ಜನಹಿತ ಲೋಕಕಲ್ಯಾಣ, ರೈತಪರ ಆಲೋಚನೆಯುಳ್ಳ ಒಂದಿಷ್ಟು ಸಮಾನ ಆಸಕ್ತರ ಗುಂಪು ಸಾಂಘಿಕ ಪ್ರಯತ್ನದಿಂದ ನಡೆಸಿದ ಫಲ ಇಂದು ಸಾವಿರಾರು ಸಾಲುಮರಗಳು ಆಕಾಶದೆತ್ತರ ನಿಂತು ದಾರಿಹೋಕರಿಗೆ ನೆರಳು ನೀಡುತ್ತಾ ತಂಪು ನೀಡುವ ಸನ್ನೀವೇಶವು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಅಂಕಸಮುದ್ರ ರಸ್ತೆಯಲ್ಲಿ ಕಾಣುತ್ತದೆ.
ಬ್ಯಾಂಕ್ ಉದ್ಯೋಗಿ ಮಿತ್ರ ರಾಮಕೃಷ್ಣ ಆರ್ ಕೆ ಅಂದು ಅಂಬೇಡ್ಕರ್ ಜಯಂತಿ ನಿಮಿತ್ಯ ರಜೆ ಇದ್ದುದರಿಂದ ನಿತ್ಯ ಹಂಪಿ ಇದ್ದದ್ದೇ ಬೇರೆ ತಾಲೂಕಿನ ಕಡೆ ಹೊರ ಸಂಚಾರ ಹೋಗೋಣವೆಂದು ಬೈಕ್ ಹತ್ತಿ ಅಂಬಳಿಯ ಕಲ್ಲೇಶ್ವರ ದೇಗುಲ ಛಾಯಾಗ್ರಹಣ ಮುಗಿಸಿ ಪಕ್ಷಿ ಛಾಯಾಗ್ರಹಣಕ್ಕೆಂದು ಮಾಲವಿ ಜಲಾಶಯ ಕಡೆ ಹೋದ್ವಿ ನೀರಿಲ್ಲದೆ ಜಲಾಶಯ ಭಣಭಣಗುಟ್ಟುತ್ತಿತ್ತು. ಅಲ್ಲಿಂದ ಅಂಕಸಮುದ್ರ ಪಕ್ಷಿಧಾಮ ಕಡೆಯಾದ್ರೂ ಹೋಗೋಣವೆಂದು ಕಡಲಬಾಳ ಕಡೆಯಿಂದ ಅಂಕಸಮುದ್ರ ಕಡೆ ಹೋಗುವಾಗ ಓಯಸಿಸ್ ನಂತೆ ಈ ಸಾಲುಮರಗಳು ಕಂಡು ಬಂದವು. ನೋಡುತ್ತಿದ್ದಂತೆ ಸ್ವಲ್ಪ ಹೊತ್ತು ಇದ್ದುಹೋಗೋಣವೆನಿಸಿತು. ಸಾಲುಮರಗಳ ಪೋಟೋ ತೆಗೆದವು.
ಇಷ್ಟೊಂದು ಚೆನ್ನಾಗಿ ಮರಗಳನ್ನು ಬೆಳಸಿದವರು ಯಾರಿರಬಹುದು ಎಂದು ತಿಳಿಯಪ್ರಯತ್ನ ಮಾಡಿದಾಗ ಇದರ ಹಿಂದೆ ಕಥನವೊಂದು ಬೆಳಕಿಗೆ ಬಂತು.
ಕರ್ನಾಟಕ ಪ್ರಾಂತ ರೈತ ಸಂಘದ ಹಟ್ಟಿ ಅಡಿವೆಪ್ಪ ಮತ್ತವರ ತಂಡ ಈ ಕಾರ್ಯವನ್ನು ಮಾಡಿದೆ ಎಂದು ಪತ್ರಕರ್ತ ಮಿತ್ರ ಉಮೇಶ್ ಹೇಳಿದರು. ಅವರಿಂದ ಅಡಿವೆಪ್ಪ ಅವರನ್ನು ಸಂಪರ್ಕಿಸಿ ಅವರ ಕಾರ್ಯಕ್ಕೆ ಅಭಿನಂದನೆ ತಿಳಿಸಿದೆ.
ಆಗ ಅಡಿವೆಪ್ಪ ಅವರು ಇದು ನನ್ನೊಬ್ಬನ ಕಾರ್ಯವಲ್ಲ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರಾಗಿದ್ದ ರಾಮಣ್ಣ, ಸಕ್ರಪ್ಪ, ಬಸವಂತಪ್ಪ, ಎಚ್.ಕೊಟ್ರೇಶ್ ಇನ್ನಿತರೇ ಹತ್ತಾರು ಜನ ಇದರ ಹಿಂದೆ ಇದ್ದಾರೆ ಸರ್. ಈ ಸಾಲುಮರಗಳು ಈ ಮಟ್ಟಿಗೆ ಬರಲು ಸಾಕಷ್ಟು ಪ್ರಯತ್ನಗಳಾಗಿವೆ. ನಮ್ಮ ಜೊತೆ ಕೈಜೋಡಿಸಿದವರು. ಏತನೀರಾವರಿ ಯೋಜನೆಯ ಆಪರೇಟರ್ ಆಗಿದ್ದ ವಿಠ್ಠಲಮೂರ್ತಿ ಎನ್ನುವವರು ಸಹ. ಅವರು ರೈತಪರ ಕಾಳಜಿಯನ್ನು ಹೊಂದಿದ್ದವರು. ನೀರು ಹಂಚಿಕೆಯ ವಿಷಯದಲ್ಲಿ ಹಗಲು ರಾತ್ರಿ ಎನ್ನದೆ, ಬೇಸರಿಸಿಕೊಳ್ಳದೇ ಸಮಯವನ್ನು ಮೀರಿ ಕೆಲಸ ಮಾಡಿದವರು. ಅಂತಹ ಅಂತಃಕರಣ ಮನುಷ್ಯನಿಗೆ ಬೀಳ್ಕೊಡುವಾಗ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡೆವು. ಇದೇ ʼಮನೆಗೊಂದು ಗಿಡ ಊರಿಗೊಂದು ವನ ʼ ಘೋಷವಾಕ್ಯದಡಿಯಲ್ಲಿ ಸುತ್ತಮುತ್ತಲಿನ ಅಡವಿ ಆನಂದಹಳ್ಳಿ ಕಡಲಬಾಳ ಅಂಕಸಮುದ್ರ ಜನರು ಪಾಲ್ಗೊಂಡರು ಇವರೆಲ್ಲರಿಗೂ ಗಿಡಗಳನ್ನು ಅದರಲ್ಲೂ ಬೇವಿನ ಮರಗಳನ್ನೇ ಹಂಚಿದೆವು. ಇದು ಸುಮಾರಾಗಿ ೧೯೯೪ ರಲ್ಲಿ ಇರಬೇಕು. ಅಂದು ನಡೆಸಿದ ಸಾಂಘಿಕ ಪ್ರಯತ್ನವೇ ಇಂದು ತಾವು ಕಾಣುತ್ತಿರುವ ಮರಗಳೆಂದು ಹೇಳುವಾಗ ಅವರಿಗೆ ಆತ್ಮತೃಪ್ತಿ ಇತ್ತು. ನಿಮ್ಮೀ ಕಾರ್ಯ ಅನುಕರಣೀಯ ನಿಮಗೆ ಮತ್ತೊಮ್ಮೆ ಅಭಿನಂದನೆಗಳು ಎಂದು ಹೇಳಿದೆ.
ಮೂರು ಸಾವಿರಕ್ಕೂ ಹೆಚ್ಚು ಇರುವ ಈ ಬೇವಿನಮರಗಳ ಸಾಲು ನೋಡಲು ಒಮ್ಮೆ ಹೋಗಿಬನ್ನಿ. ವಸಂತ ಮಾಸದಲ್ಲಿ ಹೂ ಬಿಟ್ಟು ಹಸಿರಿನಿಂದ ಕಂಗೊಳಿಸುತ್ತಿರುವ ಮರಗಳ ಅಡಿಯಲ್ಲಿ ನೀವು ಕಳೆದುಹೋಗಿ ಬಿಡುತ್ತೀರಿ. ಈ ಬಿರು ಬೇಸಿಗೆ ಕಾಲದಲ್ಲಿ ಮೂರ್ನಾಲ್ಕು ಕಿಲೋಮೀಟರ್ ಗಟ್ಟಲೇ ಮರಗಳು ಹೆಮ್ಮರವಾಗಿ ಬೆಳೆದುನಿಂತು ದಾರಿಹೋಕರನ್ನು ಆಹ್ವಾನಿಸುತ್ತಿವೆ. ಈ ಕಾರ್ಯದಲ್ಲಿ ಭಾಗಿಯಾದ ಎಲ್ಲಾ ಅಂತಃಕರುಣಿಗಳಿಗೆ ಸಾವಿರದ ಶರಣು.
ಈ ಕಿರು ಬರಹ ಪೋಸ್ಟ್ ಮಾಡಿದ ಮೇಲೆ ಅರಣ್ಯ ಇಲಾಖೆಯು ನೆಡತೋಪು ಕೈಗೆತ್ತಿಕೊಂಡು ನಿರ್ವಹಿಸಿದೆ ಎಂದು ಅರಣ್ಯ ಇಲಾಖೆಯ ಮಿತ್ರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆ ಸಂದರ್ಭದಲ್ಲಿ ಕೆಲಸ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ವನಪಾಲಕರು ಯಾರೆಂದು ಮಾಹಿತಿ ತಿಳಿದುಬಂದಿಲ್ಲ. ಇಲಾಖೆಯೊಂದಿಗೆ ಕೈಜೋಡಿಸಿ ಜನಸಹಭಾಗಿತ್ವವಿದ್ದರೆ ಮರ ಬೆಳಸಿ ಬರ ಮುಂದೂಡಬಹುದು ಇದು ಎಲ್ಲಾ ಕಡೆ ನಡೆದರೆ ಹಸಿರು ಕರ್ನಾಟಕ ದೂರವಿಲ್ಲ
ಶಿವಶಂಕರ ಬಣಗಾರ