸ್ವೀಕರಿಸಲಿದ್ದಾರೆ. ನಾಡಿನ ಜನತೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಬಳಿಕ ನಾಡಗೀತೆ, ರೈತ ಗೀತೆಯನ್ನು ಹಾಡಲಾಗುವುದು ಎಂದು ಹೇಳಿದರು.

ಕೋವಿಡ್-19 ಹರಡುವಿಕೆ ನಿಯಂತ್ರಣದ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರು, ಅತಿ ಗಣ್ಯ ವ್ಯಕ್ತಿಗಳು, ಮಿಲಿಟರಿ, ಬಿಎಸ್‌ಎಫ್ ಸೇರಿದಂತೆ ಹಿರಿಯ ಅಧಿಕಾರಿಗಳು, ಮಾಧ್ಯಮದವರು ಒಳಗೊಂಡು ಪಾಸು ಪಡೆದುಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಬಿಬಿಎಂಪಿ ಮುಖ್ಯಮಂತ್ರಿ ಗೌರವ್ ಗುಪ್ತಾ ತಿಳಿಸಿದರು.

ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.40ರ ಒಳಗಾಗಿ ನಿಗದಿಪಡಿಸಲಾದ ಆಸನಗಳಲ್ಲಿ ಆಸೀನಗಳಲ್ಲಿ ಆಗಮಿಸುವವರು ಆಸೀನರಾಗಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ  ಕಾಯ್ದುಕೊಳ್ಳುವಂತೆ ಕೋರಲಾಗಿದೆ. ಬಿಬಿಎಂಪಿ ವತಿಯಿಂದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರು ಅನಗತ್ಯ ಲಗೇಜು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ.

ಪೊಲೀಸ್ ಬಿಗಿ ಭದ್ರತೆ

ಗಣರಾಜ್ಯೋತ್ಸವ ದಿನದಂದು ಪ್ರತಿ ವರ್ಷದಂತೆ ಈ ಬಾರಿ ಇನ್ನೂ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಒಟ್ಟು 16 ಪೊಲೀಸ್ ತುಕಡಿಗಳು, 5 ವಾದ್ಯ ವೃಂದ, 2 ಡಾಗ್ ಸ್ಕ್ವಾಡ್, 4 ಕ್ಯೂ ಆರ್​ಡಿ, 2 ಆರ್​ಐವಿ, 6 ಅಶ್ವ ತಂಡಗಳು ಪರೇಡ್​ನಲ್ಲಿ ಭಾಗಿಯಾಗಲಿವೆ ಅಂತ ಕಮಲ್ ಪಂತ್ ತಿಳಿಸಿದರು.

ಒಟ್ಟು 29 ಅಧಿಕಾರಿಗಳು, 464 ಸಿಬ್ಬಂದಿ ಕವಾಯಿತಿನಲ್ಲಿ ಭಾಗಿಯಾಗುತ್ತಾರೆ. ಪರೇಡ್ ಸುತ್ತಲೂ ಭದ್ರತೆಗೆ 11 ಡಿಸಿಪಿ, 20 ಎಸಿಪಿ, 60 ಪೊಲೀಸ್ ಇನ್ಸ್​ಪೆಕ್ಟರ್, 125 ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಸೇರಿದಂತೆ ಒಟ್ಟು 1,400 ಜನ ಪೊಲೀಸರನ್ನು ಭದ್ರತೆ ನಿಯೋಜನೆ ಮಾಡಲಾಗಿದೆ ಎಂದರು.

ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ನಿಗಾ ವಹಿಸಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಮತ್ತು ಬ್ಯಾಗೇಜ್ ಸ್ಕ್ಯಾನರ್ ಗಳನ್ನು ಅಳವಡಿಸಲಾಗಿದೆ.

ಪಾಸ್ ಇಲ್ಲದವರಿಗೆ ಪ್ರವೇಶವಿರುವುದಿಲ್ಲ. ಈ ಬಾರಿ ಆಂಧ್ರಪ್ರದೇಶದ ಪೊಲೀಸರು ಕವಾಯತಿನಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಅಂದು ಮೈದಾನದ ಸುತ್ತಲಿರುವ ಮಾರ್ಗಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *