ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ತಿರುವನಂತಪುರ ಸಂಸದ ಶಶಿ ತರೂರ್ ಮತ್ತು ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಉಳಿದಿದ್ದಾರೆ.
ಹೈಕಮಾಂಡ್‌ನಿಂದ ಬೆಂಬಲ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಗೆಲ್ಲುವ ಅಭ್ಯರ್ಥಿ ಎಂದೇ ಹೇಳಲಾಗುತ್ತಿದೆ. ಖರ್ಗೆ ಅವರು ನಾಮಪತ್ರ ಸಲ್ಲಿಕೆ ವೇಳೆ ನಾಯಕರ ದೊಡ್ಡ ದಂಡೇ ಎಐಸಿಸಿ ಕಚೇರಿಯಲ್ಲಿ ನೆರೆದಿತ್ತು. ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ಜಿ-23 ಬಣದ ಆನಂದ್ ಶರ್ಮಾ, ಪೃಥ್ವಿರಾಜ್ ಚವಾಣ್, ಮನೀಶ್ ತಿವಾರಿ ಮತ್ತು ಭೂಪಿಂದರ್ ಹೂಡಾ ಮುಂತಾದವರು ಅವರ ಜೊತೆಗಿದ್ದರು..
ಜಿ23 ಬಣದಲ್ಲಿ ಗುರುತಿಸಿಕೊಂಡಿರುವ ಸಂಸದ ಶಶಿ ತರೂರ್ ಸಹ 5 ಸೆಟ್ ನಾಮಪತ್ರ ಸಲ್ಲಿಸಿದರು. ಇನ್ನು, ಜಾರ್ಖಂಡ್‌ನ ಮಾಜಿ ಸಚಿವ ತ್ರಿಪಾಠಿ ಒಂದು ಸೆಟ್ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್‌ನ ಕೇಂದ್ರೀಯ ಚುನಾವಣಾ ಸಮಿತಿಯ ಅಧ್ಯಕ್ಷರಾದ ಮಧುಸೂದನ್ ಮಿಸ್ತ್ರಿ, ತ್ರಿಪಾಠಿ ಅವರ ಜೊತೆಗಿದ್ದರು. ‘ಈ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಹಲವು ನಾಯಕರು, ಪಕ್ಷದ ಕಾರ್ಯಕರ್ತರು ಮತ್ತು ಪ್ರಮುಖ ರಾಜ್ಯಗಳ ನಿಯೋಗಗಳಿಂದ ಪ್ರೋತ್ಸಾಹ ಸಿಕ್ಕಿದೆ. ನಾಮಪತ್ರ ಸಲ್ಲಿಸುವ ವೇಳೆ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ’ಎಂದು ಖರ್ಗೆ ಹೇಳಿದರು.
‘ಇದು ಸ್ನೇಹಯುತ ಸ್ಪರ್ಧೆಯಾಗಲಿದ್ದು, ನಾವು ಶತ್ರುಗಳಲ್ಲ. ಖರ್ಗೆ ಅವರಿಗೆ ಯಾವುದೇ ಅಗೌರವ ತೋರುತ್ತಿಲ್ಲ. ನನ್ನ ಚಿಂತನೆಗಳನ್ನು ಮುಂದಿಡುತ್ತಿದ್ದೇನೆ’ಎಂದು ತರೂರ್ ಹೇಳಿದರು. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಕಾಂಗ್ರೆಸ್‌ನ 9,100ಕ್ಕೂ ಅಧಿಕ ಮಂದಿ ಮತದಾನ ಮಾಡಲು ಅರ್ಹರಾಗಿದ್ದಾರೆ. ಅಕ್ಟೋಬರ್ 17ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19ಕ್ಕೆ ಫಲಿತಾಂಶ ಹೊರಬೀಳಲಿದೆ.
ಸೋನಿಯಾ ಉರುಳಿಸಿದ ದಾಳ : ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸೋನಿಯಾ ಬಣ ಉರುಳಿಸಿದ ದೊಡ್ಡ ದಾಳ ಎಂದು ವಿಶ್ಲೇಷಿಸಲಾಗುತ್ತಿದೆ. ಆಂತರಿಕ ಪ್ರಜಾಪ್ರಭುತ್ವಕ್ಕೆ ಒತ್ತಾಯ ಮಾಡುತ್ತಿದ್ದವರಿಗೆ ಈಗ ಚುನಾವಣೆ ಮೂಲಕವೇ ಅಧ್ಯಕ್ಷರ ಆಯ್ಕೆಗೆ ಅವಕಾಶ ನೀಡಲಾಗಿದೆ.
ಪಕ್ಷ ನಿಷ್ಠರು, ಗಾಂಧಿ ಕುಟುಂಬದ ಪರಮಾಪ್ತರು ಎಂದು ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ. ಖರ್ಗೆ ವಿರುದ್ಧ ತಾವು ಸ್ಪರ್ಧಿಸುವುದಿಲ್ಲ ಎಂದು ದಿಗ್ವಿಜಯ್ ಸಿಂಗ್ ನಾಮಪತ್ರಗಳನ್ನು ಮರಳಿಸಿದ್ದಾರೆ. ಶಶಿ ತರೂರ್ ತಮ್ಮದು ಫ್ರೆಂಡ್ಲಿ ಫೈಟ್ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸುಮಾರು 5 ದಶಕಗಳಿಗೂ ಹೆಚ್ಚಿನ ಸಾರ್ವಜನಿಕ ಜೀವನದಲ್ಲಿದ್ದಾರೆ. ವಿಧಾನಸಭೆಯಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಲೋಕಸಭೆ ಸಂಸದರಾಗಿ ಯುಪಿಎ ಒಂದು ಮತ್ತು ಎರಡರಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರೂ ಹೈಕಮಾಂಡ್ ಅವರನ್ನು ರಾಜ್ಯಸಭೆಯ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಮರಳುವಂತೆ ಮಾಡಿದೆ., “ವಿವಾದಗಳಿಲ್ಲದ ಉಡಾಫೆ ಮಾತುಗಳನ್ನಾಡದ ಖರ್ಗೆ ಅವರದ್ದು ತೂಕದ ನಾಯಕತ್ವ. ದಲಿತ ಸಮುದಾಯದ ಅವರ ನಾಯಕತ್ವ ಪಕ್ಷಕ್ಕೆ ಹೆಚ್ಚಿನ ಬಲ ತಂದುಕೊಡಲಿದೆʼʼ ಎಂದು ರಾಜ್ಯಸಭೆಯ ಸದಸ್ಯರಾದ ಪ್ರಮೋದ್ ತಿವಾರಿ ಹೇಳಿದ್ದಾರೆ.
Mallikarjuankarge super candit