ಥಾಣೆ: ವ್ಯಕ್ತಿಯೊಬ್ಬ ತನ್ನ ಸಹಜೀವನ ಸಂಗಾತಿ ಮಹಿಳೆಯನ್ನು ಕೊಂದು ದೇಹದ ತುಂಡುಗಳಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿರುವ ಪ್ರಕರಣ ಮಹಾರಾಷ್ಟ್ರದ ಥಾಣೆಯಲ್ಲಿ ಬಯಲಾಗಿದೆ. ಮೃತ ಮಹಿಳೆಯನ್ನು ಸರಸ್ವತಿ ವೈದ್ಯ (32) ಎಂದು ಗುರುತಿಸಲಾಗಿದ್ದು ಆರೋಪಿಯನ್ನು 56 ವರ್ಷದ ಮನೋಜ್ ಸಹಾನಿ ಎಂದು ಗುರುತಿಸಲಾಗಿದೆ.
3–4 ದಿನಗಳ ಹಿಂದೆ ಸರಸ್ವತಿಯನ್ನು ಕೊಂದಿದ್ದ ಮನೋಜ್, ಟ್ರೀ ಕಟ್ಟರ್ ಅನ್ನು ಖರೀದಿಸಿ ಆಕೆಯ ದೇಹವನ್ನು 12–13 ತುಂಡು ಮಾಡಿದ್ದ. ಬಳಿಕ, ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ, ಹೊರಗೆ ಎಸೆಯುವ ಉದ್ದೇಶದಿಂದ ಪ್ಲಾಸ್ಟಿಕ್ ಪೇಪರ್ ನಲ್ಲಿ ಸುತ್ತಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸುವ ಸಲುವಾಗಿ ಈ ರೀತಿ ದೇಹದ ಭಾಗವನ್ನು ಕುಕ್ಕರ್ ನಲ್ಲಿ ಬೇಯಿಸಿರಬಹುದು ಎಂದು ಪೊಲೀಸ್ ಉಪ ಆಯುಕ್ತ ಜಯಂತ್ ಬಜ್ಬಲೆ ಅವರು ಹೇಳಿದ್ದಾರೆ.
ಮನೋಜ್ ಸಹಾನಿ ಕಳೆದ ಮೂರು ವರ್ಷಗಳಿಂದ ಗೀತಾ ನಗರ 7ನೇ ಹಂತದ ಗೀತಾ ಆಕಾಶ್ ದೀಪ್ ಅಪಾರ್ಟ್‌ಮೆಂಟ್ ಕಟ್ಟಡದ 704ನೇ ಫ್ಲ್ಯಾಟ್‌ನಲ್ಲಿ ನೆಲೆಸಿದ್ದ. ಮನೋಜ್ ಬೊರಿವಾಲಿಯಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದು, ಸರಸ್ವತಿ ಜತೆ ಲಿವ್ ಇನ್ ಸಂಬಂಧದಲ್ಲಿದ್ದ. ಫ್ಲ್ಯಾಟ್ ನಲ್ಲಿ ಕೆಟ್ಟವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರ. ಸ್ಥಳಕ್ಕೆ ಬಂದ ಪೊಲೀಸ್ ತಂಡ ಪರಿಶೀಲನೆ ನಡೆಸಿದಾಗ ಸರಸ್ವತಿ ಅವರ ಕೊಳೆತ ಮೃತದೇಹ ಕಂಡುಬಂದಿದೆ.
#WATCH | Maharashtra | 32-year-old woman killed by 56-year-old live-in partner | As per Police, the accused Manoj Sahni killed Saraswati Vaidya 3-4 days back and after that, he purchased a tree-cutter to chop her into pieces. Police say that the accused boiled pieces of her body… pic.twitter.com/ilFUfWVOLY
— ANI (@ANI) June 8, 2023
ಈ ಕೊಲೆಗೆ ನೈಜ ಕಾರಣ ತಿಳಿದುಕೊಳ್ಳಲು ಪೊಲೀಸರು ಪ್ರಯತ್ನಿಸಿದ್ದಾರೆ. ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರಲ್ಲಿ ಒಬ್ಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಫ್ಲ್ಯಾಟ್ ಒಳಗಿದ್ದ ಕೊಳೆತ ದೇಹದ ಭಾಗಗಳನ್ನು ಪೊಲೀಸ್ ಸಿಬ್ಬಂದಿ ಬೆಡ್‌ಶೀಟ್‌ನಲ್ಲಿ ಇರಿಸಿಕೊಂಡು ಹೊರಗೆ ತಂದಿದ್ದಾರೆ.
ಈ ಅಮಾನುಷ ಘಟನೆಯು ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನು ನೆನಪಿಗೆ ತಂದಿದೆ. ಶ್ರದ್ಧಾಳನ್ನು ಕೊಲೆ ಮಾಡಿದ್ದ ಅಫ್ತಾಬ್, ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿದ್ದ. ಬಳಿಕ ಒಂದೊಂದೇ ಭಾಗವನ್ನು ಕಾಡಿನಲ್ಲಿ ಎಸೆಯುತ್ತಾ ಬಂದಿದ್ದ. ಈ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಲಿವ್ ಇನ್ ಸಂಬಂಧದಲ್ಲಿದ್ದ ದಿಲ್ಲಿಯ ಉತ್ತಮ್ ನಗರದ ನಿವಾಸಿ, ಡಾಬಾದ ಮಾಲೀಕ ಸಾಹಿಲ್ ಗಹ್ಲೋತ್ ತನ್ನ ಪ್ರೆಯಸಿಯನ್ನು ಕೊಂದು ಮೃತ ದೇಹವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದನ್ನೂ ನೆನಪಿಸಿಕೊಳ್ಳಬಹುದು. ಇಂತಹ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದು, ಜಾಗೃತಿಮೂಡಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಯಾಯ ವ್ಯಕ್ತಪಡಿಸಿದ್ದಾರೆ.