ಬೆಂಗಳೂರು : ಬಿಜೆಪಿ ಚುನಾವಣಾ ಬಾಂಡ್ ಹಣವನ್ನು ಬಳಸಲಿಕೊಳ್ಳದಂತೆ ಫ್ರೀಜ್ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಖರ್ಗೆ ಚುನಾವಣಾ ಬಾಂಡ್ ಹಗರಣವನ್ನು ಉನ್ನತಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಸುಪ್ರೀಂಕೋರ್ಟ್ ಚುನಾವಣೆ ಬಾಂಡ್ಗಳು ಅಸಂವಿಧಾನಿಕ ಎಂದು ಹೇಳಿದೆ. ಹೀಗಿರುವಾಗ ಬಿಜೆಪಿ ಈ ಹಣವನ್ನು ಚುನಾವಣೆಗೆ ಹೇಗೆ ಬಳಸಲಿಕೊಳ್ಳಲು ಸಾಧ್ಯ? ಕಾಂಗ್ರೆಸ್ ಪಕ್ಷಕ್ಕೆ 2017-18ರಲ್ಲಿ ಆದಾಯ ತೆರಿಗೆ ನೀಡಿದ್ದ ನೊಟೀಸ್ಗೆ ಈಗ ಲೋಕಸಭಾ ಚುನಾವಣೆಗೆ ಒಂದು ತಿಂಗಳು ಇರುವಾಗ ಖಾತೆ ಫ್ರೀಜ್ ಮಾಡಲಾಗಿದೆ. ಚುನಾವಣಾ ಬಾಂಡ್ ಮಾಹಿತಿಯನ್ನು ಎಸ್ಬಿಐ, ಮಾಹಿತಿ ಹಂಚಿಕೊಂಡಿದ್ದು, ಬಿಜೆಪಿ ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷವಾಗಿದೆ. ಈ ಹಿನ್ನೆಲೆ ಇಷ್ಟೊಂದು ದೇಣಿಗೆ ಹೇಗೆ ಬಂತು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಒತ್ತಾಯಿಸಿದ್ದಾರೆ.
ಒಟ್ಟೂ ದೇಣಿಗೆಯ 50%ದಷ್ಟು ಹಣ ಬಿಜೆಪಿಗೆ ಸಿಕ್ಕಿದೆ, ಕಾಂಗ್ರೆಸ್ಗೆ 11% ಮಾತ್ರ ಅಂದರೆ 6 ಸಾವಿರ ಕೋಟಿ ಮಾತ್ರ. ಬಿಜೆಪಿಗೆ, 1400 ಕೋಟಿ ಸಿಕ್ಕಿದೆ. ಇಷ್ಟೊಂದು ಅಂತರ ಬರಲು ಹೇಗೆ ಸಾಧ್ಯ? ಎಂದು ಖರ್ಗೆ ಪ್ರಶ್ನಿಸಿದ್ದಾರೆ. ಬಿಜೆಪಿಗೆ ದೇಣಿಗೆ ಕೊಟ್ಟವರೆಲ್ಲ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ದಾಳಿಗೆ ಒಳಗಾದವರೇ. ಅವರಿಗೆ ಒತ್ತಡ ಹಾಕಿ, ಬೆದರಿಸಿ ಹೆಚ್ಚಿನ ದೇಣಿಗೆ ಪಡೆಯಲಾಗಿದೆ, ಹೀಗಾಗಿ ಈ ದೇಣಿಗೆ ಹಣದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು, ತನಿಖಾ ವರದಿ ಬರುವವರೆಗೆ ಬಿಜೆಪಿ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಫ್ರೀಜ್ ಆಗಿದೆ.ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯಲ್ಲೂ ಹಣವಿತ್ತು. ಕಾರ್ಮಿಕರು, ಸಾಮಾನ್ಯ ಜನರು ನೀಡಿದ್ದ ಹಣವಿತ್ತು. ಆದರೆ ಆ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ, ಸುಮಾರು 300 ಕೋಟಿ ಹಣ ಫ್ರೀಜ್ ಆಗಿದೆ. ಹೀಗಿದ್ದಾಗ ನಾವು ಚುನಾವಣೆಗೆ ಹೇಗೆ ಹೋಗೊದು? ನಮ್ಮ ಖಾತೆ ಕ್ಲೋಸ್ ಆಗಿದೆ ಆದರೆ ಬಿಜೆಪಿ ಖಾತೆ ಓಪನ್ ಇದೆ. 6 ಸಾವಿರ ಕೋಟಿ ಹಣದ ಖಾತೆ ಓಪನ್ ಇದೆ, ಇದು ಅನ್ಯಾಯ ಎಂದು ಖರ್ಗೆ ಒತ್ತಿ ಹೇಳಿದರು.