ಪಾಂಡವಪುರ : ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರೇ ಥಳಿಸಿದ ಘಟನೆ ಪಾಂಡವಪುರ ತಾಲೂಕು ಕಟ್ಟೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ ಮಕ್ಕಳಿಂದ ಥಳಿತಕ್ಕೊಳಗಾಗಿದ್ದು, ವಿಷಯ ತಿಳಿದ ಪೋಷಕರು ಮುಖ್ಯ ಶಿಕ್ಷಕನನ್ನು ಕೂಡಲೇ ಬಂಧಿಸಿ ಸೇವೆಯಿಂದ ವಜಾ ಮಾಡಬೇಕೆಂದು ಪ್ರತಿಭಟನೆ ನಡೆಸಿದ್ದಾರೆ.
ಶಾಲೆಯ ಸಮೀಪವೇ ಇರುವ ವಿದ್ಯಾರ್ಥಿನಿಯರ ನಿಲಯದ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ಈ ಮುಖ್ಯ ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದ್ದು, ವಿದ್ಯಾರ್ಥಿ ನಿಲಯದ ಪಾಲಕಿ ಕೆ. ಎಸ್. ನಮಿತಾ ಎಂಬವರು ಕೆಆರ್‌ಎಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಮುಖ್ಯ ಶಿಕ್ಷಕ ಚಿನ್ಮಯಾನಂದಮೂರ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಖ್ಯ ಶಿಕ್ಷಕ ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳನ್ನು ಶಾಲೆಯ ತನ್ನ ಕೊಠಡಿಗೆ ಕರೆಸಿಕೊಂಡು ಲೈಂಗಿಕ ಕುರುಕುಳ ನೀಡುತ್ತಿದ್ದ ಎಂದು ಸಂತ್ರಸ್ತ ವಿದ್ಯಾರ್ಥಿನಿಯರೇ ತನಗೆ ತಿಳಿಸಿದ್ದಾರೆ ಎಂದು ನಮಿತಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಪೋಷಕರಿಂದ ಪ್ರತಿಭಟನೆ: ಗುರುವಾರ ವಿದ್ಯಾರ್ಥಿನಿಲಯದ ಬಳಿ ಜಮಾಯಿಸಿದ ವಿದ್ಯಾರ್ಥಿನಿಯರ ಪೋಷಕರು ತೀವ್ರ ಪ್ರತಿಭಟನೆ ನಡೆಸಿ ಕೂಡಲೇ ಮುಖ್ಯ ಶಿಕ್ಷಕ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಸಿ. ಎಸ್. ಪುಟ್ಟರಾಜು ಅವರು ಪೋಷಕರನ್ನು ಸಮಾಧಾನಪಡಿಸಿ ಆರೋಪಿ ಶಿಕ್ಷಕನಿಗೆ ತಕ್ಕ ಶಿಕ್ಷೆ ಆಗುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಮುಕ ಶಿಕ್ಷಕನ ವಿರುದ್ಧ ಎಫ್ಐಆರ್ : ಹೆಡ್ ಮಾಸ್ಟರ್ ಚಿನ್ಮಯಾನಂದ ಮೂರ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಾಸ್ಟೆಲ್ ವಾರ್ಡನ್ ಕೊಟ್ಟ ದೂರಿನ ಅನ್ವಯ ಕೆ.ಆರ್.ಎಸ್ ಠಾಣಾ ಪೊಲೀಸರು ಐಪಿಸಿ 354(A), 354(D),506,509 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೆಡ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಿನ್ಮಾಯಾನಂದ ಮೂರ್ತಿ ವಿದ್ಯಾರ್ಥಿನಿಯರಿಗೆ ತನ್ನ ಕಚೇರಿಗೆ ಕರೆಸಿಕೊಂಡು ದೌರ್ಜನ್ಯ ಎಸಗುತ್ತಿದ್ದನಂತೆ. ಖಾಸಗಿ ಅಂಗಾಂಗ ಮುಟ್ಟಿ ಮುತ್ತು ಕೊಡುತ್ತಿದ್ದನಂತೆ. ತನ್ನ ಮೊಬೈಲ್ನಲ್ಲಿರುವ ಬ್ಲೂ ಫಿಲ್ಮ್ ತೋರಿಸಿ ಲೈಂಗಿಕ ಕ್ರಿಯೆಗೆ ಪ್ರೇರಣೆ ಮಾಡುತ್ತಿದ್ದ. ಸೆಕ್ಸ್ ಗೆ ಸಹಕರಿಸದಿದ್ರೆ ಪರೀಕ್ಷೆಯಲ್ಲಿ ಅನುರ್ತಿರ್ಣ ಮಾಡೋದಾಗಿ ಧಮ್ಕಿ ಹಾಕುತ್ತಿದ್ದ. ಇತರೆ ಸಹ ಶಿಕ್ಷಕಿಯರ ಫೋಟೋ ತೋರಿಸಿ ಅಶ್ಲೀಲವಾಗಿ ವಿದ್ಯಾರ್ಥಿನಿಯರ ಜೊತೆ ಮಾತಾಡುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿವೆ.