ಬಹಿಷ್ಕಾರಕ್ಕೆ ಜಗ್ಗದ ಮಾಲ್ಡೀವ್ಸ್ | ಮಾರ್ಚ್ 15ರ ಮೊದಲು ಸೇನೆ ಹಿಂಪಡೆಯಲು ಭಾರತಕ್ಕೆ ಗಡುವು

ನವದೆಹಲಿ: ತಮ್ಮ ದೇಶವನ್ನು ‘ಬೆದರಿಸಲಾಗುತ್ತಿದೆ’ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಭಾರತದ ಕುರಿತು ಪರೋಕ್ಷವಾಗಿ ಹೇಳಿಕೆ ನೀಡಿದ ಒಂದೇ ದಿನದಲ್ಲಿ, ಅವರ ಸರ್ಕಾರವು ಮಾರ್ಚ್‌ 15ರ ಒಳಗೆ ದೇಶದಲ್ಲಿರುವ ಭಾರತೀಯ ಸೇನೆಯನ್ನು ಹಿಂಪಡೆಯಬೇಕು ಎಂದು ಗಡುವು ನಿಗದಿಪಡಿಸಿದೆ. ಭಾನುವಾರ ಮಾಲೆಯಲ್ಲಿ ನಡೆದ ಭಾರತ-ಮಾಲ್ಡೀವ್ಸ್ ಉನ್ನತ ಮಟ್ಟದ ಕೋರ್ ಗ್ರೂಪ್‌ನ ಮೊದಲ ಸಭೆಯಲ್ಲಿ ಮುಯಿಝು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಗಡುವನ್ನು ಘೋಷಿಸಿದ್ದಾರೆ

“ಈ ಸಭೆಯಲ್ಲಿ ಅಧ್ಯಕ್ಷ ಮುಯಿಝು ಪರವಾಗಿ ಮಾಲ್ಡೀವಿಯನ್ ನಿಯೋಗವು ಮಾರ್ಚ್ 15 ರೊಳಗೆ ಭಾರತೀಯ ಸೈನ್ಯವನ್ನು ತೆಗೆದುಹಾಕಲು ಪ್ರಸ್ತಾಪಿಸಿದೆ” ಎಂದು ಅಧ್ಯಕ್ಷರ ಕಚೇರಿಯ ನೀತಿ ನಿರ್ದೇಶಕ ಅಹ್ಮದ್ ನಜೀಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ದಿನಾಂಕವನ್ನು ಸರ್ಕಾರ ಮತ್ತು ನಿರ್ದಿಷ್ಟವಾಗಿ ಅಧ್ಯಕ್ಷರು ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಹೇಳಿದೆ. ಮಾಲ್ಡೀವ್ಸ್

ಇದನ್ನೂ ಓದಿ: ಎನ್‌ಡಿಟಿವಿ ತೊರೆದ ವರ್ಷದ ನಂತರ ‘ಡಿಕೋಡರ್’ ಮೂಲಕ ಹಿಂತಿರುಗಿದ ಪ್ರಣಯ್ ರಾಯ್!

ಕಳೆದ ವರ್ಷ ನವೆಂಬರ್ 17 ರಂದು ದೇಶದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಮುಯಿಝು ಅವರು ಭಾರತ ತನ್ನ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಔಪಚಾರಿಕವಾಗಿ ವಿನಂತಿಸಿದ್ದರು, ಮಾಲ್ಡೀವಿಯನ್ ಜನರು ಹೊಸ ದೆಹಲಿಗೆ ಈ ವಿನಂತಿಯನ್ನು ಮಾಡಲು “ಬಲವಾದ ಜನಾದೇಶ” ನೀಡಿದ್ದಾರೆ ಎಂದು ಹೇಳಿದ್ದರು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಮಾಲ್ಡೀವ್ಸ್‌ನಲ್ಲಿ 88 ಭಾರತೀಯ ಸೇನಾ ಸಿಬ್ಬಂದಿ ಇದ್ದಾರೆ.

“ಭಾರತೀಯ ಸೇನಾ ಸಿಬ್ಬಂದಿ ದೇಶದಲ್ಲಿ ಇರುವಂತಿಲ್ಲ. ಇದು ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಮತ್ತು ಈ ಆಡಳಿತದ ನೀತಿಯಾಗಿದೆ” ಎಂದು ನಜೀಮ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಮಾರ್ಚ್ 15 ರ ಗಡುವನ್ನು ಉಲ್ಲೇಖಿಸಿ ವರದಿ ಮಾಡಿವೆ. ಆದಾಗ್ಯೂ, ಭಾರತದ ವಿದೇಶಾಂಗ ಸಚಿವಾಲಯ (MEA) ಮತ್ತು ಮಾಲ್ಡೀವ್ಸ್ ವಿದೇಶಾಂಗ ಕಚೇರಿ ನೀಡಿದ ಹೇಳಿಕೆಗಳಲ್ಲಿ ಈ ಗಡುವನ್ನು ಉಲ್ಲೇಖಿಸಲಾಗಿಲ್ಲ ಎಂದು ವರದಿಯಾಗಿದೆ.

“ಉಭಯ ದೇಶದ ಉನ್ನತ ಮಟ್ಟದ ಕೋರ್ ಗ್ರೂಪ್‌ನ ಮೊದಲ ಸಭೆ ಇಂದು ಮಾಲೆಯಲ್ಲಿ ನಡೆಯಿತು. ಸಭೆಯಲ್ಲಿ ಉಭಯ ದೇಶಗಳು ನಡೆಯುತ್ತಿರುವ ಅಭಿವೃದ್ಧಿ ಸಹಕಾರ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವುದು ಸೇರಿದಂತೆ ಪಾಲುದಾರಿಕೆಯನ್ನು ಹೆಚ್ಚಿಸುವ ಹಂತಗಳನ್ನು ಗುರುತಿಸುವ ನಿಟ್ಟಿನಲ್ಲಿ, ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವ್ಯಾಪಕ ಚರ್ಚೆ ನಡೆಸಲಾಯಿತು” ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: 2024ರ ಚುನಾವಣೆ ಏಕಾಂಗಿ ಹೋರಾಟ | ಇಂಡಿಯಾ ಅಥವಾ ಎನ್‌ಡಿಎ ಜೊತೆ ಮೈತ್ರಿ ಇಲ್ಲ – ಮಾಯಾವತಿ

“ಮಾಲ್ಡೀವ್ಸ್‌ನ ಜನರಿಗೆ ಮಾನವೀಯ ಮತ್ತು ಮೆಡ್ವಾಕ್ (ವೈದ್ಯಕೀಯ ಸ್ಥಳಾಂತರಿಸುವಿಕೆ) ಸೇವೆಗಳನ್ನು ಒದಗಿಸುವ ಭಾರತೀಯ ವಾಯುಯಾನ ಮೂಲಕ ನಿರಂತರ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಪರಸ್ಪರ ಕಾರ್ಯಸಾಧ್ಯವಾದ ಪರಿಹಾರವನ್ನು ಕಂಡುಕೊಳ್ಳುವ ಕುರಿತು ಎರಡೂ ಕಡೆಯವರು ಚರ್ಚೆ ನಡೆಸಿದರು” ಎಂದು ಅದು ಹೇಳಿದೆ. ಮಾಲ್ಡೀವ್ಸ್‌ ದೀರ್ಘಕಾಲದಿಂದ ರೋಗಿಗಳನ್ನು ಹೊರಗಿನ ದ್ವೀಪಗಳಿಂದ ಮಾಲೆಗೆ ವಿಮಾನದಲ್ಲಿ ಸಾಗಿಸಲು ಹಾಗೂ ಔಷಧಿಗಳು ಮತ್ತು ಆಹಾರ ಸರಬರಾಜುಗಳಂತಹ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲು ಭಾರತವನ್ನು ಅವಲಂಬಿಸಿದೆ.

ವರದಿಗಳ ಪ್ರಕಾರ, ಮಧ್ಯಾಹ್ನದವರೆಗೂ ನಡೆದ ಸಭೆಯಲ್ಲಿ ಭಾರತದ ಕಡೆಯಿಂದ ಹೈಕಮಿಷನರ್ ಮುನು ಮಹಾವರ್, ಡೆಪ್ಯುಟಿ ಹೈಕಮಿಷನರ್ ಮಯಾಂಕ್ ಸಿಂಗ್ ಮತ್ತು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ನ ಹಿರಿಯ ಅಧಿಕಾರಿಗಳು ಪ್ರತಿನಿಧಿಸಿದ್ದರು.

ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ ಸರ್ಕಾರದ ಇತ್ತೀಚಿನ ಗಡುವು ಹೇಳಿಕೆ ಹೊರಬಿದ್ದಿದೆ. ಮುಯಿಝ್ಝು ಸರ್ಕಾರದ ಮೂವರು ಉಪ ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪ ಪ್ರವಾಸದ ಫೋಟೋಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನಂತರ ರಾಜತಾಂತ್ರಿಕ ಬಿಕ್ಕಟ್ಟು ಸಂಭವಿಸಿತ್ತು.

ಇದನ್ನೂ ಓದಿ: ಭಾರತ್ ಜೋಡೋ ನ್ಯಾಯ್ ಯಾತ್ರೆ | ಮಣಿಪುರದಲ್ಲಿ ಮತ್ತೆ ಸಾಮರಸ್ಯ ತರಲು ಬಯಸುತ್ತೇವೆ – ರಾಹುಲ್ ಗಾಂಧಿ

ತಮ್ಮ ಸಚಿವರು ಮೋದಿಯ ಬಗ್ಗೆ ಹೇಳಿಕೆ ನೀಡಿದ ನಂತರ ಅಧ್ಯಕ್ಷ ಮುಯಿಜು ತಕ್ಷಣವೇ ಮೂವರು ಸಚಿವರನ್ನು ಅಮಾನತುಗೊಳಿಸಿದ್ದರು ಮತ್ತು ಈ ಬಗ್ಗೆ ಅವರ ಸರ್ಕಾರ ಸ್ಪಷ್ಟೀಕರಣವನ್ನೂ ನೀಡಿ, ಸಚಿವರು ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು. ಸರ್ಕಾರದ ಸಚಿವರ ಹೇಳಿಕೆಯ ಒಂದು ದಿನದ ನಂತರ ಭಾರತವು ಮಾಲ್ಡೀವಿಯನ್ ರಾಯಭಾರಿಯನ್ನು ನವದೆಹಲಿಗೆ ಕರೆಸಿ ವಿವಾದದ ಬಗ್ಗೆ ಸರ್ಕಾರದ ಅಸಮಾಧಾನವನ್ನು ಸ್ಪಷ್ಟಪಡಿಸಿತ್ತು.

ಈ ಘಟನೆ ನಡೆದ ನಂತರ ಚೀನಾಕ್ಕೆ ತೆರಳಿದ್ದ ಮುಯಿಝು ತಮ್ಮ ದೇಶವನ್ನು ಅನ್ನು ಚೀನಾಗೆ ಹತ್ತಿರವಾಗಿಸಲು ಪ್ರಯತ್ನಿಸಿದ್ದರು. ಚೀನಾ ಭೇಟಿಯ ನಂತರ ಸ್ವದೇಶಕ್ಕೆ ಮರಳಿದ ಬಳಿಕ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಭಾರತದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ದೇಶವನ್ನು ಹೆಸರಿಸದ ಅವರು, “ನಾವು ಚಿಕ್ಕವರಾದ ಮಾತ್ರಕ್ಕೆ ಅದು ನಮ್ಮನ್ನು ಬೆದರಿಸುವುದಕ್ಕೆ ನಿಮಗೆ ಪರವಾನಗಿ ನೀಡಿದಂತೆ ಅಲ್ಲ. ನಾವು ಯಾರ ಹಿತ್ತಲಲ್ಲೂ ಇಲ್ಲ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ದೇಶ. ಯಾವುದೇ ದೇಶ ಕೂಡಾ ಅದರ ಗಾತ್ರದ ಆಧಾರದಲ್ಲಿ ದೇಶದ ಆಂತರಿಕ ವ್ಯವಹಾರಗಳ ಮೇಲೆ ಪ್ರಭಾವ ಬೀರುವ ಹಕ್ಕನ್ನು ಹೊಂದಿಲ್ಲ” ಎಂದು ಹೇಳಿದ್ದರು.

ವಿಡಿಯೊ ನೋಡಿ: ಬೀದಿ ಬದಿ ವ್ಯಾಪಾರಿಗಳ ಮೇಲೆ ಬಿಬಿಎಂಪಿ ದೌರ್ಜನ್ಯJanashakthi Media

Donate Janashakthi Media

Leave a Reply

Your email address will not be published. Required fields are marked *