ಸರಕಾರವೇ ಲಸಿಕೆ ವಿತರಿಸಲಿ-ಮಂಡಳಿ ನಿಧಿ ಖಾಸಗಿ ಆಸ್ಪತ್ರೆಗಳಿಗೆ ನೀಡಬಾರದೆಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಕಾರ್ಮಿಕರ ಹಿತದೃಷ್ಟಿಯಿಂದ ಸರಕಾರಿ ಆಸ್ಪತ್ರೆಗಳ ಮೂಲಕ ಲಸಿಕೆ ವಿತರಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ನೀಡಲು ಉದ್ದೇಶಿಸಿರುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಮತ್ತು ವಿವಿಧ ಪ್ರಮುಖ ಬೇಡಿಕೆಗಳು ಒಳಗೊಂಡಂತೆ ಕಟ್ಟಡ ನಿರ್ಮಾಣ ಕಾರ್ಮಿಕರು ಸಿಐಟಿಯು ನೇತೃತ್ವದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಘಟನೆಯ ಸದಸ್ಯರು ರಾಜ್ಯವ್ಯಾಪಿ ಹೋರಾಟವನ್ನು ನಡೆಸಿದರು.

ರಾಜ್ಯ ಸರಕಾರವು ರಾಜ್ಯದಲ್ಲಿ 40 ಲಕ್ಷ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ ಕೋವಿಡ್ ಲಸಿಕೆಗಳನ್ನು ನೀಡಲು ನಿರ್ಧರಿಸಿದ್ದು ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ನೀಡಬೇಕು. ಅದನ್ನು ಬಿಟ್ಟು ಖಾಸಗಿ ಆಸ್ಪತ್ರೆಗಳ ಮೂಲಕ ನೀಡಬಾರದೆಂದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಇದನ್ನು ಓದಿ: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ 700 ಕೋಟಿ ರೂ ಖಾಸಗಿ ಆಸ್ಪತ್ರೆಗೆ

ಉಚಿತವಾಗಿ ಕೋವಿಡ್ ಲಸಿಕೆಯನ್ನು ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಮೊದಲನೆ ಹಾಗೂ ಎರಡನೇ ಡೋಸ್‌ಗಳನ್ನು ತಮ್ಮ ತಮ್ಮ ಊರುಗಳಲ್ಲಿರುವ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಮಿಕ ಆಯುಕ್ತರು ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಸಭೆ ನಡೆಸಿ ಪ್ರತಿ ಲಸಿಕೆಗೆ 780 ರೂಪಾಯಿ ದರದಲ್ಲಿ ರಾಜ್ಯದ 30 ಲಕ್ಷ ನೋಂದಾಯಿತ ಕಾರ್ಮಿಕರಿಗೆ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಲಸಿಕೆ ನೀಡುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಇದರಿಂದ ಕಲ್ಯಾಣ ಮಂಡಳಿಯ ಸುಮಾರು 624 ಕೋಟಿ ಹಣವು ನಿರಾಯಸವಾಗಿ 400 ಖಾಸಗಿ ಆಸ್ಪತ್ರೆಗಳ ಪಾಲಾಗಲಿದೆ ಮಂಡಳಿಯ ನಿಧಿಯನ್ನು ಖಾಲಿ ಮಾಡುವ ಹುನ್ನಾರವಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಾಗಿರುವ ನಿಧಿಯನ್ನು ಈ ರೀತಿ ದುರ್ಬಳಕೆ ಮಾಡುವ ಪ್ರಯತ್ನವು ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು 2020 ಮಾರ್ಚಿನ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ದೇಶನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

 

 

ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ ಎಲ್ಲ ಕೋವಿಡ್ ನಿಯಮಾವಳಿಗಳನ್ನು ಧಿಕ್ಕರಿಸಿ ರಾಜ್ಯದ ಜನತೆಯನ್ನು ವೀಶೇಷವಾಗಿ ಕೋವಿಡ್ ಪೀಡಿತ ಕುಟುಂಬಗಳನ್ನು ಸುಲಿಗೆ ಮಾಡಿದ್ದಾರೆ.  ಇಂತಹ ಸುಲಿಗೆಕೋರರಿಗೆ ಬಡವರ ಕಲ್ಯಾಣಕ್ಕಾಗಿ ಸಂಗ್ರಹಹಿಸಲಾದ ಕಾರ್ಮಿಕ ಮಂಡಳಿಯಲ್ಲಿ ಇರುವ ಸೆಸ್ ಹಣವನ್ನು ಧಾರೆ ಎರೆಯಲು ಹೊರಟಿದ್ದಾರೆ. ಈಗಾಗಲೇ ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್ ಹಾಗೂ ಆರೋಗ್ಯ ಸುರಕ್ಷಾ ಕಿಟ್, ಸಾಪ್ಟವೇರ್ ಅಳವಡಿಕೆ  ಹಾಗೂ ಕಂಪ್ಯೂಟರ್ ಮತ್ತು ಟಿವಿಗಳ ಖರೀದಿಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅನ್ನ, ಆಹಾರ, ಆರೋಗ್ಯ, ಶಿಕ್ಷಣ ಮತ್ತು ಬದುಕಿನ ಭದ್ರತೆ ಒದಗಿಸುವುದು ಕೇಂದ್ರ ಮತ್ತು ರಾಜ್ಯಗಳ ಕೆಲಸವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅದಕ್ಕಾಗಿ ಕೆಲವು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂ.ಗಳ ಬಜೆಟ್ ಅನುದಾನವನ್ನು ಖರ್ಚು ಮಾಡುತ್ತಿವೆ. ಆದರೆ ನಮ್ಮ ರಾಜ್ಯ ಸರ್ಕಾರ ಮಾತ್ರ ಈ ಎಲ್ಲ ಕೆಲಸಗಳಿಗೆ ತನ್ನ ಹಣವನ್ನು ಖರ್ಚು ಮಾಡುವ ಬದಲು ಸರ್ವೋಚ್ಚ  ನ್ಯಾಯಾಲಯದ ಅದೇಶವನ್ನು ಗಾಳಿಗೆ ತೂರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಜಾರಿ ಮಾಡಿಸುತ್ತಾ ಸಾವಿರಾರು ಕೋಟಿ ಹಣವನ್ನು ಖರ್ಚು ಮಾಡಿಸುತ್ತಿದೆ. ಇಂತಹ ಕಾರ್ಮಿಕ ವಿರೋಧಿ ಕ್ರಮವನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರತಿಭಟನೆಯ ಮೂಲಕ ಸರಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಮೂಲಕ ನಿರ್ಮಾಣ ವಲಯದ ಕಾರ್ಮಿಕರು ಹಾಗೂ ವಲಸೆ ಕಾರ್ಮಿಕರಿಗೆ ಸೆಪ್ಟೆಂಬರ್ 2 ರಿಂದ ನೀಡಲು ಉದ್ದೇಶಿಸಿರುವ ಲಸಿಕೆ ಕಾರ್ಯಕ್ರಮವನ್ನು ರದ್ದುಪಡಿಸಬೇಕು ತಾವು ಈ ಬಗ್ಗೆ ಅಗತ್ಯ ಕ್ರಮವಹಿಸದಿದ್ದಲ್ಲಿ ನಾವು ನಾಯ್ಯಾಲಯದ ಮೊರೆ ಹೋಗಬೇಕಾಗುತ್ತದೆ ಮತ್ತು ತೀವ್ರ ತೆರವಾದ ಹೋರಾಟಗಳಿಗೆ ಮುಂದಾಗಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌(ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ, ಸಂಘಟನೆಯ ಪರವಾಗಿ ಲಿಂಗರಾಜು, ಕೆ.ಎಸ್.ಲಕ್ಷ್ಮಿ, ಐಎನ್‌ಟಿಯುಸಿ ಪರವಾಗಿ ಶಾಮಣ್ಣರೆಡ್ಡಿ, ಎನ್‌ಸಿಎಲ್‌ ಪರವಾಗಿ ಧನಶೇಖರ್, ಎಐಟಿಯುಸಿ ಪರವಾಗಿ ಗುರುವಯ್ಯ, ಎಐಸಿಸಿಟಿಯು ಪರವಾಗಿ ಅಪ್ಪಣ್ಣ, ಎಐಯುಟಿಯುಸಿ ಪರವಾಗಿ ಷಣ್ಮುಗಂ ಮತ್ತು ನೂರಾರು ಕಾರ್ಮಿಕರು ಭಾಗವಹಿಸಿದ್ದರು.

ಕೋಲಾರದಲ್ಲಿ ನಡೆದ ಪ್ರತಿಭಟನೆಯ ಭಾಗವಾಗಿ ಅಂಚೆ ಕಚೇರಿಯಿಂದ ಮುಖ್ಯಮಂತ್ರಿಗೆ ಪತ್ರ ಚಳುವಳಿ ಮೂಲಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಫೆಡರೇಶನ್ ನ ಮುಖಂಡರಾದ ಎಂ ಭೀಮರಾಜ್, ವಿಜಯಕೃಷ್ಣ, ಆರೋಗ್ಯನಾಥನ್,  ಹೊನ್ನೇನಹಳ್ಳಿ ಅಂಬರೀಶ್, ರಾಮಚಂದ್ರಪ್ಪ, ಗೋಪಾಲಪ್ಪ ವೆಂಕಟೇಶ್, ಆನಂದ್ ಮುಂತಾದವರು ಭಾಗವಹಿಸಿದ್ದರು.

ಬೆಂಗಳೂರು, ಕೋಲಾರ ಸೇರಿದಂತೆ ಆನೇಕಲ್‌, ಉಡುಪಿ, ಮಂಗಳೂರು, ತುಮಕೂರು, ಸೇರಿದಂತೆ ವಿವಿದೆಡೆ ಪ್ರತಿಭಟನೆಗಳು ನಡೆದಿವೆ.

Donate Janashakthi Media

Leave a Reply

Your email address will not be published. Required fields are marked *