ನವದೆಹಲಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯ ಭಾಷಣಗಳಲ್ಲಿ ಆರೆಸ್ಸೆಸ್ ಗಬ್ಬು ನಾರುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಎಕ್ಸ್ ಟ್ವಿಟ್ಟರ್ ಖಾತೆಯಲ್ಲಿ ಕಿಡಿಕಾರಿರುವ ಮಲ್ಲಿಕಾರ್ಜುನ್ ಖರ್ಗೆ, ಮೋದಿ-ಶಾ ಅವರ ರಾಜಕೀಯ ಮತ್ತು ಸೈದ್ಧಾಂತಿಕ ಪೂರ್ವಜರು ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರ ವಿರುದ್ಧ ಬ್ರಿಟಿಷ್ ಮತ್ತು ಮುಸ್ಲಿಂ ಲೀಗ್‌ನ್ನು ಬೆಂಬಲಿಸಿದರು. ಸಾಮಾನ್ಯ ಭಾರತೀಯರ ಆಕಾಂಕ್ಷೆಗಳು, ಅಗತ್ಯಗಳು ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ‘ಕಾಂಗ್ರೆಸ್ ನ್ಯಾಯ ಪತ್ರ’ವನ್ನು ರೂಪಿಸಲಾಗಿದೆ ಎಂದು ಪಕ್ಷದ ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿಯ ಚುನಾವಣಾ ಗ್ರಾಫ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಆದ್ದರಿಂದ ಆರೆಸ್ಸೆಸ್ ತನ್ನ ಆತ್ಮೀಯ ಸ್ನೇಹಿತ ಮುಸ್ಲಿಂ ಲೀಗ್‌ನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದೆ. ಇದರಲ್ಲಿ ಒಂದೇ ಒಂದು ಸತ್ಯವಿದೆ. ಕಾಂಗ್ರೆಸ್‌ನ ನ್ಯಾಯ ಪತ್ರವು ಭಾರತದ 140 ಕೋಟಿ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಅವರ ಸಂಯೋಜಿತ ಶಕ್ತಿಯು ಮೋದಿಯ 10 ವರ್ಷಗಳ ಅನ್ಯಾಯವನ್ನು ಕೊನೆಗೊಳಿಸುತ್ತದೆ ಎಂದು ಖರ್ಗೆ ಈ ಕುರಿತು ಹೇಳಿದ್ದಾರೆ.
ಇದನ್ನೂ ಓದಿ: 400 ಅಲ್ಲ 175 ! ಮಾಜಿ ಚುನಾವಣಾ ಆಯುಕ್ತ ಖುರೇಷಿ ಹೇಳಿದ್ದು ಯಾರ ಬಗ್ಗೆ
ಮೋದಿ-ಶಾ ಅವರ ಸೈದ್ಧಾಂತಿಕ ಪೂರ್ವಜರು 1942ರಲ್ಲಿ ಮಹಾತ್ಮ ಗಾಂಧಿಯವರ “ಕ್ವಿಟ್ ಇಂಡಿಯಾ” ಕರೆಯನ್ನು ವಿರೋಧಿಸಿದರು, ಇದು ಮೌಲಾನಾ ಆಝಾದ್ ಅವರ ಅಧ್ಯಕ್ಷತೆಯಲ್ಲಿ ಚಳುವಳಿಯಾಗಿತ್ತು. ಪ್ರಸಾದ್ ಮುಖರ್ಜಿಯವರು ಬಂಗಾಳದಲ್ಲಿ ಹೇಗೆ ಸರಕಾರವನ್ನು ರಚಿಸಿದರು ಎಂದು ಎಲ್ಲರಿಗೂ ಗೊತ್ತಿದೆ, 1940ರ ದಶಕದಲ್ಲಿ ಸಿಂಧ್ ಮತ್ತು NWFP ಮುಸ್ಲಿಂ ಲೀಗ್‌ನೊಂದಿಗೆ ತಮ್ಮ ಸರ್ಕಾರಗಳನ್ನು ರಚಿಸಿದ್ದರು. 1942ರ ಕ್ವಿಟ್ ಇಂಡಿಯಾ ಚಳುವಳಿಯ ವೇಳೆ ಹೇಗೆ “ಹೋರಾಟ” ಮಾಡಬಹುದು ಮತ್ತು ಕಾಂಗ್ರೆಸ್‌ನ್ನು ಹೇಗೆ ದಮನ ಮಾಡಬೇಕು ಎಂದು ಶ್ಯಾಮ ಪ್ರಸಾದ್ ಮುಖರ್ಜಿ ಅಂದಿನ ಬ್ರಿಟಿಷ್ ಗವರ್ನರ್‌ಗೆ ಪತ್ರ ಬರೆದಿಲ್ಲವೇ? ಮೋದಿ-ಶಾ ಮತ್ತು ಅವರ ಪಕ್ಷದ ನಾಮನಿರ್ದೇಶಿತ ಅಧ್ಯಕ್ಷರು ಇಂದು ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಏಪ್ರಿಲ್ 6 ರಂದು ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದ ಚುನಾವಣಾ ಜಾಥಾದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯನ್ನು “ಸುಳ್ಳಿನ ಕಂತೆ” ಎಂದು ಕರೆದಿದ್ದರು ಮತ್ತು ಪ್ರಣಾಳಿಕೆಯ ಪ್ರತಿ ಪುಟವು ಭಾರತವನ್ನು ತುಂಡು ಮಾಡುವ ಪ್ರಯತ್ನದ ಬಗ್ಗೆ ಗಬ್ಬು ವಾಸನೆ ಬೀರುತ್ತಿದೆ. ಕಾಂಗ್ರೆಸ್‌ನ ಪ್ರಣಾಳಿಕೆ ಮುಸ್ಲಿಂ ಲೀಗ್‌ನ ಮುದ್ರೆಯಂತೆ. ಇಡೀ ಪಕ್ಷವನ್ನು ಹೊರಗುತ್ತಿಗೆ ನೀಡಿದಂತಿದೆ. ಕಾಂಗ್ರೆಸಿನ ಪ್ರಣಾಳಿಕೆಯಿದೆ ಅಂದರೆ ಮುಸ್ಲಿಂಲೀಗ್ ಸಿದ್ದಾಂತವನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದ್ದರು.
ಮೋದಿ ವಿರುದ್ಧ ಕಾಂಗ್ರೆಸ್, ಚುನಾವಣಾ ಅಯೋಕ್ಕೆ ಸೋಮವಾರ ದೂರು ನೀಡಿದ್ದು, ಪ್ರಧಾನಿಯವರ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 180 ಸ್ಥಾನಗಳ ಗಡಿ ದಾಟಲು ಹೆಣಗಾಡುತ್ತಿರುವ ಮಧ್ಯೆ ಮತ್ತೆ ಅದೇ ಹಿಂದೂ-ಮುಸ್ಲಿಂ ಸ್ಕ್ರಿಪ್ಟನ್ನು ಆಶ್ರಯಿಸಿದ್ದಾರೆ ಎಂದು ಹೇಳಿದೆ. ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್, ರಾಜ್ಯಸಭಾ ಸಂಸದ ಮುಕುಲ್ ವಾಸ್ನಿಕ್, ಪವನ್ ಖೇರಾ ಮತ್ತು ಗುರುದೀಪ್ ಸಪ್ಪಲ್ ಅವರ ನಿಯೋಗ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮೋದಿ ವಿರುದ್ಧ ದೂರು ನೀಡಿದ್ದಾರೆ.