ನವದೆಹಲಿ: 24 ವರ್ಷದ ಬಳಿಕ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿಯೇತರರೊಬ್ಬರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಇಂದು(ಅಕ್ಟೋಬರ್ 26) ಅಧಿಕಾರ ಸ್ವೀಕರಿಸಿದರು.
ದೆಹಲಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು.
ಕರ್ನಾಟಕದ ಹಿರಿಯ ರಾಜಕಾರಣಿ, ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ನಾಯಕರೂ ಆಗಿರುವ 80 ವರ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಅಧಿಕಾರ ಹಸ್ತಾಂತರಿಸಿದ ಬಳಿಕ ಮಾತನಾಡಿದ ಸೋನಿಯಾ ಗಾಂಧಿ, “ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ನನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಬದಲಾವಣೆ ಜಗದ ನಿಯಮ. ಕಾಂಗ್ರೆಸ್ ಈ ಹಿಂದಿನ ವರ್ಷಗಳಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಮುಂದಿನ ದಿನಗಳಲ್ಲೂ ನಾವು ಎಲ್ಲ ರೀತಿಯ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗುತ್ತೇವೆ ಎಂಬ ನಂಬಿಕೆ ನನಗಿದೆ” ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಬಿಜೆಪಿ ಪಕ್ಷವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ನವ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಮುಕ್ತ ಭಾರತ ಬೇಕು ಎಂದು ಹೇಳುತ್ತಿದ್ದಾರೆ. ನವ ಭಾರತ ನಿರ್ಮಾಣಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಮುಕ್ತ ಭಾರತ ಬೇಕೆನ್ನುತ್ತಿದ್ದಾರೆ. ನವ ಭಾರತ ನಿರ್ಮಾಣದಲ್ಲಿ ಹಸಿವು ಹಾಗೂ ಮಾಲಿನ್ಯ ಹೆಚ್ಚಾಗುತ್ತಿದೆ. ರುಪಾಯಿ ಮೌಲ್ಯ ಕುಸಿಯುತ್ತಿದೆ. ಹೀಗಾಗಿ ಆ ನವ ಭಾರತ ನಿರ್ಮಾಣಕ್ಕೆ ನಾವು ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆಂದು ಹೇಳಿದರು.
ಅಧಿಕಾರ ನಡೆಸಬೇಕಾದವರು ನಿದ್ರೆ ಮಾಡುತ್ತಿದ್ದು, ಸಿಬಿಐ, ಇಡಿ ಮತ್ತು ಐಟಿ ಮಾತ್ರ ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದೆ. ನವ ಭಾರತದಲ್ಲಿ ನಾಥೂರಾಮ್ ಗೋಡ್ಸೆಯನ್ನು ದೇಶ ಭಕ್ತ ಎಂದು ಕರೆಯಲಾಗುತ್ತದೆ. ಮಹಾತ್ಮ ಗಾಂಧೀಜಿಯನ್ನು ದೇಶವಿರೋಧಿ ಎಂದು ಕರೆಯಲಾಗುತ್ತದೆ. ಆರ್’ಎಸ್ಎಸ್ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತರಲು ಅವರು ಬಯಸುತ್ತಿದ್ದಾರೆಂದು ಕಿಡಿಕಾರಿದರು.
ಅಧಿಕಾರ ಸ್ವೀಕಾರಕ್ಕೂ ಮುನ್ನ ಖರ್ಗೆ, ಮಹಾತ್ಮಾ ಗಾಂಧಿ, ಜವಹರಲಾಲ್, ಲಾಲ್ ಬಹಾದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಜಗಜೀವನ್‌ರಾಮ್ ಅವರ ಸಮಾಧಿಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮಲ್ಲಿಕಾರ್ಜುನ ಖರ್ಗೆ ನೆನ್ನೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
5 ದಶಕಗಳಿಗೂ ಹೆಚ್ಚು ಕಾಲದಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು 8 ಬಾರಿ ಕಾಂಗ್ರೆಸ್ ಶಾಸಕರಾಗಿ, 2 ಬಾರಿ ಲೋಕಸಭಾ ಸಂಸದರಾಗಿ, 1 ಬಾರಿ ರಾಜ್ಯಸಭಾ ಸಂಸದರಾಗಿರುವ ಸೋಲಿಲ್ಲದ ಸರದಾರ ಎಂದೇ ಹೆಸರಾದವರು. ಕಳೆದ ಬಾರಿ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರು. ಕಾರ್ಮಿಕ ಸಂಘದ ನಾಯಕರಾಗಿದ್ದ ಅವರು 1969ರಲ್ಲಿ ಗುಲ್ಬರ್ಗಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕರ್ನಾಟಕ ಸರ್ಕಾರದಲ್ಲಿ ಗೃಹ, ಕಂದಾಯ, ಪ್ರಾಥಮಿಕ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಪಕ್ಷ, ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವರಾಗಿಯೂ ಮತ್ತು ರಾಜ್ಯಸಭೆಯ ಸಭಾ ನಾಯಕರಾಗಿಯೂ ಮಲ್ಲಿಕಾರ್ಜುನ್ ಖರ್ಗೆ ಸೇವೆ ಸಲ್ಲಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ 1,072 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಯಾಗಿದ್ದವು ಈ ಪೈಕಿ 416 ಮತಗಳು ಅಮಾನ್ಯಗೊಂಡಿದ್ದವು. ಈವರೆಗೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 6 ಬಾರಿ ಚುನಾವಣೆ ನಡೆದಿತ್ತು.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಎರಡನೇ ದಲಿತ ಸಮುದಾಯದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಜಗಜೀವನ್ ರಾಮ್ ಮೊದಲ ದಲಿತ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹಾಗೇ, ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕರಾಗಿ ಆಯ್ಕೆಯಾದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇದೆ. ಇದಕ್ಕೂ ಮೊದಲು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು.