ಬಂದರು ಠಾಣೆಯಲ್ಲಿ ಲಾಕಪ್ ಡೆತ್ : ಸ್ವತಂತ್ರ ತನಿಖೆಗೆ ಡಿವೈಎಫ್ಐ ಆಗ್ರಹ

ಮಂಗಳೂರು : ಬಂದರು ಪೊಲೀಸ್ ಠಾಣೆಯ ಲಾಕಪ್ ನಲ್ಲಿ ರಾಜೇಶ್ ಪೂಜಾರಿ ಎಂಬ 33 ರ ಹರಯದ ಯುವಕ ಅನುಮಾನಾಸ್ಪದವಾಗಿ ಮೃತ ಪಟ್ಟಿರುವ ಪ್ರಕರಣ ಮುಚ್ಚಿಹಾಕಲು ವ್ಯವಸ್ಥಿತವಾದ ಯತ್ನ ನಡೆಯುತ್ತಿದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

ಲಾಕಪ್ ಡೆತ್ ಎಂಬುದು ಅತಿ ಗಂಭೀರ ಘಟನೆಯಾಗಿರುವುದರಿಂದ ಈ ಪ್ರಕರಣವನ್ನು ಮಂಗಳೂರು ಕಮೀಷನರೇಟ್ ಹೊರಗಿನ ಅಧಿಕಾರಿಗಳ ತಂಡದಿಂದ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದ್ದು, ಈ ಕುರಿತು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಸಲ್ಲಿಸಿದೆ.

33 ರ ಯುವಕ ಎದೆನೋವಿನಿಂದ ಏಕಾಏಕಿ ಲಾಕಪ್ ನಲ್ಲಿ ಮೃತ ಪಟ್ಟಿದ್ದಾನೆ ಎಂಬ ಪೊಲೀಸ್ ಇಲಾಖೆಯ ವಾದವನ್ನು ನಂಬಲು ಸಾಧ್ಯವಿಲ್ಲ, ಠಾಣೆಯಲ್ಲಿ ಪೊಲೀಸರು ನೀಡಿದ ಹಿಂಸೆಯಿಂದ ಸಾವು ಸಂಭವಿಸಿರುವ ಅನುಮಾನ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಪೊಲೀಸರ ವಾದದ ಪ್ರಕಾರ ಮಧ್ಯರಾತ್ರಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ರಾಜೇಶ್ ನನ್ನು ಆತನ ಗೆಳೆಯನ ಜೊತೆ ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಅಂತಹ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪಗಳಿಲ್ಲದ ಬಂಧಿತರನ್ನು ಮರು ದಿವಸ ಸಾಯಂಕಾಲದವರೆಗೂ ಠಾಣೆಯಲ್ಲಿ ಕೂರಿಸುವ ಅಗತ್ಯ ಏನಿತ್ತು ? ಎಫ್ಐಆರ್ ದಾಖಲಾದದ್ದು ಯಾವಾಗ ? ವೈದ್ಯರು ನೀಡಿದ ಮಾಹಿತಿ ಪ್ರಕಾರ ಆಸ್ಪತ್ರೆಗೆ ತಲುಪುವಾಗಲೇ ರಾಜೇಶ್ ಮೃತಪಟ್ಟಿದ್ದಾಗಿ ವರದಿಯಾಗಿದೆ. ಆಸ್ಪತ್ರೆಗಳಿಂದ ಕೂಗಳತೆ ದೂರದಲ್ಲಿರುವ ಬಂದರು ಠಾಣೆಯಿಂದ ಹೃದಯ ನೋವಿಗೆ ಗುರಿಯಾದ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಲು ಅಷ್ಟು ತಡವಾಗಲು ಕಾರಣ ಏನು ? ಮೊದಲು ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ರಾಜೇಶ್ ಕುಟುಂಬಿಕರು ಈಗ ಮೌನವಾಗಿರುವಂತೆ ಮಾಡಿದ ಶಕ್ತಿಗಳು ಯಾವುದು ? ಎಂಬ ಸಾಲು ಸಾಲು ಪ್ರಶ್ನೆಗಳು ಬಂದರು ಠಾಣೆಯ ಲಾಕಪ್ ಡೆತ್ ಪ್ರಕರಣದಿಂದ ಸಾರ್ವಜನಿಕರ ಮಧ್ಯೆ ಉದ್ಭವವಾಗಿದೆ. ಇದೀಗ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಸುದ್ದಿ ಹರಿದಾಡುತ್ತಿದೆ.

ಲಾಕಪ್ ಡೆತ್ ನಂತಹ ಇಂತಹ ಗಂಭೀರ ಪ್ರಕರಣ ಪೊಲೀಸ್ ಇಲಾಖೆಗೆ ಕಳಂಕವಾಗಿದೆ. ಈ ಎಲ್ಲಾ ಅನುಮಾನಗಳ ಕಾರಣಕ್ಕೆ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ತಂಡ ನಡೆಸುವ ಅಗತ್ಯ ಇದೆ. ಆ ಹಿನ್ನಲೆಯಲ್ಲಿ ಮಂಗಳೂರು ಕಮಿಷನರೇಟ್ ನಿಂದ ಹೊರಗಡೆಯ ಅಧಿಕಾರಿಗಳ ಸ್ವತಂತ್ರ ತಂಡಕ್ಕೆ ರಾಜೇಶ್ ಪೂಜಾರಿ ಲಾಕಪ್ ಡೆತ್ ಪ್ರಕರಣ ವರ್ಗಾಯಿಸ ಬೇಕಾಗಿದೆ. ಆ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಡಿವೈಎಫ್ಐ ಮಂಗಳೂರು ಪೊಲೀಸ್ ಕಮೀಷನರ್ ರಿಗೆ ನೀಡಿದ ಮನವಿಯಲ್ಲಿ ವಿನಂತಿಸಿದೆ.

ಮನವಿ ನೀಡಿದ ನಿಯೋಗದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐಎಂ ನಾಯಕ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್ ಇದ್ದರು.

Donate Janashakthi Media

Leave a Reply

Your email address will not be published. Required fields are marked *