ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯವಾಗಿ ಸಿಐಟಿಯು ಸಂಘಟನೆಯು ಹಮ್ಮಿಕೊಂಡಿರುವ ಅನ್ನಪೂರ್ಣ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಬೆಂಗಳೂರು ಜಿಲ್ಲಾ ಮನೆಗೆಲಸಗಾರರ ಸಂಘಟನೆಯ ವತಿಯಿಂದ ಉಚಿತವಾಗಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು.
ಬೆಂಗಳೂರು ನಗರದ ಬಾಪೂಜಿನಗರದಲ್ಲಿ ವಾಸವಾಗಿರುವ ಮನೆ ಕೆಲಸಗಾರರಿಗೆ ಅನ್ನಪೂರ್ಣ ಅಭಿಯಾನದ ಅಂಗವಾಗಿ ಮನೆಗೆಲಸಗಾರರ ಸಂಘದ ಮುಖಂಡರು ಹಾಗೂ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಗೀತಾ ರವಿಕುಮಾರ್ ಅವರು ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ವಿತರಣೆ ಮಾಡಿದರು.
ಇದನ್ನು ಓದಿ: ಸಿಐಟಿಯು ವತಿಯಿಂದ ಅನ್ನಪೂರ್ಣ ಅಭಿಯಾನಕ್ಕೆ ಚಾಲನೆ
ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಿ ಚಂದ್ರಶೇಖರ್ ಅವರು ʻʻಸಿಐಟಿಯು ನೇತೃತ್ವದಲ್ಲಿ ಈಗಾಗಲೇ ವಿವಿದೆಡೆ ಅಸಂಘಟಿತ ಕಾರ್ಮಿಕರಿಗಾಗಿ ಸಹಾಯಸ್ತದ ನೆರವನ್ನು ವಿತರಿಸುತ್ತಿದ್ದು, ನಗರದ ಹಲವು ಭಾಗಗಳಲ್ಲಿ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆʼʼ ಎಂದು ತಿಳಿಸಿದರು.
ಬಾಪೂಜಿನಗರ ಪ್ರದೇಶದಲ್ಲಿ ವಾಸವಾಗಿರುವ ಮನೆ ಕೆಲಸಗಾರರಲ್ಲಿ ಇದುವರೆಗೆ 60 ಜನರಿಗೆ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಅಲ್ಲದೆ ಇನ್ನೂ ಹೆಚ್ಚಿನ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಲಿದ್ದು, ಸಂಘಟನೆಯು ಕೋವಿಡ್ ನಿಯಮಗಳನ್ನು ಪಾಲಿಸಿ, ಹೆಚ್ಚಿನ ಜನಸಂದಣಿ ಸೇರದಂತೆ ಹಂತಹಂತವಾಗಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿರುವುದಾಗಿ ಸಂಘಟನೆಯ ಮುಖಂಡರು ತಿಳಿಸಿದರು.
ಅನ್ನಪೂರ್ಣ ಅಭಿಯಾನ ಕಾರ್ಯಕ್ರಮದಲ್ಲಿ ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ಮುಖಂಡರಾದ ಕೆ. ರವಿಕುಮಾರ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಮುಖಂಡರಾದ ಎನ್ ಪಾರ್ಥಿಬನ್ ಅವರು ಭಾಗವಹಿಸಿದ್ದರು.