ಮಂಡಕ್ಕಿ ಉತ್ಪಾದನೆ ಮೇಲಿನ ಜಿಎಸ್‍ ಟಿ ರದ್ದುಗೊಳಿಸಿ – ಸಿದ್ದರಾಮಯ್ಯ ಆಗ್ರಹ

  • ಕೇಂದ್ರ ಬಿಜೆಪಿ ಸರ್ಕಾರದ ತಲೆಕೆಳಗಾದ ಆರ್ಥಿಕ ನೀತಿಗಳಿಂದ ದೇಶದ ದುಡಿಯುವ ವರ್ಗಗಳು ಹೈರಾಣಾಗಿವೆ
  • ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲೂ ಶೇ.5ರಷ್ಟು GST ವಿಧಿಸುತ್ತಿರುವುದು ಕ್ರೌರ್ಯದ ಪರಮಾವಧಿ
  • ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವರಿಗೆ ಗಳಿಕೆ ಇರುವುದಿಲ್ಲವೆನ್ನುವ ಕಾಮನ್ ಸೆನ್ಸ್ ಡಬ್ಬಲ್ ಎಂಜಿನ್ ಸರ್ಕಾರಕ್ಕಿಲ್ಲ

ಬೆಂಗಳೂರು : ಮಂಡಕ್ಕಿ ಮತ್ತಿತರ ಆಹಾರ ಉತ್ಪಾದನೆ ಮೇಲೆ ವಿಧಿಸಿರುವ ಶೇ 5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‍ಟಿಯನ್ನು) ರದ್ದುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕೂಡಲೇ ಪತ್ರ ಬರೆಯಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಮಂಡಕ್ಕಿ ಭಟ್ಟಿಯಲ್ಲಿ ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟೂ ಗಳಿಕೆ ಇರುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಡಬ್ಬಲ್ ಎಂಜಿನ್ (ಕೇಂದ್ರ– ರಾಜ್ಯ) ಸರ್ಕಾರಗಳಿಗೆ ಇದ್ದಂತಿಲ್ಲ. ಜನರನ್ನು ಶತ್ರುಗಳೆಂದು ಭಾವಿಸಿ ಎರಡೂ ಸರ್ಕಾರಗಳು ಕೆಲಸ ಮಾಡುತ್ತಿವೆ. ಈ ರೀತಿ ತೆರಿಗೆ ವಿಧಿಸುವುದು ಕ್ರೌರ್ಯದ ಪರಮಾವಧಿ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮಂಡಕ್ಕಿ ಉತ್ಪಾದನೆಗೆ ತಗಲುವ ವೆಚ್ಚ, ಮಾರಾಟ ವೆಚ್ಚಕ್ಕಿಂತ ಹೆಚ್ಚಾಗಿದೆ. ಮಂಡಕ್ಕಿ ಉತ್ಪಾದಿಸಿ ಗ್ರಾಹಕರ ಕೈಗೆ ತಲುಪುವವರೆಗೂ ಬೆಲೆಗಳ ಏರಿಳಿತ ಸಾಮಾನ್ಯ. ಮಳೆಗಾಲದಲ್ಲಿ ಅಕ್ಕಿ ನೆನೆದರೆ ಮಂಡಕ್ಕಿ ಭಟ್ಟಿಗಳನ್ನು ವಾರಗಟ್ಟಲೆ ಮುಚ್ಚಬೇಕಾಗುತ್ತದೆ. ಭಟ್ಟಿ ಮುಚ್ಚಿದರೆ ಮಂಡಕ್ಕಿ ಕಾರ್ಮಿಕರಿಗೆ ಬೇರೆ ಕಡೆ ಕೂಲಿ ಕೆಲಸವೂ ಸಿಗುವುದಿಲ್ಲ. ಸರ್ಕಾರಕ್ಕೆ ಕನಿಷ್ಠ ಮಾನವೀಯತೆ ಇದ್ದಿದ್ದರೂ ಮಂಡಕ್ಕಿ ಮತ್ತಿತರ ಸಣ್ಣ-ಪುಟ್ಟ ಬಡವರ ಆಹಾರ ಉತ್ಪಾದನೆ ಮೇಲೆ ಜಿಎಸ್‍ಟಿ ವಿಧಿಸುತ್ತಿರಲಿಲ್ಲ. ದಾವಣಗೆರೆಯೊಂದರಲ್ಲೆ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಮಂಡಕ್ಕಿ ಭಟ್ಟಿಯನ್ನೇ ನೆಚ್ಚಿಕೊಂಡಿವೆ. ಅಲ್ಲಿನ ಮಂಡಕ್ಕಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದವರು ನನ್ನನ್ನು ಭೇಟಿಯಾಗಿ ಜಿಎಸ್‍ಟಿ ವಿಧಿಸಿರುವುದರಿಂದ ಆಗಿರುವ ಸಂಕಷ್ಟ ಹೇಳಿಕೊಂಡಿದ್ದಾರೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *