ಬೆಂಗಳೂರು: ಕೋವಿಡ್ ಲಸಿಕೆ ವಿತರಣೆ ಪ್ರಮಾಣವನ್ನು ಹೆಚ್ಚಿಸಲು ಕ್ರಮಕೈಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಲಸಿಕಾ ವಾಹನಗಳು ನಗರದಲ್ಲಿ ಸಂಚರಿಸಲಿದೆ. ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದರೆ. ಇಂದು ಲಸಿಕಾ ವಾಹನಗಳಿಗೆ ಚಾಲನೆ ನೀಡಲಾಯಿತು.
80 ದ್ವಿಚಕ್ರ ವಾಹನ ಹಾಗೂ 16 ಕಾರುಗಳನ್ನು ಬಳಸುವ ಮೂಲಕ ಲಸಿಕೆ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಪ್ರತಿ ವಲಯಕ್ಕೆ 8 ದ್ವಿಚಕ್ರ ವಾಹನಗಳು ಹಾಗೂ 2 ಕಾರುಗಳನ್ನು ಬಿಬಿಎಂಪಿ ಒದಗಿಸಲಿದೆ. ಸ್ವಯಂಸೇವಕರು ಬಿಬಿಎಂಪಿ ಸಿಬ್ಬಂದಿಗಳಿಗೆ ನೆರವಾಗಲಿದ್ದಾರೆ. ಈ ಲಸಿಕೆ ವಾಹನಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.
ಲಸಿಕಾ ವಾಹನಗಳ ಸಿಬ್ಬಂದಿಯು ಮನೆ ಮನೆಗೆ ತೆರಳಿ, ಲಸಿಕೆ ಪಡೆಯದವರ ಮಾಹಿತಿ ಪಡೆಯಲಿವೆ. ಆನಂತರ ಅವರನ್ನು ಹತ್ತಿರದಲ್ಲಿಯೇ ಇರುವ ಶಿಬಿರ ಕೇಂದ್ರಕ್ಕೆ ಕರೆದುಕೊಂಡು ಹೋಗಲಿದ್ದು, ಅಲ್ಲಿ ಲಸಿಕೆ ಪಡೆಯಬಹುದಾಗಿದೆ.
ಆರೋಗ್ಯ ಸಿಬ್ಬಂದಿ ತಂಡವು ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ತಲಾ ಒಂದು ವಾರ್ಡ್‌ನಲ್ಲಿಮನೆ ಮನೆಗೆ ಭೇಟಿ ಕೊಟ್ಟು, ಲಸಿಕೆ ಪಡೆಯದವರಿಗೆ ಲಸಿಕೆ ಹಾಕುತ್ತಿವೆ. ಇದುವರೆಗೆ ಸುಮಾರು 70 ವಾರ್ಡ್‌ಗಳಲ್ಲಿ 10 ದಿನಗಳಿಂದ 35 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ” ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಪಡೆಯಲು ಅರ್ಹರಾದ ಶೇಕಡಾ 88ರಷ್ಟು ಮಂದಿ ಮೊದಲ ಡೋಸ್ ಹಾಗೂ ಶೇಕಡಾ 62ರಷ್ಟು ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಎರಡನೇ ಡೋಸ್ ಪಡೆಯದವರ ಪಟ್ಟಿಯನ್ನು ಕೋವಿನ್ ಪೋರ್ಟಲ್ ನಿಂದ ಪಡೆದು ಅವರಿಗೆ ಕರೆ ಮಾಡಿ ತಿಳಿವಳಿಕೆ ನೀಡಲಾಗುತ್ತಿದೆ.
”ನಗರದಲ್ಲಿ ಇಲ್ಲಿಯವರೆಗೆ 1,36,99,018 ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 80,57,563 ಮಂದಿ(ಶೇಕಡಾ 88) ಮೊದಲ ಡೋಸ್ ಮತ್ತು 56,41,455 ಮಂದಿ(ಶೇಕಡಾ 62) ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಪಾಲಿಕೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆʼʼ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ವಿಶೇಷ ಆಯುಕ್ತ ಡಾ. ಕೆ.ವಿ.ತ್ರಿಲೋಕ್‌ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಮತ್ತಿತರರು ಉಪಸ್ಥಿತರಿದ್ದರು.