ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿಗಾಗಿ ಮನೆಕೆಲಸಗಾರರ ಪ್ರತಿಭಟನೆ

ತುಮಕೂರು: ಮನೆ ಕೆಲಸಮಾಡಿ ಬದುಕುವ ಮಹಿಳೆಯರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ಕೂಲಿ, ವಸತಿ ಸೌಕರ್ಯಕ್ಕೆ ಒತ್ತಾಯಿಸಿ ಮನೆ ಕೆಲಸಗಾರರು ಪ್ರತಿಭಟನೆ ನಡೆಸಿದರು.

ನಗರದ ಜನ ಚಳವಳಿ ಕೇಂದ್ರದ ಎದುರು ಬುಧವಾರ ಅಂತರರಾಷ್ಟ್ರೀಯ ಮನೆ ಕೆಲಸಗಾರರ ಬೇಡಿಕೆ ದಿನದ ಭಾಗವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕೋವಿಡ್‌ನಿಂದಾಗಿ ಮನೆ ಕೆಲಸಗಾರರು ಕೆಲಸ ಕಳೆದುಕೊಂಡು ಸಿಗುತ್ತಿದ್ದ ಅಲ್ಪಸ್ವಲ್ಪ ಕೂಲಿಯೂ ಸಿಗದಾಗಿದೆ. ಮನೆ ಕೆಲಸಗಳಲ್ಲಿ ಒಂಟಿ ಮಹಿಳೆಯರು, ವಿಧವೆಯರು, ಕುಟುಂಬ ನಿರ್ವಹಣೆ ಹೊಣೆ ಹೊತ್ತವರು ತೊಡಗಿಸಿಕೊಂಡಿದ್ದರು. ಈಗ ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ವಿದ್ಯುತ್ ಬಿಲ್, ಅನಾರೋಗ್ಯ- ಎಲ್ಲವನ್ನೂ ನಿಭಾಯಿಸಿಕೊಂಡು ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

ಮನೆ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಕಾನೂನು ರೂಪಿಸಬೇಕು. ನಗರ ಪ್ರದೇಶಗಳಲ್ಲಿ ಹಂದಿಗೂಡಿನಂತಹ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದು, ವಸತಿ ಯೋಜನೆಗಳಲ್ಲಿ ಮನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಪರಿಹಾರವಾಗಿ ಮನೆ ಕೆಲಸದವರಿಗೆ ಪ್ರತಿ ತಿಂಗಳು ₹7,500 ಪರಿಹಾರವನ್ನು 6 ತಿಂಗಳ ಕಾಲ ನೀಡಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು. ಸ್ಮಾಟ್ ಕಾರ್ಡ್ ನೀಡಿದ ನಂತರ ಯಾವುದೇ ಸೌಲಭ್ಯ ನೀಡಿಲ್ಲ. ವಿದ್ಯಾರ್ಥಿ ವೇತನ, ಚಿಕಿತ್ಸಾ ವೆಚ್ಚ ಮರುಪಾವತಿ, ನಿವೃತ್ತಿ ವೇತನ ನೀಡುವಂತೆ ಆಗ್ರಹಿಸಿದರು.

ಮನೆ ಕೆಲಸಗಾರರ ಸಂಘದ ಕಾರ್ಯದರ್ಶಿ ಪಲ್ಲವಿ, ಶಾತಾಜ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ಸುಚಿತ್ ನಾಯಕ್, ಲಕ್ಷ್ಮಿಕಾಂತ, ಬೇಬಿ, ಮೇರಿ ಇದ್ದರು.

Donate Janashakthi Media

Leave a Reply

Your email address will not be published. Required fields are marked *