ಮಲ್ಲಿಕಾರ್ಜುನ್ ಖರ್ಗೆ ವಿಷಕಾರಿ ಅದಕ್ಕೆ ಸೋತಿದ್ದಾರೆ

ಕಲಬುರ್ಗಿ: ‘ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರೇ ವಿಷಕಾರಿ ಆಗಿದ್ದಾರೆ. ಅವರ ನಿಜವಾದ ಮುಖ ಅರ್ಥ ಮಾಡಿಕೊಂಡ ಕಲಬುರ್ಗಿ ಜನ ಅವರನ್ನು ಸೋಲಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಇಂದಿಲ್ಲಿ ತಿರುಗೇಟು ನೀಡಿದರು.

ಬೀದರ್‌ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆ ಪ್ರಚಾರಕ್ಕೆ ತೆರಳಲು ವಿಶೇಷ ವಿಮಾನದ ಮೂಲಕ ಇಲ್ಲಿಗೆ ಬಂದಿಳಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.

‘ಬಿಜೆಪಿ, ಆರ್‌ಎಸ್‍ಎಸ್ ವಿಷಕಾರಿ ಸಿದ್ಧಾಂತ ಹೊಂದಿವೆ ಎಂದು ಖರ್ಗೆ ಅವರು ಹೇಳಿದ್ದಾರೆ. ಅವರೇನು ಎಂದು ಅವರೇ ಅರ್ಥ ಮಾಡಿಕೊಳ್ಳಬೇಕು. ಅವರು ಒಳ್ಳೆಯವರಾಗಿದ್ದರೆ ಜನರೇಕೆ ಸೋಲಿಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಲಿ’ ಎಂದರು.

ಇದನ್ನೂ ಓದಿ : ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ದಾಂತ ವಿಷಕಾರಿ : ಮಲ್ಲಿಕಾರ್ಜುನ ಖರ್ಗೆ

‘ಬಿಜೆಪಿ ದುಡ್ಡಿನ ಮೇಲೆ ಚುನಾವಣೆ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಆದರೆ, 73 ವರ್ಷಗಳಿಂದ ಕಾಂಗ್ರೆಸ್‍ ಯಾವ ರೀತಿಯಾಗಿ ಚುನಾವಣೆ ಮಾಡಿದೆ? ಹಣ ಬಲದ ಮೇಲೆಯೇ ದೇಶದ ಅಧಿಕಾರ ನಡೆಸಿದ್ದು ನೀವು; ಈಗ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದೀರಿ’ ಎಂದೂ ಕಿಡಿ ಕಾರಿದರು.

‘ನಮ್ಮ ಪಕ್ಷದಲ್ಲಿ ಕೆಲವು ಅಭಿಪ್ರಾಯಭೇದಗಳಿವೆ. ಆದರೆ ಭಿನ್ನಾಭಿಪ್ರಾಯವಿಲ್ಲ. ವ್ಯತ್ಯಾಸಗಳನ್ನು ಸರಿಪಡಿಸುವ ವ್ಯವಸ್ಥೆ ನಮ್ಮಲ್ಲಿದೆ. ಆದರೆ, ಎಂಥ ತಪ್ಪುಗಳನ್ನೂ ಸರಿಪಡಿಸುವ ಪದ್ಧತಿ ಕಾಂಗ್ರೆಸ್‌ನಲ್ಲಿ ಇಲ್ಲ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಧ್ಯೆ ಉಂಟಾದ ಸಣ್ಣ ವ್ಯತ್ಯಾಸ ಎರಡು ದಿನಗಳಲ್ಲಿ ಬಗೆಹರಿಯಲಿದೆ. ಇದರಿಂದ ಉಪಚುನಾವಣೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ಬಗ್ಗೆ ಎಸ್‍ಐಟಿ ಸರಿಯಾಗಿಯೇ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆ ಮೆಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ರಮೇಶ ಜಾರಕಿಹೊಳಿ ಅವರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ಸಂತ್ರಸ್ತೆ ಪರ ವಕೀಲರು ಮಾಡಿದ ಆರೋಪದಲ್ಲಿ ಹುರುಳಿಲ್ಲ. ಈ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಹೆಚ್ಚೇನೂ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ’ ಎಂದೂ ಹೇಳಿದರು.

‘ಬಸವಕಲ್ಯಾಣದಲ್ಲಿ ಪಕ್ಷದ ಅಭ್ಯರ್ಥಿ ವಿಚಾರದಲ್ಲಿ ಉಂಟಾದ ತಕರಾರು ಎರಡು ದಿನಗಳಲ್ಲಿ ಬಗೆಹರಿಯುತ್ತದೆ. ರಾಜ್ಯದ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *