ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲು ಕೋಲ್ಕತ್ತ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.
ನ್ಯಾಯಮೂರ್ತಿ ಶಂಪಾ ಸರ್ಕಾರ್ ನ್ಯಾಯಪೀಠವು ವಿಚಾರಣೆಗೆ ಸಂಬಂಧಿಸಿದಂತೆ ಕ್ಷೇತ್ರದ ಬಿಜೆಪಿ ಶಾಸಕ ಸುವೇಂದು ಅಧಿಕಾರಿಗೆ ನೋಟಿಸ್ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇಂದು ಆನ್‌ಲೈನ್‌ನಲ್ಲಿ ವಿಚಾರಣೆ ಕೈಗೊಂಡ ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರು ಬಿಜೆಪಿಯ ಚುನಾಯಿತ ಅಭ್ಯರ್ಥಿ ಸುವೇಂದು ಅಧಿಕಾರಿಗೆ ನೋಟಿಸ್ ನೀಡಿದರು. ಅರ್ಜಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲಿ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಕಾಗದ-ಪತ್ರಗಳು, ಎಲ್ಲಾ ದಾಖಲೆಗಳು, ವೀಡಿಯೊ ಧ್ವನಿಮುದ್ರಣಗಳು ಹಾಗೂ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು(ಇವಿಎಂ) ಸಂರಕ್ಷಿಸಬೇಕು ಎಂದು ನಿರ್ದೇಶನ ನೀಡಿದರು. ಚುನಾವಣಾ ಆಯೋಗ ಹಾಗೂ ರಿಟರ್ನಿಂಗ್ ಅಧಿಕಾರಿಗೆ ಆದೇಶದ ಪ್ರತಿಯನ್ನು ಕಳುಹಿಸಿಕೊಡುವಂತೆ ರಿಜಿಸ್ಟರ್ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತು.
ಇದನ್ನು ಓದಿ: ಟಿಎಂಸಿ ಮುನ್ನಡೆ: ಮಮತಾಗೆ ಹಿನ್ನಡೆ
ನಂದಿಗ್ರಾಮ ಕ್ಷೆತ್ರದಿಂದ ಟಿಎಂಸಿ ಪಕ್ಷದ ಅಭ್ಯರ್ಥಿಯಾಗಿದ್ದ ಮಮತಾ ಬ್ಯಾನರ್ಜಿ ಅರ್ಜಿಯ ಮುಂದಿನ ವಿಚಾರಣೆಯನ್ನು ಆಗಸ್ಟ್ 12ರಂದು ನಡೆಯಲಿದೆ ಎಂದು ತಿಳಿಸಿರುವ ನ್ಯಾಯಪೀಠವು ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಹಾಗೂ ಸಾಧನಗಳನ್ನು ಸಂರಕ್ಷಿಸಿಡಬೇಕು ಎಂದು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಜನಪ್ರತಿನಿಧಿ ಕಾಯ್ದೆಯ ಪ್ರಕಾರ ಚುನಾವಣೆಗೆ ಸಂಬಂಧಿಸಿದಂತೆ ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್‌ನ ನ್ಯಾಯಪೀಠವು ವಿಚಾರಣೆಗೆ ಸಮ್ಮತಿಸಿದೆ ಎಂದು ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರು ತಿಳಿಸಿದ್ದಾರೆ.
ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ವಿರುದ್ಧ 1,956 ಮತಗಳಿಂದ ಗೆಲುವು ಸಾಧಿಸಿದ್ದರು. ಮತಗಳ ಮರು ಎಣಿಕೆಗೆ ಮಮತಾ ಬ್ಯಾನರ್ಜಿ ಮಾಡಿದ್ದ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿತ್ತು. ನಂತರ ಮಮತಾ ಬ್ಯಾನರ್ಜಿ ಅವರು ಸುವೇಂದು ವಿರುದ್ಧ ಕೋಲ್ಕತ್ತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಲಂಚ, ದ್ವೇಷದ ಪ್ರಚಾರ, ಧರ್ಮದ ಆಧಾರದಲ್ಲಿ ಮತಗಳ ಯಾಚನೆ, ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಸುವೇಂದು ಮತದಾನದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದನ್ನು ಓದಿ: ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?
ಈ ಮೊದಲು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಕೌಸಿಕ್ ಚಂದಾ ಕೈಗೆತ್ತಿಕೊಂಡಿದ್ದರು. ಆದರೆ, ನಂತರ ಅವರು ಮಮತಾ ಅವರ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಮುಖ್ಯನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರು ಅರ್ಜಿಯ ವಿಚಾರಣೆ ಕೈಗೊಳ್ಳುವಂತೆ ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರಿಗೆ ಸೂಚಿಸಿದ್ದರು.