ಶಿವಮೊಗ್ಗ: ತಮ್ಮ ಮಗನ ಶಾಲಾ ವರ್ಗಾವಣೆ ಪತ್ರ ನೀಡದ ಶಾಲೆಯ ವಿರುದ್ದ ಪೋಷಕರು ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಪ್ರೀತಮ್ ಎಂಬ ವಿದ್ಯಾರ್ಥಿ ಮಲೆನಾಡು ಎಂಬ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಕೋವಿಡ್ನಿಂದಾಗಿ ವಿದ್ಯಾರ್ಥಿಯ ಶಾಲೆ ಶುಲ್ಕವನ್ನು ಕಟ್ಟಲಾಗದ ಪೋಷಕರು ಸರ್ಕಾರಿ ಶಾಲೆಗೆ ಸೇರಿಸಲು ತೀರ್ಮಾನ ಮಾಡಿದ್ದು, ವರ್ಗಾವಣೆ ಪತ್ರವನ್ನು ಕೇಳಿದ್ದಾರೆ. ಆದರೆ ಶಾಲಾ ಶುಲ್ಕವನ್ನು ಕಟ್ಟದ ಕಾರಣ ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿಯ ಮಲೆನಾಡು ಶಾಲೆ ವರ್ಗಾವಣೆ ಪತ್ರವನ್ನು ನೀಡಲು ನಿರಾಕರಿಸಿದೆ.
ಶಿಕ್ಷಣ ಇಲಾಖೆ ನಿಯಮದ ಪ್ರಕಾರ ವಿದ್ಯಾರ್ಥಿ ಒಂದು ಶಾಲೆ ಬಿಟ್ಟು ಇನ್ನೊಂದು ಶಾಲೆಗೆ ಸೇರಿದಾಗ ಶಾಲೆಯವರೇ ವರ್ಗಾವಣೆ ಪತ್ರವನ್ನು ಕಳುಹಿಸಬೇಕು. ಆದರೆ ಕುವೆಂಪು ಶಾಲೆಯವರು ಮಲೆನಾಡು ಶಾಲೆಗೆ ಪತ್ರ ಬರೆದಿದ್ರು ಸಹ ವರ್ಗಾವಣೆ ಪತ್ರ ಕಳುಹಿಸಿಲ್ಲ.
ಈ ಕುರಿತು ಪೋಷಕರು ತೀರ್ಥಹಳ್ಳಿ ಬಿಇಒ ಅವರಿಗೆ ಎರಡು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈಗ ತಮ್ಮ ಮಗ ಶಾಲೆಗೆ ಹೋಗದೇ ಮನೆಯಲ್ಲಿ ಇರುವಂತಾಗಿದೆ. ಇದರಿಂದ ತಮ್ಮ ಮಗನಿಗೆ ವರ್ಗಾವಣೆ ಪತ್ರ ನೀಡಬೇಕೆಂದು ಆಗ್ರಹಿಸಿ ಪ್ರೀತಮ್ ಪೋಷಕರು ಗ್ರಾಮಸ್ಥರೊಂದಿಗೆ ಬಿಇಒ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ವಿದ್ಯಾರ್ಥಿ ತಂದೆ ಪ್ರವೀಣ್ ಡಿಸೋಜರಿಗೆ ಕಳೆದ ಎರಡು ತಿಂಗಳಿಂದ ಖಾಸಗಿ ಶಾಲೆ ಹಣ ಕಟ್ಟುವಂತೆ ದುಂಬಾಲು ಬಿದ್ದಿದೆ. ವಿದ್ಯಾರ್ಥಿಯು ಸರ್ಕಾರಿ ಶಾಲೆಗೆ ಸೇರುವ ವೇಳೆ ದಾಖಲಾದ ನಂತರವೂ ಈ ಹಿಂಸೆ ಪೋಷಕರಿಗೆ ಆಘಾತ ತಂದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.