ಮಳೆಯ ಅಬ್ಬರ : ಜನರ ಜೀವನ ತತ್ತರ

ಉತ್ತರ ಕರ್ನಾಟಕ, ಚಿಕ್ಕಮಂಗಳೂರು ಹಾಗೂ ಮಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಸತತವಾಗಿ ಸುರಿಯುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡದಲ್ಲಿ ಮಳೆ ಜೋರಾಗಿ ಸುರಿಯುತ್ತಿದೆ. ಇದರ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂದು ಜನರು ಆತಂಕದಲ್ಲಿ ದಿನಗಳನ್ನು ಕಳೆಯುವಂತಾಗಿದೆ. 

 

ರಾಜ್ಯದ ಕೆಲವಡೆಗಳಲ್ಲಿ ಹೈ ಅಲರ್ಟ್ ಘೊಷಣೆ ಮಾಡಿದ್ದು, ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರಕಾರ ಸೂಚನೆಯನ್ನು ನೀಡಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದೆ.  ಭೀಮಾ ನದಿಯ  ಪ್ರವಾಹಕ್ಕೆ  ಚಿತ್ತಾಪೂರ ತಾಲ್ಲೂಕಿನ ಕಡಬೂರು ಗ್ರಾಮ ಪೂರ್ತಿ ಜಲಾವೃತ ಗೊಂಡಿದೆ. ಮನೆಯ ಸುತ್ತಲು ಮಳೆ ನೀರು ತುಂಬಿಕೊಂಡಿದೆ. ಚಿಂಚೋಳ್ಳಿಯ ಚಂದ್ರಪಳ್ಳಿ ಗ್ರಾಮದಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಚಿಂಚೋಳ್ಳಿ  ಪಟ್ಟಣದ ಹೊಲಗಳು ಸಂಪೂರ್ಣ ಜಲಾಶಯಗಳಾಗಿ ಬೆಳೆ ಮಧ್ಯೆ ಭಾರಿ ನೀರು ಹರಿಯುತ್ತಿದೆ. ಐನೋಳಿ ದೇಗುಲಮಡಿ ಬಳಿ ಪ್ರವಾಹಕ್ಕೆ ಸಲಿಕಿರುವ ಬಿಹಾರ ಮೂಲದ ಕಾರ್ಮಿಕರು ತಾವು ವಾಸಿಸುವ ಜಿಂಕ್ ಶೀಟಿನ ಶೇಡ್ ಮೇಲೆ ನಿಂತು ರಕ್ಷಣೆಗಾಗಿ ಕಾಯ್ತಾ ಇರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರದ ಉಜನಿ ಮತ್ತು ಮೀರ ಜಲಾಶಯದಿಂದ ಭೀಮಾನದಿಗೆ ನೀರು ಬಿಡುಗಡೆ ಮಾಡಿದ್ದರಿಂದ ಭೀಮಾನದಿ ಉಕ್ಕಿ ಹರಿಯುತ್ತಿದೆ. ಭೀಮಾನದಿ ತೀರದ ಸುತ್ತಮುತ್ತಲ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಆಲಮೇಲ ಪಟ್ಟಣ ಸಂಪೂರ್ಣ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸವದತ್ತಿ, ಬೈಲಹೊಂಗಲ, ಚಿಕ್ಕೋಡಿ, ಅಥಣಿಯಲ್ಲಿ ಭಾರಿ ಮಳೆಯಾಗಿದ್ದು ಅಪಾರ ಹಾನಿಯಾಗಿದೆ. ಬಹುತೇಕ ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹತ್ತಿ, ಕಬ್ಬು, ಸೋಯಾಬೀನ್, ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು ರೈತ ಧಾರುಣ ಪರಿಸ್ಥಿತಿ ಎದರಿಸುವಂತಾಗಿದೆ. ಗದಗ್ ಜಿಲ್ಲೆಯ ರೋಣ, ಮುಂಡರಗಿಯಲ್ಲೂ ಮಳೆ ಅತಿವೃಷ್ಟಿಯನ್ನು ಸೃಷ್ಟಿಸಿದ್ದು ಜನ ಜೀವನ ಅಸ್ಥವ್ಯಸ್ಥಗೊಂಡಿದೆ.

ಮಹಾರಾಷ್ಟ್ರ ಆಂಧ್ರ ಪ್ರದೇಶ, ಕಲಬುರ್ಗಿ ಮತ್ತು ಬಿಜಾಪುರದಲ್ಲಿ ಮಳೆ ಸುರಿಯುತ್ತಿರುವದರಿಂದ ರಾಯಚೂರಿನ ಜಿಲ್ಲೆಯ ಜನ ಭಯಭಿತರಾಗಿದ್ದಾರೆ. ಅದರಲ್ಲೂ ದೇವದುರ್ಗ, ರಾಯಚೂರು ಗ್ರಾಮಾಂತರ, ಮಾನ್ವಿ, ಲಿಂಗಸ್ಗೂರು ಭಾಗದ ಜನರಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಜಿಲ್ಲಾಡಳಿತ ಹಾಗೂ ಸರಕಾರದ ಪದೆ ಪದೆ ನಿರ್ಲಕ್ಷ ವಹಿಸುತ್ತಿರುವ ಕಾರಣ ನಮಗೆ ಸಂಕಷ್ಟಗಳು ಎದರಾಗುತ್ತಿವೆ ಎಂದು ಯುವ ಮುಖಂಡ ಶಬ್ಬೀರ್ ಜಾಲಹಳ್ಳಿ ಆರೋಪಿಸಿದ್ದಾರೆ.

ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆ ಬಾಗಲಕೋಟೆ, ಬಿಜಾಪುರ, ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿಲಾಗಿದೆ. ಧಾರವಾಡ, ಗದಗ್,  ಕಲಬುರ್ಗಿ, ಚಿಕ್ಕಮಂಗಳುರು, ಶಿವಮೊಗ್ಗ  ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಕರಾವಳಿ ಭಾಗದಲ್ಲಿ ಭಾರೀ ಗಾಳಿ ಬೀಸಲಿದ್ದು ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಕಳೆದ ವರ್ಷ ಸುರಿದ ಮಳೆಯಿಂದಾಗಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕೃಷಿ ಭೂಮಿ ನಾಶವಾಗಿತ್ತು, ಅಪಾರ ಮನೆಗಳು ಹಾನಿಯಾಗಿದ್ದವು. ಈಗಲೂ ಅಂತಹದ್ದೆ ಮಳೆ ಸುರಿಯುತ್ತಿದೆ, ಕೃಷಿ ಭೂಮಿ, ಮನೆಗಳು ಜಲಾವೃತಗೊಂಡು ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕೇವಲ ಮಳೆ ಬಂದಾಗ ಮಾತ್ರ ಎಚ್ಚೆತ್ತು ಕೊಳ್ಳುವ ಬದಲು ಶಾಶ್ವತ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *