ಮಂಡ್ಯ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರೈತ ಹೋರಾಟಗಾರ, ಮಾಜಿ ಸಚಿವ ಜಿ ಮಾದೇಗೌಡ ಇಂದು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ನಾಳೆ ಬೆಳಗ್ಗೆ ಮಂಡ್ಯದ ಬಂಧೀಗೌಡ ಬಡಾವಣೆಯಲ್ಲಿರುವ ಮಾದೇಗೌಡರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತರಲಾಗುವುದು. ನಂತರ ಗಾಂಧಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲಿಂದ ಮದ್ದೂರು ಮುಖಾಂತರ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಜತೆಗೆ ಭಾರತೀ ಕಾಲೇಜು ಅವರಣದಲ್ಲಿಯೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಮಧ್ಯಾಹ್ನ 2.30 ರ ಸುಮಾರಿಗೆ ಹನುಮಂತನಗರದಲ್ಲಿ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಜಿ. ಮಾದೇಗೌಡ ಅವರ ಪುತ್ರ ಮಧು.ಜಿ.ಮಾದೇಗೌಡ ಮಾಹಿತಿ ನೀಡಿದ್ದಾರೆ
ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಜಿ ಮಾದೇಗೌಡ ಅವರು ರಾಜ್ಯದ ನೆಲ ಜಲ, ರೈತರ ದನಿಯಾದವರು. 1959ರಲ್ಲಿ ತಾಲೂಕು ಮಂಡಳಿ ಚುನಾವಣೆ ಮೂಲಕ ತಮ್ಮ ರಾಜಕೀಯ ಆರಂಭಿಸಿದ ಮಾದೇಗೌಡ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಬಳಿಕ 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980-83ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 89 ವರ್ಷದ ಇಳಿ ವಯಸ್ಸಿನಲ್ಲೂ ಯೂ ಕಾವೇರಿ ನದಿ ನೀರಿನ ವಿಷಯವಾಗಿ ನಿರಂತರ ಹೋರಾಟ ಮಾಡಿ ಮಂಡ್ಯ ರೈತರ ಧ್ವನಿಯಾಗಿದ್ದರು. ಅಷ್ಟೇ ಅಲ್ಲದೇ, ಮಹಾದಾಯಿ ಹೋರಾಟಕ್ಕೂ ಬೆಂಬಲ ನೀಡಿದ್ದ ಅವರು, ರಾಜ್ಯದ ರೈತರ ಹಿತ ಕಾಯಲು ಸದಾ ಸಿದ್ದ ಎಂದಿದ್ದರು,
ಸುಮಾರು ಮೂರು ವರ್ಷಗಳಿಂದ ಸ್ವತಃ ಅವರೇ ಮುಂದೆ ನಿಂತು ಪ್ರಾರಂಭಿಸಿದ್ದ ಜಿ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಆಸ್ಪತ್ರೆಯು ಮದ್ದೂರು ತಾಲೂಕಿನ ಭಾರತಿನಗರ ಬಳಿಯಿದೆ.