ಮಲಯಾಳಂ ಭಾಷಾ ಮಸೂದೆ 2025 | ಮಸೂದೆಯಲ್ಲಿ ಏನಿದೆ? ವಿರೋಧ ಸರಿಯೇ? ಸಿಎಂ ಸೇರಿ ವಿವಿಧ ಗಣ್ಯರ ಪ್ರತಿಕ್ರಿಯೆ ಹೀಗಿದೆ…

ಬೆಂಗಳೂರು :  ಕೇರಳ ಸರ್ಕಾರದ ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆ 2025ಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ. ಹಲವು ಗಣ್ಯರು ಕನ್ನಡ ಭಾಷೆಗೆ ಯಾವುದೆ ಧಕ್ಕೆ ಇಲ್ಲ, ಸಿದ್ದರಾಮಯ್ಯನವರು ಮಸೂದೆ ಓದಿಕೊಂಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮಲಯಾಳಂ

ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ‍್ಯದ ಮೇಲಿನ ಪ್ರಹಾರ ಎಂದು ಟ್ವೀಟ್ ಮೂಲಕ ವಿಷಾದಿಸಿದ್ದಾರೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಅಂತಾ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೋಗಿಲು ಸಂತ್ರಸ್ತರ ಪರವಾಗಿ ಕರ್ನಾಟಕ ಸರ್ಕಾರವನ್ನು ಟೀಕಿಸಿದ ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ತಿರುಗೇಟು ಕೊಡಲು ಮಲಯಾಳಿ ಭಾಷಾ ಮಸೂದೆಯನ್ನು ಸಿದ್ದರಾಮಯ್ಯ ತಪ್ಪಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪತ್ರಕರ್ತ ನವೀನ್‌ ಸೂರಿಂಜೆ ಖಾಸಗಿ ಡಿಜಿಟಲ್‌ ವಾಹಿನಿಗೆ ಬರೆದ ಲೇಖನವೊಂದರಲ್ಲಿ ತಿಳಿಸಿದ್ದಾರೆ.

ಬಹುಶಃ ಸಿದ್ದರಾಮಯ್ಯನವರು ‘ಮಲಯಾಳಿ ಭಾಷಾ ಮಸೂದೆ -2025’ ಅನ್ನು ಪೂರ್ತಿಯಾಗಿ ಓದಿಲ್ಲವೆಂದು ಕಾಣುತ್ತದೆ. ‘ಮಲಯಾಳಿ ಭಾಷಾ ಮಸೂದೆ -2025’ ರ ಸೆಕ್ಷನ್ 5 ರಲ್ಲಿ ಭಾರತ ಸಂವಿಧಾನದ ವಿಧಿ 346 ಮತ್ತು ವಿಧಿ 347ಗಳಿಗೆ ಒಳಪಟ್ಟಂತೆ, ಕೇರಳ ರಾಜ್ಯದಲ್ಲಿ ಎಲ್ಲಾ ಅಧಿಕೃತ ಉದ್ದೇಶಗಳಿಗೆ ಬಳಸಬೇಕಾದ ಭಾಷೆ ಮಲಯಾಳಂ ಆಗಿರುತ್ತದೆ. ಆದರೆ ಭಾರತ ಸರ್ಕಾರದೊಂದಿಗೆ, ಭಾರತ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳೊಂದಿಗೆ, ವಿದೇಶಗಳೊಂದಿಗೆ, ಇತರ ರಾಜ್ಯಗಳೊಂದಿಗೆ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮುಂತಾದವರೊಂದಿಗೆ ನಡೆಯುವ ಪತ್ರವ್ಯವಹಾರಗಳಿಗೆ ಇಂಗ್ಲಿಷ್ ಭಾಷೆಯನ್ನು ಬಳಸಬಹುದು ಎಂದು ಮಸೂದೆಯಲ್ಲಿ ವಿವರಿಸಲಾಗಿದೆ ಎಂದಿದ್ದಾರೆ.

ಸೆಕ್ಷನ್6(3) ಮಾತೃಭಾಷೆ ಮಲಯಾಳಂ ಹೊರತಾದ ಯಾವುದೇ ಭಾಷೆಯಾಗಿರುವ ವಿದ್ಯಾರ್ಥಿಗಳಿಗೆ, ತಮ್ಮ ಮಾತೃಭಾಷೆಯ ಜೊತೆಗೆ ಮಲಯಾಳಂ ಭಾಷೆಯನ್ನು ಅಧ್ಯಯನ ಮಾಡುವ ಅವಕಾಶ ನೀಡಲಾಗುತ್ತದೆ. ಹಾಗಾಗಿ ‘ಮಲಯಾಳಿ ಭಾಷಾ ಮಸೂದೆ -2025’ರ ಸೆಕ್ಷನ್ 6(3) ಪ್ರಕಾರ ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಮಲಯಾಳ ಭಾಷೆ ಕಲಿಯಬಹುದು. ಕನ್ನಡ ಭಾಷೆಗೆ ಇಲ್ಲಿ ಯಾವುದೇ ಅಪಾಯ ಇರುವುದಿಲ್ಲ ಎಂದಿದ್ದಾರೆ.

