ನವದೆಹಲಿ: ಗೃಹಿಣಿಯರ ಶ್ರಮಕ್ಕೆ ಮಹತ್ವದ ಮಾನ್ಯತೆ ನೀಡಿರುವ ಸುಪ್ರೀಂ ಕೋರ್ಟ್, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಅವರ ಗೃಹಸೇವೆಯ ಮೌಲ್ಯವನ್ನು ಕನಿಷ್ಠ ತಿಂಗಳಿಗೆ ₹30 ಸಾವಿರ ಎಂದು ಪರಿಗಣಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ. ‘ಗೃಹ ಆರೈಕೆಯ ನಷ್ಟ’ವನ್ನು ಪರಿಹಾರದ ಪ್ರತ್ಯೇಕ ಅಂಶವಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠ, ಗೃಹಿಣಿಯರ ಕೊಡುಗೆ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ; ಅದು ಸಮಾಜ ಮತ್ತು ರಾಷ್ಟ್ರ ನಿರ್ಮಾಣದ ಪ್ರಮುಖ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ತೀರ್ಪಿನ ವೇಳೆ ನ್ಯಾಯಮೂರ್ತಿ ಕರೋಲ್, ಗೃಹಿಣಿಯರು ಮಾನವ ಸಂಪನ್ಮೂಲದ ಬೆಳವಣಿಗೆಗೆ ಮತ್ತು ರಾಷ್ಟ್ರದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ಅವರು ರಾಷ್ಟ್ರ ನಿರ್ಮಾಪಕರು” ಎಂದು ಹೇಳಿದ್ದಾರೆ.
ನ್ಯಾಯಾಲಯದ ನಿರ್ದೇಶನದ ಪ್ರಕಾರ, ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯರ ಪ್ರಕರಣಗಳಲ್ಲಿ ಮನೆಯ ಸುಗಮ ನಿರ್ವಹಣೆಗೆ ನೀಡಿದ ಕೊಡುಗೆ, ಮಕ್ಕಳಿಗೆ ದೊರೆಯುತ್ತಿದ್ದ ತಾಯಿಯ ಬೆಂಬಲದ ನಷ್ಟ ಹಾಗೂ ಸಂಗಾತಿ ಮತ್ತು ಕುಟುಂಬ ಸದಸ್ಯರಿಗೆ ನೀಡುತ್ತಿದ್ದ ಆರೈಕೆಯ ನಷ್ಟವನ್ನು ಪರಿಗಣಿಸಿ ‘ಗೃಹ ಆರೈಕೆಯ ನಷ್ಟ’ ಎಂಬ ಶೀರ್ಷಿಕೆಯಡಿ ತಿಂಗಳಿಗೆ ₹30 ಸಾವಿರ ಮೌಲ್ಯವನ್ನು ಸೇರಿಸಬೇಕು. ಈ ಮೊತ್ತವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ.10ರಷ್ಟು ಹೆಚ್ಚಿಸಬೇಕು ಎಂದೂ ಸೂಚಿಸಲಾಗಿದೆ.
ಗೃಹಿಣಿಯರು ಸಂಬಳ ಪಡೆಯದ ಗೃಹಕಾರ್ಯ ಮತ್ತು ಆರೈಕೆ ಸೇವೆಗಳ ಮೂಲಕ ಕುಟುಂಬ ಹಾಗೂ ಆರ್ಥಿಕ ವ್ಯವಸ್ಥೆಗೆ ಅಪಾರ ಕೊಡುಗೆ ನೀಡುತ್ತಿದ್ದರೂ, ಆ ಶ್ರಮಕ್ಕೆ ಸೂಕ್ತ ಆರ್ಥಿಕ ಮೌಲ್ಯ ದೊರೆಯುತ್ತಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಕುಟುಂಬದ ಇತರ ಸದಸ್ಯರು ಗಳಿಸುವ ಆದಾಯದ ಮೇಲೆ ಮಹಿಳೆಯರು ಅವಲಂಬಿತರಾಗಿದ್ದಾರೆ ಎಂಬ ಕಲ್ಪನೆ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.
ಇನ್ನು, ಮಹಿಳೆಯರು ಹೊರಗಡೆಯೂ ಉದ್ಯೋಗದಲ್ಲಿದ್ದರೆ, ನ್ಯಾಯಾಲಯದಲ್ಲಿ ಸಾಬೀತಾದ ಅವರ ಮಾಸಿಕ ಆದಾಯದ ಜೊತೆಗೆ ‘ಗೃಹ ಆರೈಕೆಯ ನಷ್ಟ’ದ ಮೊತ್ತವನ್ನೂ ಹೆಚ್ಚುವರಿಯಾಗಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದೆ.
ಹರಿಯಾಣದಲ್ಲಿ 2001ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಕುಟುಂಬಕ್ಕೆ ಪರಿಹಾರ ಹೆಚ್ಚಿಸುವ ಪ್ರಕರಣದ ವಿಚಾರಣೆ ವೇಳೆ ಈ ಮಹತ್ವದ ತೀರ್ಪು ಹೊರಬಿದ್ದಿದ್ದು, ಮನೆ ಕೆಲಸಗಾರ ಮಹಿಳೆಯರ ಶ್ರಮಕ್ಕೆ ನ್ಯಾಯಾಂಗದಿಂದ ದೊರೆತ ಮಹತ್ವದ ಮಾನ್ಯತೆಯಾಗಿ ಇದನ್ನು ಪರಿಗಣಿಸಲಾಗುತ್ತಿದೆ.
