ಚೆನ್ನೈ: ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕೆ ನವವಿವಾಹಿತ ದಂಪತಿಯನ್ನು ಯುವತಿಯ ತಂದೆ ಕೊಂದಿರುವ ಘಟನೆ ತಮಿಳುನಾಡಿನ ಟುಟಿಕೋರಿನ್ನಲ್ಲಿ ನಡೆದಿದೆ.
ನವವಿವಾಹಿತ ಮಹಿಳೆಯ ತಂದೆ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಕ್ಕಾಗಿ ಆಕೆಯ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜೋಡಿಗಳು ವಿವಾಹವಾದ ನಂತರ, ಮಹಿಳೆಯ ಕುಟುಂಬವು ಮಗಳು ಕಾಣೆಯಾಗಿದ್ದಾಳೆ ಎಂಬ ದೂರನ್ನು ದಾಖಲಿತ್ತು. ನಂತರ ದಂಪತಿಗಳು ಮಧುರೈನಲ್ಲಿ ಪೊಲೀಸರ ಮುಂದೆ ಹಾಜರಾಗಿ ʻನಾವಿಬ್ಬರೂ ವಯಸ್ಕರು. ನಮ್ಮ ಇಷ್ಟದಂತೆ ನಾವೇ ಮದುವೆಯಾಗಿದ್ದೇವೆʼ ಎಂದು ಹೇಳಿಕೊಂಡಿದ್ದಾರೆ. ನಂತ್ರ, ಅವರು ಪೊಲೀಸ್ ರಕ್ಷಣೆಯನ್ನೂ ಕೋರಿರಲಿಲ್ಲ ಎಂದು ಟುಟಿಕೋರಿನ್ನ ಹಿರಿಯ ಪೋಲೀಸ್ ಬಾಲಾಜಿ ಸರವಣನ್ ತಿಳಿಸಿದ್ದಾರೆ.
ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಹತ್ಯೆ ಮಾಡಲಾಗಿದೆ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. “ದಂಪತಿಗಳು ಒಂದೇ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಹುಡುಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಹುಡುಗ ಶಾಲೆಯಿಂದಲೇ ಕಲಿಕೆ ಬಿಟ್ಟಿದ್ದರು. ಈ ಕಾರಣಕ್ಕೆ ಹುಡುಗಿಯ ಕುಟುಂಬ ಮದುವೆಯನ್ನು ವಿರೋಧಿಸಿತ್ತು” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.