ಬೈಕಂಪಾಡಿ: ಇಲ್ಲಿನ ಸುತ್ತಮುತ್ತ ಪ್ರದೇಶದಲ್ಲಿರುವ ಹಲವು ಬೃಹತ್ ಕೈಗಾರಿಕೆಗಳ ಅಕ್ರಮಗಳಿಂದಾಗಿ ಭಾರೀ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಸಂಭವಿಸುತ್ತಿದೆ. ಇವುಗಳನ್ನು ತಡೆಗಟ್ಟಲು ಮುಂದಾಗದ ಮಾಲಿನ್ಯ ನಿಯಂತ್ರಣ ಮಂಡಳಿ ಅಕ್ರಮಗಳನ್ನು ಮುಚ್ಚಿಹಾಕುತ್ತಿವೆ. ಇದರ ಪರಿಣಾಮ ಜನರ ಆರೋಗ್ಯಕ್ಕೆ ಕಂಟಕ ಎದುರಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಹಸಿರು ವಲಯ ನಿರ್ಮಿಸಲು ಹಿಂದೇಟು ಹಾಕುತ್ತಿರುವ ಎಮ್ಆರ್ಪಿಎಲ್, ಗಂಭೀರ ಪರಿಸರ ಮಾಲಿನ್ಯ ಎಸಗುತ್ತಿರುವ ಅದಾನಿ ವಿಲ್ಮಾ, ರುಚಿಗೋಲ್ಡ್, ಯು ಬಿ ಬಿಯರ್ ಸಹಿತ ಬೃಹತ್ ಕೈಗಾರಿಕೆಗಳ ಮೇಲೆ ಕ್ರಮಕೈಗೊಳ್ಳದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಣಕು ಶವಯಾತ್ರೆ, ಪ್ರತಿಕೃತಿ ದಹನ ಪ್ರತಿಭಟನೆ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ವತಿಯಿಂದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಮಂಡಳಿಯ ಮುಂಭಾಗ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪರಿಸರ ಮಾಲಿನ್ಯ ನಿಯಂತ್ರಿಸಲು ಕ್ರಮಕೈಗೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಬೃಹತ್ ಕೈಗಾರಿಕೆಗಳ ಅಡಿಯಾಳಾಗಿ ಅಕ್ರಮಗಳನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಜೋಕಟ್ಟೆ, ಬಜ್ಪೆ, ಬೈಕಂಪಾಡಿ, ಸುರತ್ಕಲ್ ಮುಂತಾದ ಕೈಗಾರಿಕಾ ಬಾಹುಳ್ಯ ಪ್ರದೇಶಗಳು ಗಂಭೀರವಾದ ಕೈಗಾರಿಕಾ ಮಾಲಿನ್ಯಕ್ಕೆ ಗುರಿಯಾಗಿದ್ದು ಜನರ ಆರೋಗ್ಯಕ್ಕೆ ಕಂಟಕ ಎದುರಾಗಿದೆ ಎಂದು ಆರೋಪಿಸಿದರು.
ಸರಕಾರದ ಆದೇಶದ ಹೊರತಾಗಿಯು ಹಸಿರು ವಲಯ ನಿರ್ಮಾಣಕ್ಕಾಗಿ ಎಮ್ಆರ್ಪಿಎಲ್ 27 ಎಕರೆ ಭೂಸ್ವಾಧೀನಕ್ಕೆ ಸಹಕರಿಸುತ್ತಿಲ್ಲ. 33 ಶೇಕಡ ಜಮೀನಿನಲ್ಲಿ ಹಸಿರು ವಲಯ ನಿರ್ಮಿಸದಿರುವುದು ಕಂಪೆನಿಗೆ ಬೀಗ ಜಡಿಯುವ ಅಪರಾಧವಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಎಮ್ಆರ್ಪಿಎಲ್ ಅಧಿಕಾರಿಗಳಿಗೆ ವಿಧೇಯವಾಗಿ ನಡೆದುಕೊಳ್ಳುತ್ತಿದೆ.
ಗೌತಮ್ ಅದಾನಿಯ ವಿಲ್ಮಾ, ಬಾಬಾ ರಾಮ್ ದೇವ್ ಒಡೆತನದ ರುಚಿಗೋಲ್ಡ್ ಮತ್ತಿತರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಬೃಹತ್ ಕಂಪೆನಿಗಳ ಮಾಲಿನ್ಯದಿಂದ ಪಲ್ಗುಣಿ ನದಿ ವಿಷಮಯಗೊಳ್ಳುತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣುಮುಚ್ಚಿ ಕೂತಿದೆ. ಈ ಕುರಿತು ಹದಿನೈದು ದಿನಗಳ ಅಂತರದಲ್ಲಿ ಎರಡು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ ಮುಂಭಾಗ ಪ್ರತಿಭಟನೆ ನಡೆಸಿದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಖೇದಕರ. ಇಂತಹ ಹೊಣೆಗೇಡಿತನದ ವಿರುದ್ದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಮುನೀರ್ ಕಾಟಿಪಳ್ಳ ಕರೆ ನೀಡಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್ ಮಾತನಾಡಿದರು.
ಆರಂಭದಲ್ಲಿ ಅಣಕು ಶವಯಾತ್ರೆಯನ್ನು ಬೈಕಂಪಾಡಿ ಜಂಕ್ಷನ್ ನಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ವರಗೆ ನಡೆಸಲಾಯಿತು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ ಎಸ್ ಬಶೀರ್, ಹೋರಾಟ ಸಮಿತಿ ಸಹ ಸಂಚಾಲಕ ಅಬೂಬಕ್ಕರ್ ಬಾವ, ಗ್ರಾಪಂ ಸದಸ್ಯೆ ಜುಬೇದಾ, ಮನೋಜ್ ಜೋಕಟ್ಟೆ, ಶ್ರೀನಿವಾಸ್, ಸುರೇಂದ್ರ ಜೋಕಟ್ಟೆ, ಶೇಖರ್ ನಿರ್ಮುಂಜೆ, ಇಕ್ಬಾಲ್ ಜೋಕಟ್ಟೆ, ಚಂದ್ರಶೇಖರ್, ಸಿಲ್ವಿಯಾ, ಯಮುನಾ ಕೆಂಜಾರು, ಹನೀಫ್ ಜೋಕಟ್ಟೆ, ರಾಜು ಜೋಕಟ್ಟೆ, ಲಾನ್ಸಿ ಜೋಕಟ್ಟೆ, ದೊಂಬಯ್ಯ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.