ಅಮೆಜಾನ್ ಕಾಡಿನ ಬುಡಕಟ್ಟು ಸಮುದಾಯದ ‘ವಿಶ್ವದ ಏಕಾಂಗಿ ವ್ಯಕ್ತಿ’ ನಿಧನ

ರಿಯೊ ಡಿ ಜನೈರೊ (ಬ್ರೆಜಿಲ್): ಜಗತ್ತಿನ ಅತ್ಯಂತ ದಟ್ಟ ಕಾಡೆಂದೇ ಖ್ಯಾತಿ ಹೊಂದಿರುವ ದಕ್ಷಿಣ ಅಮೆರಿಕಾದ ಬ್ರೆಜಿಲ್‌ನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಬುಡಕಟ್ಟು ವ್ಯಕ್ತಿ ಸಾವನ್ನಪ್ಪಿದ್ದಾನೆ. ಅಮೆಜಾನ್ ಅರಣ್ಯದಲ್ಲಿ ಸಂಪೂರ್ಣವಾಗಿ ಏಕಾಂಗಿಯಾಗಿ ವಾಸವಾಗಿದ್ದ ಈತನನ್ನು “ವಿಶ್ವದ ಏಕಾಂಗಿ ವ್ಯಕ್ತಿ” ಎಂದೇ ಕರೆಯಲ್ಪಡುತ್ತಿದ್ದರು.

ಅಮೆಜಾನ್‌ ಕಾಡಿನ ಬುಡಕಟ್ಟು ಸಮುದಾಯದ ಕಟ್ಟಕಡೆಯ ವ್ಯಕ್ತಿಯಾಗಿರುವ ಈತನಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆ ಮತ್ತು ನೈಸರ್ಗಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಈ ವ್ಯಕ್ತಿ ಸಾವಿಗೀಡಾಗಿದ್ದಾನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಣಿಗಳನ್ನು ಬೇಟೆಯಾಡಲು ಮತ್ತು ಅಡಗಿಕೊಳ್ಳಲು ತನ್ನದೇ ವಿಶೇಷ ಶೈಲಿಯಲ್ಲಿ ಕಂದಕಗಳನ್ನು ಅಗೆದಿದ್ದ ಈತನಿಗೆ “ದಿ ಮ್ಯಾನ್‌ ಆಫ್‌ ಹೋಲ್” ಖ್ಯಾತಿಯ ಅಜ್ಞಾತ ಬುಡಕಟ್ಟಿನ ಕೊನೆಯ ವ್ಯಕ್ತಿಯಾಗಿದ್ದಾನೆ. ಈತನ ಹೆಸರು ಮತ್ತು ಮಾತನಾಡುವ ಭಾಷೆ, ಅವನ ಬುಡಕಟ್ಟು ಸಮುದಾಯದವರ ಪೂರ್ವಜರು ಯಾರೆಂದು ಇದುವರೆಗೂ ತಿಳಿದಿಲ್ಲ.

ಹೊರಜಗತ್ತನ್ನೇ ನೋಡದಿದ್ದ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಈ ಬುಡಕಟ್ಟು ಸಮುದಾಯವೊಂದರ ಮೇಲೆ 1970ರ ಸಮಯದಲ್ಲಿ ಪಶು ಸಾಕಾಣೆದಾರರು ಹತ್ಯಾಕಾಂಡ ನಡೆಸಿ ಬಹುತೇಕ ಜನರನ್ನು ಕೊಂದು ಹಾಕಿದ್ದರು. ದಾಳಿಯಿಂದ ಪಾರಾಗಿ ಉಳಿದುಕೊಂಡಿದ್ದ 7 ಮಂದಿಯಲ್ಲಿ ಆರು ಜನರನ್ನು 1995ರ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ನಡೆಸುವವರು ಗುಂಡಿಕ್ಕಿ ಸಾಯಿಸಿದ್ದರು. ಆಗಲೂ ಉಳಿದುಕೊಂಡಿದ್ದ ಒಬ್ಬನೇ ಒಬ್ಬ ವ್ಯಕ್ತಿ ಈಗ ವಯೋಸಹಜದಿಂದ ತನ್ನ ಗುಡಿಸಲು ಎದುರು ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಒಮ್ಮೆ ಬುಡಕಟ್ಟು ಇಲಾಖೆ ಈತನ ಇರುವಿಕೆಯನ್ನು ತಿಳಿದು ಅಧ್ಯಯನ ಕೈಗೊಂಡಾಗ ಈತನಿಗೆ ಸಂಬಂಧಿಸಿದಂತೆ ಹಿಂದೆ ಏನೆಲ್ಲಾ ಆಗಿತ್ತು ಎಂದು ವಿಧಿವಿಜ್ಞಾನ ಸಹಾಯದ ಮೂಲಕ ಪತ್ತೆ ಹಚ್ಚಿದ್ದರು. ಸಾಕ್ಷ್ಯಚಿತ್ರವನ್ನು ಕೂಡ ಮಾಡಿದ್ದರು. ಹೊರಜಗತ್ತಿಗೆ ಕರೆದುಕೊಂಡು ಬರಲು ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಆತನನ್ನು ಅವನ ಪಾಡಿಗೆ ಬಿಟ್ಟಿದ್ದರು.  ಪ್ರಾಣಿಗಳನ್ನು ಬಲೆಗೆ ಕೆಡವಲು ಮಾಡುತ್ತಿದ್ದ ವಿಶಿಷ್ಟ ಪ್ರಯೋಗದಿಂದಾಗಿ ಈತನಿಗೆ ‘ದಿ ಮ್ಯಾನ್ ಆಫ್ ಹೋಲ್’ ಎಂದು ಹೆಸರು ಬಂದಿತ್ತು.

ನಾಡಿನ ನೇರ ಸಂಪರ್ಕವನ್ನು ತಪ್ಪಿಸುವ ಮೂಲಕ ಪ್ರತ್ಯೇಕವಾಗಿ ವಾಸಿಸುವ ಕನಿಷ್ಠ 114 ಸ್ಥಳೀಯ ಜನರನ್ನು ಗುರುತಿಸಲಾಗಿದೆ. ಸ್ಥಳೀಯ ಹಕ್ಕುಗಳ ಗುಂಪೊಂದು ಸರ್ವೈವಲ್ ಇಂಟರ್‌ನ್ಯಾಶನಲ್ ವರದಿ ಮಾಡಿರುವಂತೆ 2009ರ ಕೊನೆಯಲ್ಲಿ ಈ ವ್ಯಕ್ತಿಯನ್ನು “ಬಂದೂಕುಧಾರಿಗಳಿಂದ ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಅವನ ಬುಡಕಟ್ಟಿನ ಬಹುಪಾಲು ಜನರು 1970 ಮತ್ತು 80 ರ ದಶಕದಲ್ಲಿ ಹತ್ತಿರದ ರಸ್ತೆಯನ್ನು ನಿರ್ಮಿಸಿದ ನಂತರ ಕೊಲ್ಲಲ್ಪಟ್ಟರು ಎಂದು ನಂಬಲಾಗಿದೆ. ವ್ಯಾಪಾರ ಉದ್ದೇಶಗಳಿಂದಾಗಿ ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಯಿತು. ಬ್ರೆಜಿಲ್‌ನಲ್ಲಿರುವ ಅಮೆಜಾನ್ ಮಳೆಕಾಡು ಪ್ರಪಂಚದ ಎಲ್ಲಕ್ಕಿಂತ ಹೆಚ್ಚು ಸಂಪರ್ಕವಿಲ್ಲದ ಬುಡಕಟ್ಟು ಜನಾಂಗಗಳ ನೆಲೆಯಾಗಿದೆ ಎಂದು ಹೇಳಿದೆ.

ಸಾವಿಗೀಡಾದ ವ್ಯಕ್ತಿ ಅಮೆಜಾನ್‌ ಕಾಡಿನ ತುಂಬೆಲ್ಲಾ ನಿರಂತರವಾಗಿ ಓಡಾಡುತ್ತಿದ್ದನು, ಅಜ್ಞಾತವಾಗಿ ವಾಸಿಸುತ್ತಿದ್ದನು. ಈ ಸ್ಥಳೀಯ ವ್ಯಕ್ತಿ 26 ವರ್ಷಗಳ ಹಿಂದೆ ಬೊಲಿವಿಯಾದ ಗಡಿಯ ಸಮೀಪವಿರುವ ರೊಂಡೋನಿಯಾ ರಾಜ್ಯದ ಕಾಡಿನಲ್ಲಿ ನೆಲೆಸಿದ್ದ ಎಂದು ಲಾ ಪ್ರೆನ್ಸಾ ವರದಿ ಮಾಡಿದೆ. ಅಂತೆಯೇ ಈತನ ಗುಡಿಸಲಿನ ಬಳಿ ಇತರ ಜನರ ಉಪಸ್ಥಿತಿಯನ್ನು ಸೂಚಿಸುವ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆ. ಅವರು ಬಳಸಿದ ಪಾತ್ರೆಗಳು ತಮ್ಮ ಎಂದಿನ ಸ್ಥಳಗಳಲ್ಲಿದ್ದರಿಂದ ಯಾವುದೇ ಹಿಂಸಾಚಾರ ಅಥವಾ ಹೋರಾಟದ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ಈತನದ್ದು ಸಹಜ ಸಾವು ಎನ್ನಲಾಗಿದೆ. ಆದಾಗ್ಯೂ ವಿಧಿವಿಜ್ಞಾನ ತಜ್ಞರು ಅವರ ಸಾವಿನ ಕಾರಣವನ್ನು ಗುರುತಿಸಲು ಶವಪರೀಕ್ಷೆಗೆ ರವಾನಿಸಿದ್ದಾರೆ.

ಅಮೆಜಾನ್‌ನ ಕಾಡುಗಳಲ್ಲಿ ಅಜ್ಞಾತವಾಗಿದ್ದ ಬುಡಕಟ್ಟು ಸಮುದಾಯವೊಂದರ ಕಟ್ಟ ಕಡೆಯ ವ್ಯಕ್ತಿ ಸಾಯುವ ಮೂಲಕ ಸಮುದಾಯವೊಂದು ನಶಿಸಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಅಮೆಜಾನ್‌ ಕಾಡಿನ ವಿಶೇಷತೆ

ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಜಗತ್ತಿನ ಯಾವ ಭಾಗದಲ್ಲೂ ಸಿಗೋದಿಲ್ಲ.  ಇದಕ್ಕೆ ಸಹಕಾರಿಯಾಗಿರೋದು ಅಲ್ಲಿನ ವಾತಾವರಣ. ಸುಮಾರು 5.5 ಮಿಲಿಯನ್ ಚದರ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನ ಅಮೆಜಾನ್ ಹೊಂದಿದೆ. ಎಕರೆ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಪ್ರದೇಶ. ಇಷ್ಟು ಪ್ರಮಾಣದ ಕಾಡಿನಲ್ಲಿ ಬಹುಪಾಲು ಅರಣ್ಯ ಹರಡಿರುವುದು ಬ್ರೆಜಿಲ್‌ನಲ್ಲಿ. ಎಡಬಿಡದೆ ಸುರಿಯುವ ಮಳೆ, ಸದಾ ತುಂಬಿ ಹರಿಯುವ ಅಮೆಜಾನ್ ನದಿಯ ಸುತ್ತಮುತ್ತಲೂ ದಟ್ಟವಾದ ಮರ-ಗಿಡಗಳು ಬೆಳೆದು ನಿಂತಿವೆ. ಜೌಗು ಪ್ರದೇಶವಾಗಿರುವ ಕಾಡು ಊಹೆಗೆ ನಿಲುಕದಷ್ಟು ಅರಣ್ಯ ಸಂಪತ್ತು ಹೊಂದಿದೆ. ಅಧ್ಯಯನವೊಂದರ ಪ್ರಕಾರ ಅಮೆಜಾನ್‌ನ 1 ಹೆಕ್ಟೇರ್ ಪ್ರದೇಶದಲ್ಲಿ 750 ಜಾತಿಯ ಮರಗಳು ಹಾಗೂ 1500ಕ್ಕೂ ಹೆಚ್ಚು ಜಾತಿಯ ಗಿಡಗಳನ್ನ ಕಾಣಬಹುದು. ಕೇವಲ 1 ಹೆಕ್ಟೆರ್ ಅಂದರೆ ಸುಮಾರು 2.47 ಎಕರೆ ಪ್ರದೇಶದಲ್ಲೇ ಇಷ್ಟು ಅರಣ್ಯ ಸಂಪತ್ತು ಅಡಗಿದೆ ಎಂದರೆ 5.5 ಮಿಲಿಯನ್ ಚದರ ಕಿಲೋಮೀಟರ್‌ ಜಾಗದಲ್ಲಿ ಇನ್ನೆಷ್ಟು ಇರಬಹುದು ಎಂದು ಊಹಿಸಲು ಅಸಾಧ್ಯವಾದದ್ದು.

Donate Janashakthi Media

Leave a Reply

Your email address will not be published. Required fields are marked *