ಮಂಗಳೂರು : ಮಂಗಳೂರಿನಲ್ಲಿ ಶಾಂತಿ ಕದಡುವ ಮತ್ತೊಂದು ದುರಂತ ನಡೆದಿದೆ. ಕ್ರೈಸ್ತ ಪ್ರಾರ್ಥನಾ ಮಂದಿರದ ಮೇಲೆ ಏಕಾಏಕಿ ದಾಳಿ ನಡೆಸಿ ಶಿಲುಬೆಗೆ ಹಾನಿ ಮಾಡಲಾಗಿದೆ.
ದಕ್ಷಿಣಕನ್ನಡ ಜಿಲ್ಲೆ ಕಡಬ ತಾಲೂಕಿನ ಪೇರಡ್ಕದಲ್ಲಿರೋ ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಚರ್ಚ್‍ನ ಅವಸ್ಥೆಯಿದು. ಇಲ್ಲಿ ದುರಸ್ಥಿ ಕಾಮಗಾರಿ ನಡೀತಿತ್ತು. ಆದರೆ ರಾತ್ರೋರಾತ್ರಿ ಚರ್ಚ್‍ಗೆ ನುಗ್ಗಿದ ಕಿಡಿಗೇಡಿಗಳು ಶಿಲುಬೆ ಒಡೆದಾಕಿ ಅಲ್ಲಿ ಭಗವಾಧ್ವಜ ಹಾರಿಸಿದ್ದಾರೆ. ಕಬೋರ್ಡ್‍ನಲ್ಲಿದ್ದ ದಾಖಲೆಗಳನ್ನು ನಾಶ ಮಾಡಿ ಎಲೆಕ್ಟ್ರಾನಿಕ್ ಸಾಮಗ್ರಿ ಕಳವು ಮಾಡಿದ್ದಾರಂತೆ. ಈ ಬಗ್ಗೆ ಪಾಸ್ಟರ್ ಜೋಸ್ ವರ್ಗಿಸ್ ಕಡಬ ಠಾಣೆಗೆ ದೂರು ನೀಡಿದ್ದಾರೆ.
ಸಂಘಪರಿವಾರಕ್ಕೆ ಸೇರಿದ ಕೆಲ ಸಂಘಟನೆಗಳ ಈ ನಾಯಕರು ಚರ್ಚ ಇರುವ ಜಾಗ ಅಕ್ರಮ ಎಂದು ಆರೋಪಿಸುತ್ತಿದ್ದಾರೆ. ಅದಕ್ಕಾಗಿಯೇ ಈ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ, ದೂರುದಾರರ ಪ್ರಕಾರ, 30 ವರ್ಷಗಳಿಂದ ಕಟ್ಟಡದ ತೆರಿಗೆ ಕಟ್ಟುತ್ತಿದ್ದಾರಂತೆ. ಚರ್ಚ್ ಅಧಿಕೃತ ಅಂತ ದೂರಿನಲ್ಲೂ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಕಡಬ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕಿ ಗಾನಾ ಪಿ. ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಾರ್ಥನಾ ಮಂದಿರದ ಪ್ರಮುಖರನ್ನು ವಿಚಾರಣೆ ಮಾಡಿ ಘಟನೆಯ ಬಗ್ಗೆ ವಿವರ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಕಡಬ ಠಾಣಾ ತನಿಖಾ ಎಸ್‌ಐ ಶ್ರೀಕಾಂತ್ ರಾಥೋಡ್, ಗುಪ್ತಚರ ಇಲಾಖಾ ಪೊಲೀಸ್ ಸಿಬ್ಬಂದಿ, ಕಡಬ ಪೊಲೀಸ್ ಸಿಬ್ಬಂದಿ ಹಾಗೂ ನೂಜಿಬಾಳ್ತಿಲ ಗ್ರಾಮ ಕರಣಿಕ ಮತ್ತಿತರರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ದೂರು ದಾಖಲಿಸಿಕೊಂಡಿರೋ ಪೊಲೀಸರು ಸದ್ಯ ತನಿಖೆ ನಡೆಸ್ತಿದ್ದಾರೆ. ಜಾಗ ಯಾರದ್ದು..? ದಾಂಧಲೆ ನಡೆಸಿರೋರು ಯಾರು..? ಅನ್ನೋದು ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡೋರು ಯಾರೇ ಆಗಿದ್ರೂ ಅವರಿಗೆ ತಕ್ಕಶಿಕ್ಷೆ ಆಗಲೇಬೇಕಿದೆ.