ಸೆಕ್ಷನ್ 7(2) ಪ್ರಕಾರ, ಕನ್ನಡದ ಮಕ್ಕಳು ಕೇರಳದ ಉತ್ತರ ಭಾಗದಲ್ಲಿ ಕನ್ನಡದಲ್ಲೇ ಅಧ್ಯಯನ ಮುಂದುವರೆಸುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸೆಕ್ಷನ್ 7(3) ಪ್ರಕಾರ, ಕನ್ನಡದ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವರಿಗೆ ಪ್ರಶ್ನೆ ಪತ್ರಿಕೆಯನ್ನೂ ಕನ್ನಡದಲ್ಲೇ ನೀಡಿ, ಉತ್ತರವನ್ನೂ ಕನ್ನಡದಲ್ಲೇ ಬರೆಯವ ಅವಕಾಶ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಪ್ರಾಥಮಿಕ ಶಾಲೆಯಲ್ಲೂ ಕನ್ನಡದಲ್ಲೇ ಕನ್ನಡ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಭಾರತದ ಸಂವಿಧಾನದ ಪ್ರಕಾರ ಭಾಷೆ ಉಳಿಸಲು ಕಾಯ್ದೆ ಮಾಡಿಕೊಳ್ಳಬಹುದು. ಕರ್ನಾಟಕದಲ್ಲೂ ಕಾಯ್ದೆ ಇದೆ. ಆದರೆ, ಕಾಯ್ದೆ ಅಲ್ಲಿನ ಭಾಷಿಕ ಅಲ್ಪಸಂಖ್ಯಾತರನ್ನ ಹೇಗೆ ಸಂರಕ್ಷಿಸುತ್ತದೆ ಅನ್ನೋದು ಮುಖ್ಯ. ಕಾಸರಗೋಡಿನಲ್ಲಿ 90% ಕನ್ನಡ ಮಾತಾಡುತ್ತಿದ್ದರೂ ಕೇರಳಕ್ಕೆ ಸೇರಿದೆ. ಈ ಕಾಯ್ದೆ ತರುವ ಮುಂಚೆ 8 ಲಕ್ಷ ಕನ್ನಡಿಗರ ಬಗ್ಗೆ ಯೋಚನೆ ಮಾಡಬೇಕಿತ್ತು. ರಾಷ್ಟ್ರಪತಿಗಳು ಮತ್ತು ‌ಕೇಂದ್ರ ಸರ್ಕಾರ ಕೂಡಲೇ ಮಧ್ಯೆ ‌ಪ್ರವೇಶ ಮಾಡಬೇಕು. ಅಲ್ಪಸಂಖ್ಯಾತ ಭಾಷಿಕರಿಗೆ ಗೌರವ ಕೊಡುವ ‌ಕೆಲಸ ಆಗಬೇಕು. ಅಲ್ಪಸಂಖ್ಯಾತ ಭಾಷಿಕರನ್ನ ಹೊರತುಪಡಿಸಿ ಈ ಬಿಲ್ ತಿದ್ದುಪಡಿ ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿದ್ದಾರೆ.

ಕೇರಳ ಸರ್ಕಾರ ಹೇಳುವುದೇನು..?

ಈ ಮಸೂದೆಯನ್ನು ಮಂಡಿಸುವಾಗ ಕೇರಳದ ಕಾನೂನು ಸಚಿವ ಪಿ. ರಾಜೀವ್, ತಮಿಳು, ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳನ್ನು ತಮ್ಮ ಮಾತೃಭಾಷೆಯಾಗಿ ಪರಿಗಣಿಸುವ ನಾಗರಿಕರು ಸೇರಿದಂತೆ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಮಸೂದೆ ಪ್ರಯತ್ನಿಸುತ್ತದೆ ಎಂದು ತಿಳಿಸಿದ್ದಾರೆ.

ಭಾಷಾ ಅಲ್ಪಸಂಖ್ಯಾತರಿಗೆ ಇದು ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ. ಅವರು ರಾಜ್ಯ ಸರ್ಕಾರದ ಸಚಿವಾಲಯ, ಇಲಾಖಾ ಮುಖ್ಯಸ್ಥರು ಮತ್ತು ಆ ಪ್ರದೇಶಗಳಲ್ಲಿರುವ ರಾಜ್ಯ ಸರ್ಕಾರದ ಎಲ್ಲಾ ಸ್ಥಳೀಯ ಕಚೇರಿಗಳೊಂದಿಗೆ ಪತ್ರವ್ಯವಹಾರಕ್ಕಾಗಿ ತಮ್ಮ ಭಾಷೆಗಳನ್ನು ಬಳಸಲು ಅನುಮತಿಸಲಾಗುತ್ತದೆ . ಇದಲ್ಲದೆ, ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮಕ್ಕೆ ಅನುಗುಣವಾಗಿ ರಾಜ್ಯದ ಶಾಲೆಗಳಲ್ಲಿ ಮಲಯಾಳಂ ಹೊರತುಪಡಿಸಿ ಬೇರೆ ಯಾವುದೇ ಭಾಷೆಯನ್ನು ಮಾತೃಭಾಷೆಯಾಗಿಸಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಭಾಷೆಗಳಲ್ಲಿ ತಮ್ಮ ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತದೆ. ಮಲಯಾಳಂ ಮಾತೃಭಾಷೆಯಲ್ಲದ ಇತರ ರಾಜ್ಯಗಳು ಮತ್ತು ವಿದೇಶಗಳ ವಿದ್ಯಾರ್ಥಿಗಳಿಗೆ 9, 10 ಮತ್ತು ಹೈಯರ್ ಸೆಕೆಂಡರಿ ಕ್ಲಾಸುಗಳಲ್ಲಿ ಮಲಯಾಳಂ ಭಾಷೆಯಲ್ಲಿ ಪರೀಕ್ಷೆ ಬರೆಯುವುದರಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *