ಕೆ.ಎನ್.ಗಣೇಶ್
ಆರ್‌ಎಸ್‌ಎಸ್ ತನ್ನ ಇತಿಹಾಸವನ್ನು ಹಸಿಸುಳ್ಳುಗಳು ಮತ್ತು ಅರ್ಧ ಸತ್ಯಗಳ ಮೇಲೆ ಕಟ್ಟಿ, ಸದಾ ಕುಯುಕ್ತಿ,, ಕಾಲ್ಪನಿಕತೆ ಮತ್ತು ಕಪಟದಿಂದ ಅಲಂಕರಿಸಿದೆ, ಇದನ್ನು ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಎನ್ನುತ್ತ ರಾಷ್ಟ್ರದ ಬಗ್ಗೆ ತಮ್ಮದೇ ಆದ ಪರಿಕಲ್ಪನೆಗಳನ್ನು ಹೊಸೆಯಲು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲು ಹಾಗೂ ಆರ್‌ಎಸ್‌ಎಸ್ ವಿರೋಧಿಗಳನ್ನು ರಾಷ್ಟ್ರವಿರೋಧಿಗಳು ಎಂದು ಟೀಕಿಸಲು ಅವನ್ನು ಬಳಸುತ್ತಿದೆ. ಮತ್ತು ಐಸಿಎಚ್‌ಆರ್ ನಂತಹ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಮುಸ್ಲಿಂ ವಿರೋಧಿ ಪ್ರಚಾರಕ್ಕೆ ಮೇವು ಒದಗಿಸುವಂತೆ ಮಾರ್ಪಡಿಸಲಾಗಿದೆ. ಮಲಬಾರ್ ಬಂಡಾಯಗಾರರನ್ನು ಕುರಿತಂತೆ ಐಸಿಎಚ್‌ಆರ್ ನ ಇತ್ತೀಚಿನ ನಡೆಯನ್ನು ವೈಜ್ಞಾನಿಕ ಇತಿಹಾಸ ಲೇಖನ ಶಾಸ್ತ್ರದ ಮೇಲೆ ಆರ್‌ಎಸ್‌ಎಸ್ ಆಕ್ರಮಣದ ಮುಂದುವರಿಕೆಯಾಗಿ ನೋಡಬೇಕು.
ಹುತಾತ್ಮರ ನಿಘಂಟಿನ ಐದನೇ ಸಂಪುಟವನ್ನು ಪರಿಶೀಲಿಸಲು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯು(ಐಸಿಎಚ್‌ಆರ್) ರಚಿಸಿದ ತ್ರಿಸದಸ್ಯ ಸಮಿತಿಯ ಶಿಫಾರಸು, ಭಾರತೀಯ ಸ್ವಾತಂತ್ರ‍್ಯ ಹೋರಾಟ (1857-1947) ಹುತಾತ್ಮರ ನಿಘಂಟಿನಿಂದ 387 ನಮೂದುಗಳನ್ನು ತೆಗೆದುಹಾಕಲು ಸೂಚಿಸಿದ್ದು ವಿವಾದವನ್ನು ಹುಟ್ಟುಹಾಕಿದೆ. 1921ರ ಮಲಬಾರ್ ಬಂಡಾಯವನ್ನು ಹತ್ತಿಕ್ಕಲು ಬ್ರಿಟಿಷ್ ಆಡಳಿತವು ಗಲ್ಲಿಗೇರಿಸಿದವರ ಹೆಸರುಗಳು ಈ ಪಟ್ಟಿಯಲ್ಲಿವೆ. ಆರೆಸ್ಸೆಸ್ ಪತ್ರಿಕೆಯಾದ ಆರ್ಗನೈಸರ್ ಸಂಪೂರ್ಣ ಸಂಚಿಕೆಯೊಂದನ್ನು ಮಲಬಾರ್ ಬಂಡಾಯದ ಶತಮಾನೋತ್ಸವವನ್ನು ತಮ್ಮ ಇಸ್ಲಾಮಿಕ್ ವಿರೋಧಿ ಪ್ರಚಾರಕ್ಕೆ ನೆಪವಾಗಿ ಬಳಸುವುದಕ್ಕಾಗಿ ಮೀಸಲಿಟ್ಟಿದೆ.
ಕೇರಳ ರಾಜ್ಯದ ಹೊರಗಿನವರಿಗೆ ಐಸಿಎಚ್‌ಆರ್ ನ ಈ ನಡೆಯ ಮಹತ್ವ ತಿಳಿಯದಿರುವ ಸಾಧ್ಯತೆಯಿದೆ ಏಕೆಂದರೆ ಮಲಬಾರ್ ಬಂಡಾಯದ ನಿಜವಾದ ನಡೆ ಅವರಿಗೆ ಪರಿಚಯವಿಲ್ಲದಿರಬಹುದು. ಪ್ರಮಾಣಿತ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಕೂಡ ‘ಮೊಪ್ಲಾಗಳ’ ದಂಗೆಯನ್ನು ಸಂಕ್ಷಿಪ್ತವಾಗಿ ನಮೂದಿಸುತ್ತಾರೆ. ಮತ್ತು ಅದನ್ನು ಒಂದು ಸಂಕುಚಿತ ಮತೀಯ ದಂಗೆಯೆಂಬಂತೆ ಉಲ್ಲೇಖಿಸುತ್ತಾರೆ. ಆದ್ದರಿಂದ ನಾವು ಐಸಿಎಚ್‌ಆರ್ ನಡೆಯ ಹಿಂದಿರುವ ರಾಜಕೀಯವನ್ನು ಅರಿತು ಕೊಳ್ಳುವ ಮೊದಲು ಈ ಬಂಡಾಯದ ಘಟನೆಗಳ ಸಂಕ್ಷಿಪ್ತ ವಿವರವನ್ನು ಒದಗಿಸುವುದು ಅಗತ್ಯವೆಂದು ತೋರುತ್ತದೆ.
ದಂಗೆಯ ಹಿನ್ನೆಲೆ:
ಉತ್ತರ ಕೇರಳದಲ್ಲಿ ಅಸ್ತಿತ್ವದಲ್ಲಿದ್ದ ಅನೇಕ ಮಧ್ಯಕಾಲೀನ ಪ್ರಭುತ್ವಗಳಿಂದ ಮಲಬಾರ್ ಜಿಲ್ಲೆಯು 1792ರಲ್ಲಿ ರೂಪುಗೊಂಡಿತು. ಕೋಝಿಕೋಡ್ ನಗರವು ಇದರ ಪ್ರಧಾನ ಕೇಂದ್ರವಾಗಿತ್ತು, ಮತ್ತು ಮಲಬಾರಿನ ಉತ್ತರ ಭಾಗದ ಆಡಳಿತವನ್ನು ತಲಶೇರಿಯಿಂದ, ದಕ್ಷಿಣ ಭಾಗದ್ದನ್ನು ಚೆರ್ಪುಲಶೇರಿಯಿಂದ ನಿರ್ವಹಿಸಲಾಗುತ್ತಿತ್ತು. ನಂತರ, ಕಂದಾಯ ಕಚೇರಿಯನ್ನು ತಿರುರಂಗಡಿಯಲ್ಲಿ ಸ್ಥಾಪಿಸಲಾಯಿತು. ಮಲಬಾರಿನ ದಕ್ಷಿಣ ಭಾಗವು ಎರನಾಡ್, ವಲ್ಲುವನಾಡ್ ಮತ್ತು ಪೊನ್ನಾನಿ ತಾಲ್ಲೂಕುಗಳನ್ನು ಒಳಗೊಂಡಿತ್ತು. ಮಲಬಾರ್ ದಂಗೆಯ ಬಹುಪಾಲು ಘಟನೆಗಳು ಎರನಾಡ್ ತಾಲೂಕಿನಲ್ಲಿ ನಡೆದವು, ಕೆಲವು ಪೊನ್ನಾನಿ ಮತ್ತು ವಳ್ಳುವನಾಡ್‌ಗಳಲ್ಲೂ ಸಹ ನಡೆದವು.
ಬ್ರಿಟಿಷರ ಆಕ್ರಮಣಕ್ಕೆ ಮುಂಚಿತವಾಗಿ, ಎರನಾಡಿನ ವಿಶಾಲವಾದ ಭಾಗಗಳನ್ನು ಝಮೊರಿನ್ ರಾಜಮನೆತನವು ನಿಯಂತ್ರಿಸುತ್ತಿತ್ತು, ಅವರು ಬ್ರಿಟಿಷರ ಅಡಿಯಲ್ಲಿ ಪ್ರಮುಖ ಭೂಮಾಲೀಕರಾಗಿ ಬದಲಾದರು. ನೀಲಂಬೂರಿನ ಮನೆತನ ಮತ್ತು ಇತರ ಕೆಲವು ಬ್ರಾಹ್ಮಣ ಮನೆಗಳು ಸೇರಿದಂತೆ ಇತರ ಭೂಮಾಲೀಕರು ಇದ್ದರು. ಝಮೊರಿನ್‌ಗಳ ಸೈನ್ಯ ಮತ್ತು ಕಂದಾಯ ಸಂಗ್ರಾಹಕರಾಗಿದ್ದ ಹಲವಾರು ನಾಯರ್ ಮನೆತನಗಳು ಬ್ರಿಟಿಷರ ಅಡಿಯಲ್ಲಿ ಭೂಮಾಲೀಕ ಅಥವಾ ಜೆನ್ಮಿ ಸ್ಥಾನಮಾನವನ್ನು ಪಡೆದವು. ಈ ಪ್ರದೇಶದ ಮೂಲ ಕೃಷಿಕರು ಗುಲಾಮ ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದ್ದವರು. ಹದಿನಾರನೇ ಶತಮಾನದಿಂದ, ಕರಾವಳಿ ಪ್ರದೇಶದಿಂದ ಕ್ರಮೇಣವಾಗಿ ಮುಸ್ಲಿಮರು ಈ ಪ್ರದೇಶಕ್ಕೆ ವಲಸೆ ಬಂದರು. ಮುಸ್ಲಿಮರು ಮೂಲತಃ ವ್ಯಾಪಾರಿಗಳು ಮತ್ತು ಸಣ್ಣ ರೈತರಾಗಿ ಕಾಣಿಸಿಕೊಂಡರು, ಆದರೆ ಅವರ ವಲಸೆಗಳು ಹೆಚ್ಚಾದಂತೆ, ಅವರು ಆಗಿದ್ದ ಭೂಮಾಲೀಕ-ಗೇಣಿದಾರರ ಸಂಬಂಧಗಳಲ್ಲಿ, ಗೇಣಿ ಸಾಗುವಳಿದಾರರಾದರು.
ಅರೇಬಿಯನ್ ಸಮುದ್ರದಲ್ಲಿ ಯುರೋಪಿಯನ್ ವ್ಯಾಪಾರಿಗಳ ಚಟುವಟಿಕೆಯಿಂದಾಗಿ, ಅತ್ಯಂತ ಸಕ್ರಿಯ ವ್ಯಾಪಾರಿಗಳು, ನಾವಿಕರು ಮತ್ತು ಮಧ್ಯವರ್ತಿಗಳಾಗಿದ್ದ (ಮಾಪ್ಪಿಳ ಎಂಬ ಪದವು ಅವರ ಮಧ್ಯವರ್ತಿ ಸ್ಥಾನಮಾನವನ್ನು ಸೂಚಿಸುತ್ತದೆ) ಮುಸ್ಲಿಮರು ಒಳನಾಡುಗಳತ್ತ ವಲಸೆ ಹೋಗುವಂತಾಯಿತು. ಫ್ರೆಂಚ್ ಬಂದರು ಮಾಹೆಯನ್ನು ಹೊರತುಪಡಿಸಿ ಮಲಬಾರ್ ಕರಾವಳಿಯ ಸಂಪೂರ್ಣ ಭಾಗ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣಕ್ಕೆ ಒಳಪಟ್ಟಿತು. ಮುಸ್ಲಿಂ ವ್ಯಾಪಾರಿಗಳು ಕಂಪನಿಯ ಮಧ್ಯವರ್ತಿಗಳ ಸ್ಥಿತಿಗೆ ಇಳಿದರು ಮತ್ತು ಅವರನ್ನು ಅವಲಂಬಿಸಿದವರು ಒಳನಾಡಿಗೆ ವಲಸೆ ಹೋಗಬೇಕಾಯಿತು. ಇದು ಅವರಲ್ಲಿ ಬ್ರಿಟಿಷ್ ವಿರೋಧಿ ಭಾವನೆಗಳ ಬೆಳವಣಿಗೆಗೆ ಕಾರಣವಾಯಿತು. ಮಲಬಾರಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಯುದ್ಧಗಳಲ್ಲಿ ಮಲಬಾರಿನ ಮಾಪಿಳ್ಳರು ಟಿಪ್ಪು ಸುಲ್ತಾನನ ಸೈನ್ಯದೊಂದಿಗೆ ಸೇರಿ ಹೋರಾಡಿದರು. ಬ್ರಿಟಿಷರ ಆಕ್ರಮಣದ ನಂತರ ಅವರು ಬ್ರಿಟಿಷರ ವಿರುದ್ಧ ಪಝಾಸ್ಸಿ ದಂಗೆಯ (1802-1806) ಸಕ್ರಿಯ ಬೆಂಬಲಿಗರಾಗಿದ್ದರು.
ಬ್ರಿಟಿಷರ ಭೂ-ಕಂದಾಯ ವ್ಯವಸ್ಥೆ ಹಿಂದಿನ ಭೂಮಾಲೀಕರು, ರಾಜಮನೆತನಗಳು, ಬ್ರಾಹ್ಮಣರು ಮತ್ತು ಅವರ ಹಿಂಬಾಲಕರಿಗೆ ಲಾಭದಾಯಕವಾಗಿತ್ತು. ಕಂದಾಯ ಪಾವತಿಸುವ ರೈತರಿಗೆ ಮೊದಲಿನ ಭೂಮಾಲೀಕ-ಗೇಣಿದಾರ ಸಂಬಂಧಕ್ಕೆ ತೊಂದರೆಯಾಗಲಿಲ್ಲ. ಆದರೆ ಭೂಮಾಲೀಕರು ತಮ್ಮ ಕಂದಾಯ ಹೊರೆಯನ್ನು ಸ್ವ-ಇಚ್ಛೆಯಂತೆ ಗೇಣಿದಾರ ಸ್ಥಾನಕ್ಕೆ ಇಳಿದ ತಮ್ಮ ಗೇಣಿದಾರರಿಗೆ ವರ್ಗಾಯಿಸಲು ಅವಕಾಶ ಮಾಡಿಕೊಟ್ಟಿತು. ಗೇಣಿಯನ್ನು ನಿರಂಕುಶವಾಗಿ ಹೆಚ್ಚಿಸಲಾಯಿತು ಮತ್ತು ಗೇಣಿದಾರರನ್ನು ಲಂಗುಲಗಾಮಿಲ್ಲದೆ ಒಕ್ಕಲೆಬ್ಬಿಸುವುದು ಆರಂಭವಾಯಿತು. ಒಳಪ್ರದೇಶಗಳ ಮಾರುಕಟ್ಟೆಗಳಲ್ಲಿ ಕೆಲಸ ಮಾಡುವ ವ್ಯಾಪಾರಿಗಳು ಭಾರೀ ಸುಂಕಕ್ಕೆ ಒಳಗಾದರು. ಇವೆಲ್ಲವೂ ಗೇಣಿದಾರರು, ಸ್ಥಳೀಯ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳ ಸ್ಥಿತಿಯನ್ನು ಹದಗೆಡಿಸಿತು. ಇದು ಗೇಣಿದಾರರು, ಸಣ್ಣ ರೈತರು ಮತ್ತು ವ್ಯಾಪಾರಿಗಳಲ್ಲಿ ಬ್ರಿಟಿಷರು ಮತ್ತು ಭೂಮಾಲೀಕ ವರ್ಗಗಳ ವಿರುದ್ಧದ ವೈಷಮ್ಯವನ್ನು ಹೆಚ್ಚಿಸಿತು, ಇದು ಹತ್ತೊಂಬತ್ತನೆಯ ಶತಮಾನದಲ್ಲಿ ಹಲವಾರು ದಂಗೆಗಳಲ್ಲಿ ಸ್ಫೋಟಗೊಂಡಿತು.
ಈ ದಂಗೆಗಳು ಬಿಡಿಬಿಡಿಯಾಗಿದ್ದವು ಮತ್ತು ಸ್ಥಳೀಯ ಸಮಸ್ಯೆಗಳು ಮತ್ತು ಪ್ರಕರಣಗಳ ಆಧಾರದ ಮೇಲೆ ಆಗಿರುವುದು ಕಂಡುಬರುತ್ತದೆ. ಒಂದೆಡೆ ಸ್ಥಳೀಯ ಭೂಮಾಲೀಕರು ಮತ್ತು ಅವರ ಹಿಂಬಾಲಕರು ಮತ್ತು ಮತ್ತೊಂದೆಡೆ ಗೇಣಿ ಸಾಗುವಳಿದಾರರು, ಸಣ್ಣ ರೈತರು ಮತ್ತು ಸ್ಥಳೀಯ ವ್ಯಾಪಾರಿಗಳ ನಡುವೆ ಸಂಘರ್ಷಗಳು ಇದ್ದವು. ಬಹುಪಾಲು ಬಂಡುಕೋರರು ಮಾಪ್ಪಿಳಾಗಳು ಮತ್ತು ಇತರ ಗುಂಪುಗಳು ಕೂಡ ಭಾಗವಹಿಸಿರುವ ಕೆಲವು ಪುರಾವೆಗಳಿವೆ. ಒಂದು ದಂಗೆ ಮತ್ತು ಇನ್ನೊಂದರ ನಡುವೆ ಸಾಮಾನ್ಯವಾಗಿ ಸಂಪರ್ಕವಿರುತ್ತಿರಲಿಲ್ಲ. ಬ್ರಿಟಿಷ್ ಆಡಳಿತಗಾರರು ಧಾರ್ಮಿಕ ಮುಖಂಡರು ಅಥವಾ ಸಯ್ಯಿದ್‌ಗಳು ದಂಗೆಗಳಿಗೆ ಕಾರಣವೆಂದು ಹೇಳಿದ್ದರು ಮತ್ತು 1852ರಲ್ಲಿ ಮಲಬಾರಿನಿಂದ ಸಯ್ಯಿದ್‌ಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ, ಸಯ್ಯಿದ್ ಫಸಲ್ ಅವರನ್ನು ಗಡೀಪಾರು ಮಾಡಿದರು. ಇದು ಬ್ರಿಟಿಷರ ವಿರುದ್ಧ ಮಾಪ್ಪಿಳ ಮುಸ್ಲಿಮರ ವಿರೋಧವನ್ನು ಹೆಚ್ಚಿಸಿತು ಮತ್ತು ಮಲಬಾರ್‌ನ ಕಲೆಕ್ಟರ್ ಥಾಮಸ್ ಕೊನೊಲಿ ಕೊಲೆಗೆ ಕಾರಣವಾಯಿತು. ಇಡೀ ದಕ್ಷಿಣ ಮಲಬಾರ್‌ನಲ್ಲಿ ದಬ್ಬಾಳಿಕೆಯ ಮೂಲಕ ದಂಗೆಗಳನ್ನು ನಿಗ್ರಹಿಸಲಾಯಿತು. ಮಲಬಾರ್ ವಿಶೇಷ ಪೋಲಿಸ್ ಪಡೆಯನ್ನು ಈ ಉದ್ದೇಶಕ್ಕಾಗಿಯೇ ರಚಿಸಲಾಯಿತು.
ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ದಕ್ಷಿಣ ಮಲಬಾರಿನಲ್ಲಿ ಜೀವನ ಪರಿಸ್ಥಿತಿಗಳು ಮತ್ತಷ್ಟು ಹದಗೆಟ್ಟವು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ‘ಯುದ್ಧದ ಆರ್ಥಿಕತೆ’ ಆರಂಭವಾದಾಗ, ಬೆಲೆಗಳು ಏರಿದವು, ಬರಗಾಲದ ಪರಿಸ್ಥಿತಿಗಳು ಸಂಭವಿಸಿದವು. ಜನರು ‘ಗಡ್ಡೆ-ಗೆಣಸು ಮತ್ತು ಹುಲ್ಲು’ ಮೇಲೆ ಬದುಕ ಬೇಕಾಗಿ ಬಂದ ಅವಧಿಯನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಯಾವುದೇ ಕಡೆಯಿಂದ ಯಾವುದೇ ಪರಿಹಾರವು ಸಿಗಲಿಲ್ಲ. ರಾಷ್ಟ್ರೀಯ ಚಳುವಳಿಗೆ ಬೆಂಬಲವು ನಿರ್ದಿಷ್ಟವಾಗಿ ಗೇಣಿ ಕೃಷಿಕರಲ್ಲಿ ಹೆಚ್ಚಾಯಿತು 1919ರಲ್ಲಿ ಮಂಜೇರಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನ-ಸಭೆಗಳಲ್ಲಿ ಜನರು ಎದುರಿಸುತ್ತಿದ್ದ ಪ್ರಾಥಮಿಕ ಸಮಸ್ಯೆಯಾಗಿ ಗೇಣಿದಾರರ ಪ್ರಶ್ನೆಯನ್ನು ಎತ್ತಲು ಪ್ರಯತ್ನಿಸಲಾಯಿತು. ಮೊದಲ ವಿಶ್ವ ಯುದ್ಧದಲ್ಲಿ ಟರ್ಕಿಯ ಭಾಗವಹಿಸುವಿಕೆ, ಬ್ರಿಟನ್ ಮತ್ತು ಅವರ ಮಿತ್ರರಾಷ್ಟ್ರಗಳ ಸೋಲು ದೇಶಕ್ಕೆ ಸ್ವಾತಂತ್ರ‍್ಯವನ್ನು ಒದಗಿಸುವ ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಳಿಸುತ್ತದೆ ಎಂದು ಮುಸ್ಲಿಂ ಬುದ್ಧಿಜೀವಿಗಳು ಭಾವಿಸಿದ್ದರು. ಮಿತ್ರಪಕ್ಷಗಳು ಯುದ್ಧವನ್ನು ಗೆದ್ದಾಗ ಅವರ ನಿರೀಕ್ಷೆಗಳು ಹುಸಿಯಾದವು, ಮತ್ತು 1920 ರ ಸಮಯದಲ್ಲಿ ಒಟ್ಟೋಮನ್ ಸಾಮ್ರಾಜ್ಯವನ್ನು ಮತ್ತು ಖಲೀಫಾ ಪಾತ್ರವನ್ನು ಕಿತ್ತುಹಾಕುವ ಮೂಲಕ ಟರ್ಕಿಯ ಮೇಲೆ ಸೆವ್ರೆಸ್ ಒಪ್ಪಂದವನ್ನು ಹೇರಲಾಯಿತು.
ಬಂಡಾಯ:
ಮಲಬಾರ್ ಬಂಡಾಯದ ಐತಿಹಾಸಿಕ ಸನ್ನಿವೇಶವು ಬ್ರಿಟಿಷರು ಮತ್ತು ದಕ್ಷಿಣ ಮಲಬಾರಿನ ರೈತರ (ಅವರಲ್ಲಿ ಹೆಚ್ಚಿನವರು ಮಾಪ್ಪಿಳ ಮುಸ್ಲಿಮರು) ನಡುವೆ ವೈಷಮ್ಯದ ಬೆಳವಣಿಗೆಗೆ ಸಾಕಷ್ಟು ಸನ್ನಿವೇಶಗಳಿದ್ದವು ಎಂದು ತೋರಿಸುತ್ತದೆ. ಭೂಮಾಲೀಕರು ಮತ್ತು ಗೇಣಿದಾರರ ನಡುವಿನ ವೈರುಧ್ಯಗಳು ಪ್ರಮುಖವಾಗಿದ್ದವು, ಮತ್ತು ಇದರಲ್ಲಿ ಧಾರ್ಮಿಕ ಐಡೆಂಟಿಟಿಗಳು ತುಲನಾತ್ಮಕವಾಗಿ ಸಣ್ಣ ಪಾತ್ರವನ್ನು ವಹಿಸಿದ್ದವು. 18ನೇ ಶತಮಾನದಲ್ಲಿ ಒಂದು ಘಟನೆಯಲ್ಲಿ ಮಾತ್ರ ದೇಗುಲಗಳನ್ನು ಅಪವಿತ್ರಗೊಳಿಸುವುದು ನಡೆಯಿತು, ಮತ್ತು 19ನೇ ಶತಮಾನದಲ್ಲಿ ನಡೆದ ಒಂದು ಘಟನೆಯಲ್ಲಿ ಮತಾಂತರ ಕಾರಣವಾಗಿತ್ತು. ಇತರ ಎಲ್ಲಾ ಸಂಘರ್ಷಗಳು ವಸಾಹತುಶಾಹಿ ಅಥವಾ ಭೂಮಾಲೀಕರ ದಬ್ಬಾಳಿಕೆಗೆ ನೇರವಾಗಿ ಸಂಬಂಧಿಸಿವೆ. ಮಾಪ್ಪಿಳ ಮುಸ್ಲಿಮರಲ್ಲಿ ಬ್ರಿಟಿಷ್ ವಿರೋಧಿ ಭಾವನೆ ಕೂಡ ಮೊದಲಿನಿಂದಲೂ ಕಾಣಿಸುತ್ತಿತ್ತು. ಮ್ಯಾಪಿಳಾಗಳ ‘ಧಾರ್ಮಿಕ ಹುರುಪಿಗೆ ಕೊಡುಗೆ ನೀಡಿತು ಎನ್ನಲಾದ ಖಿಲಾಫತ್ ಇವರ ನಡುವೆ ಬಂದದ್ದು 1916 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ಲಕ್ನೋ ಒಪ್ಪಂದದ ನಂತರವೇ. ವಿಶ್ವ ಯುದ್ಧದ ನಂತರವೇ ಇದು ಈ ಪ್ರದೇಶದಲ್ಲಿ ವೇಗವನ್ನು ಪಡೆಯಿತು. ಸ್ವಾತಂತ್ರ‍್ಯ ಹೋರಾಟಕ್ಕೆ, ಮುಸ್ಲಿಂ ಬುದ್ಧಿಜೀವಿಗಳ ಒಂದು ವಿಭಾಗವು ಬೆಂಬಲವನ್ನು ವ್ಯಕ್ತಪಡಿಸಿತು. ಕೈರೊದಲ್ಲಿ ಶಿಕ್ಷಣ ಪಡೆದು ಲಕ್ಷದ್ವೀಪದ ಕವರಟ್ಟಿಯಲ್ಲಿ ಸೇವೆ ಸಲ್ಲಿಸಿದ ಅಲಿ ಮುಸಲಿಯಾರ್ ಅವರ ಪ್ರಕರಣವು ತಿರುರಂಗಡಿ ಮಸೀದಿಯ ಖತೀಬರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲಿನ ಒಂದು ಉದಾಹರಣೆಯಾಗಿದೆ. ಬಂಡಾಯ ಭುಗಿಲೆದ್ದಾಗ ಅಲಿ ಮುಸಲಿಯಾರ್ ಕಟ್ಟಾ ಗಾಂಧಿವಾದಿ ಮತ್ತು ಕಾಂಗ್ರೆಸ್ ಮತ್ತು ಖಿಲಾಫತ್ ಬೆಂಬಲಿಗರಾಗಿದ್ದರು.
ಬಂಡಾಯದ ದಿನವಹಿ ವಿವರಣೆಯನ್ನು ಇಲ್ಲಿ ಒದಗಿಸುವುದು ಅವಶ್ಯವಿಲ್ಲ. ಆಗಸ್ಟ್‌ನಲ್ಲಿ ಬಂಡಾಯ ಆರಂಭವಾಯಿತು, ಖಿಲಾಫತ್ ಕಾರ್ಯಕರ್ತನೊಬ್ಬನನ್ನು ಭೂಮಾಲಿಕರಲ್ಲಿ ಒಬ್ಬನಾದ ನೀಲಂಬೂರ್ ರಾಜ ಇಟ್ಟುಕೊಂಡಿದ್ದ ಖಡ್ಗವನ್ನು ಕಳ್ಳತನ ಮಾಡಿದ ಸುಳ್ಳು ಆರೋಪದ ಮೇಲೆ ಬಂಧಿಸಲಾಯಿತು. ಅಲಿ ಮುಸಲಿಯಾರನ್ನು ಬಂಧಿಸುವ ಪ್ರಯತ್ನದಲ್ಲಿ ಪೊಲೀಸರು ಮಸೀದಿಯ ಮೇಲೆ ದಾಳಿ ನಡೆಸಿದ್ದಾರೆ ಎಂಬ ವದಂತಿಗಳು ಹರಡಿದಾಗ ದಂಗೆಯು ಹತ್ತಿರದ ತಿರುರಂಗಡಿಗೂ ಹರಡಿತು. ಪೋಲೀಸರು ಹತ್ತಿರದ ಎಲ್ಲಾ ಗ್ರಾಮಗಳಿಂದ ಬೃಹತ್ ಜನಸಮೂಹವನ್ನು ಎದುರಿಸಬೇಕಾಯಿತು, ಅವು ಪೋಲೀಸರ ಗುಂಡಿಗೂ ಹೆದರಲಿಲ್ಲ, ಚದುರಿಹೋಗಲಿಲ್ಲ. ಪೂಕ್ಕೊತ್ತೂರು ಮತ್ತು ತಿರುರಂಗಡಿಗಳಲ್ಲಿನ ‘ಕದನ’ಗಳ ಸುದ್ದಿ ದಕ್ಷಿಣ ಮಲಬಾರ್‌ನಾದ್ಯಂತ ಹರಡಿತು ಮತ್ತು ಶೀಘ್ರದಲ್ಲೇ ಮಲಪ್ಪುರಂ, ಪೆರಿಂತಾಲ್ಮಣ್ಣ, ಪಂಡಿಕ್ಕಾಡ್ ಮತ್ತು ಇತರ ಪ್ರದೇಶಗಳಲ್ಲಿ ದಂಗೆಗಳು ಆರಂಭವಾದವು. ವರಿಯಂಕುನಾಥ ಕುಂಜಹಮ್ಮದ್ ಹಾಜಿ, ಚೆಂಬ್ರಶೇರಿ ತಂಗಲ್, ಸೀತಿಕ್ಕೋಯ ತಂಗಲ್, ಕುಂಜಿಕಾದರ್ ವಿವಿಧ ಹಂತಗಳಲ್ಲಿ ಬಂಡಾಯದ ನಾಯಕರಾದರು. ರಸ್ತೆಗಳಲ್ಲಿ ತಡೆಒಡ್ಡಲಾಯಿತು, ದೂರವಾಣಿ ಸಂಪರ್ಕ ಕಡಿತಗೊಳಿಸಲಾಯಿತು, ಮತ್ತು ತಿರುರಂಗಡಿಯಲ್ಲಿದ್ದ ಅಕೌಂಟ್ಸ್ ಕಚೇರಿಗೆ ಬೆಂಕಿ ಹಚ್ಚಲಾಯಿತು. ಬ್ರಿಟಿಷ್ ಆಡಳಿತವು ಮಾರ್ಷಲ್ ಲಾ ಅನ್ನು ಹೇರಿತು, ಕಾಂಗ್ರೆಸ್ ಮತ್ತು ಖಿಲಾಫತ್ ಕಾರ್ಯಕರ್ತರು ಸೇರಿದಂತೆ ಎಲ್ಲ ಹೊರಗಿನವರಿಗೆ ಎರನಾಡ್ ತಾಲ್ಲೂಕ ಪ್ರವೇಶವನ್ನು ನಿಷೇಧಿಸಲಾಯಿತು. ಬಂಡಾಯಗಾರರು ಪ್ರತ್ಯೇಕ ಪ್ರದೇಶಗಳನ್ನು ಖಿಲಾಫತ್ ಎಂದು ಘೋಷಿಸುವ ಮೂಲಕ ಪ್ರತಿಕ್ರಿಯಿಸಿದರು, ಪ್ರತಿ ಖಿಲಾಫತ್ ಅನ್ನು ಒಬ್ಬ ಖಿಲಾಫತ್ ನಾಯಕನ ಉಸ್ತುವಾರಿಗೆ ಒಳಪಡಿಸಲಾಯಿತು. ಬ್ರಿಟಿಶರು ವಿವಿಧ ಭಾಗಗಳಿಂದ ಮಿಲಿಟರಿ ಪಡೆಗಳನ್ನು ಕರೆತಂದರು ಮತ್ತು ಸುದೀರ್ಘ ಹೋರಾಟದ ನಂತರ, ಬಂಡಾಯವನ್ನು ಹತ್ತಿಕ್ಕಲಾಯಿತು. ಅಲಿ ಮುಸಲಿಯಾರ್ ಮತ್ತು ವರಿಯಂಕುನ್ನತ್ ಕುಂಜಹಮ್ಮದ್ ಹಾಜಿ ಸೇರಿದಂತೆ ಎಲ್ಲ ಖಿಲಾಫತ್ ನಾಯಕರನ್ನು ಗಲ್ಲಿಗೇರಿಸಲಾಯಿತು. ಹಲವಾರು ಬಂಡುಕೋರರನ್ನು ಅಂಡಮಾನ್ ದ್ವೀಪಗಳಿಗೆ ಗಡೀಪಾರು ಮಾಡಲಾಯಿತು. ವಿವಿಧ ಪೊಲೀಸ್ ಕಾರ್ಯಾಚರಣೆಗಳಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆಯನ್ನು ಅಂದಾಜಿಸಲಾಗಿಲ್ಲ, ಮತ್ತು ಎಲ್ಲಾ ಸ್ಥಳೀಯ ದಾಖಲೆಗಳು ಬ್ರಿಟಿಷ್ ಅಧಿಕೃತ ವರದಿಗಳು ಈ ಪ್ರದೇಶದಲ್ಲಿ ಪೋಲಿಸ್ ಮತ್ತು ಮಿಲಿಟರಿ ಕ್ರಮದ ಪರಿಣಾಮವನ್ನು ಇಳಿಸಿ ತೋರಿಸಿವೆ ಎಂಬುದಕ್ಕೆ ಸಾಕ್ಷಿಯಿದೆ. ಒಂದು ಭೀಕರ ಘಟನೆಯಲ್ಲಿ, ಕರಿಂಪನಾಳ್ ಹಳ್ಳಿಯ ಸುಮಾರು 90 ಜನರನ್ನು ರೈಲು ವ್ಯಾಗನ್‌ಗೆ ತಳ್ಳಲಾಯಿತು ಮತ್ತು ಅವರನ್ನು ಕೋಯಿಂಬತ್ತೂರು ಸಮೀಪದ ಪೊದನೂರಿಗೆ ಕರೆದೊಯ್ಯಲಾಯಿತು. ಬಂಡಿಯನ್ನು ತೆರೆದಾಗ ಬಹುತೇಕ ಎಲ್ಲರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಕಂಡುಬಂದಿತು. ಉಳಿದವರು ಶೀಘ್ರದಲ್ಲೇ ಸಾವಪ್ಪಿದರು. ನವೆಂಬರ್ 1921 ರ ವೇಳೆಗೆ ಬಂಡಾಯವು ಹೊಸಕಿಹಾಕಲ್ಪಟ್ಟಿತು.
ಬಂಡಾಯ ಕುರಿತು ವಾಗ್ವಾದ:
ಬಂಡಾಯ ಪ್ರದೇಶಗಳ ಮಾಹಿತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ ಅವಧಿಯಲ್ಲಿ, ಹೊರಗಿನವರು ಅಧಿಕೃತ ಮೂಲಗಳು ಮತ್ತು ಪ್ರದೇಶದಿಂದ ಪಲಾಯನ ಮಾಡುವ ಜನರಿಂದ ಬರುವ ವದಂತಿಗಳನ್ನೇ. ಅವಲಂಬಿಸಬೇಕಾಗಿತ್ತು. ಬ್ರಿಟಿಷ್ ಆಡಳಿತದ ಅಧಿಕಾರಿಗಳಾದ ಇ ಎಫ್ ಥಾಮಸ್ ಮತ್ತು ಟೊಟೆನ್ಹ್ಯಾಮ್ ಬಂಡಾಯಕ್ಕೆ ಕೋಮುವಾದಿ ಬಣ್ಣವನ್ನು ನೀಡುವಂತೆ ಮಾಡಿದರು, ಅದನ್ನು ಬ್ರಿಟಿಷರು ಮತ್ತು ಹಿಂದೂಗಳ ವಿರುದ್ಧ ಮುಸ್ಲಿಂ ಧಾರ್ಮಿಕ ದಂಗೆಯಾಗಿ, ಪ್ರಸ್ತುತಪಡಿಸಿದರು. ಹಿಂಸಾಚಾರ ಮತ್ತು ಭೂಮಾಲೀಕರ ಮನೆಗಳ ಲೂಟಿಯ ಘಟನೆಗಳನ್ನು, ವಿಶೇಷವಾಗಿ ದಂಗೆಯ ಅಂತ್ಯದ ಸಮಯದಲ್ಲಿ ಅವರ ವಾದಗಳಿಗೆ ಸಾಕ್ಷಿಯಾಗಿ ಪ್ರಸ್ತುತಪಡಿಸಲಾಯಿತು. ಬಂಡಾಯದ ಕೇಂದ್ರಗಳಲ್ಲಿ ಒಂದಾದ ಮಂಜೇರಿ ಮೂಲದ ಕೆ ಮಾಧವನ್ ನಾಯರ್ ನೇತೃತ್ವದ ಕಾಂಗ್ರೆಸ್ ನಾಯಕರು ಬಂಡಾಯವನ್ನು ರಾಷ್ಟ್ರೀಯವಾದಿ ಎಂದು ಪರಿಗಣಿಸಿದರು, ಆದರೆ ಅವರು ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಾಗಿದ್ದರು ಏಕೆಂದರೆ ಅವರಲ್ಲಿ ಹೆಚ್ಚಿನವರು ಬಂಡಾಯವನ್ನು ಹಿಂದುಗಳ ವಿರುದ್ಧವಾಗಿ ಪರಿಗಣಿಸಿದರು. 1934ರ ಸಮಯದಲ್ಲಿ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಸೌಮ್ಯೇಂದ್ರನಾಥ ಟಾಗೋರ್ ಅವರು ಬಂಡಾಯವನ್ನು ರೈತ ಬಂಡಾಯವೆಂದು ಪರಿಗಣಿಸಿದವರಲ್ಲಿ ಮೊದಲಿಗರು.
1946 ರ ಸಮಯದಲ್ಲಿ, ದಂಗೆಯ 25 ನೇ ವಾರ್ಷಿಕೋತ್ಸವದಂದು, ಕಮ್ಯುನಿಸ್ಟ್ ಪಕ್ಷವು ಇಎಂಎಸ್ ನಂಬೂದ್ರಿಪಾದ್ ಅವರು ರಚಿಸಿದ ಒಂದು ದಸ್ತಾವೇಜನ್ನು ಹೊರತಂದಿತು, ಇದನ್ನು ‘ಆಹ್ವಾನ ಮತ್ತು ಎಚ್ಚರಿಕೆ’ ಎಂದು ಹೆಸರಿಸಲಾಗಿತ್ತು. ಈ ದಸ್ತಾವೇಜು ಬಂಡಾಯ ನಡೆದ ಐತಿಹಾಸಿಕ ಸನ್ನಿವೇಶಗಳನ್ನು ವಿಶ್ಲೇಷಿಸಿತು, ಇದರಲ್ಲಿ ಎರನಾಡಿನ ಮಾಪ್ಪಿಳ ರೈತರು ಭೂಮಾಲೀಕರು ಮತ್ತು ಬ್ರಿಟಿಷ್ ವಸಾಹತುಶಾಹಿಗಳಿಂದ ದಮನಕ್ಕೊಳಗಾದವರು, ಅವರಿಗೆ ಮತ್ತು ದಬ್ಬಾಳಿಕೆಗಾರರ ವಿರುದ್ಧ ದಂಗೆ ಏಳುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಖಿಲಾಫತ್ ಮತ್ತು ರಾಷ್ಟ್ರೀಯ ಚಳುವಳಿಯು ನೀಡಿದ ಪ್ರಚೋದನೆಯು ಅವರಿಗೆ ಬಂಡಾಯವನ್ನು ಸಂಘಟಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿತು. ಆದಾಗ್ಯೂ, ಖಿಲಾಫತ್ ನಾಯಕರ ಬಂಧನ ಮತ್ತು ಮರಣದಂಡನೆಯೊಂದಿಗೆ, ಚಳುವಳಿ ಚದುರಿಹೋಗಲು ಪ್ರಾರಂಭಿಸಿತು, ಅಗತ್ಯ ಕಣ್ಣೋಟ ಮತ್ತು ಸಂಪನ್ಮೂಲಗಳಿದ್ದ ನಾಯಕರ ಕೊರತೆಯಿಂದಾಗಿ ಬಂಡಾಯಗಾರರ ನಡುವೆ ನುಸುಳಿದ ಅರಾಜಕತಾವಾದಿ ಕೋಮುವಾದಿಗಳು ಹಿಂದುಗಳ ವಿರುದ್ಧ ದಂಗೆಯನ್ನು ತಿರುಗಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಭೂಮಾಲೀಕರು ಮತ್ತು ಬ್ರಿಟಿಷ್ ರಾಜ್ಯಭಾರದ ವಿರುದ್ಧ ನಡೆದ ಒಂದು ದೊಡ್ಡ ಬಂಡಾಯವು ಕೊನೆಗೆ ಕೋಮು ಹಿಂಸಾಚಾರಕ್ಕೆ ಇಳಿಯಿತು. ದಸ್ತಾವೇಜು ಈ ಬಂಡಾಯವನ್ನು ರೈತ ಹೋರಾಟಗಳನ್ನು ನಡೆಸುವುದು ಹೇಗೆ ಎಂಬುದಕ್ಕೆ ಒಂದು ಪ್ರಕರಣದ ಅಧ್ಯಯನ(ಕೇಸ್ ಸ್ಟಡಿ) ಎಂದು ಹೇಳಿತು. ಅಲ್ಲದೆ ಇಂತಹ ಹೋರಾಟವನ್ನು ಯಾವುದೇ ರೀತಿಯ ನಿಯಂತ್ರಣ ಮತ್ತು ದಬ್ಬಾಳಿಕೆಯಿಂದ ಮಾತ್ರವಲ್ಲ, ವಿಭಜಕ ಪ್ರಯತ್ನಗಳಿಂದಲೂ ಮುಕ್ತವಾಗಿಡಲು ರಾಜಕೀಯವಾಗಿ ಸುಸಂಗತವಾದ ಸಂಘಟನೆ ಮತ್ತು ನಾಯಕತ್ವದ ಅವಶ್ಯಕತೆ ಇದೆಯೆಂಬುದನ್ನು ಇದು ತೋರಿಸುತ್ತದೆ ಎಂದೂ ಹೇಳಿತು.
ಇಂದಿನ ವಿವಾದ:
ಮಲಬಾರ್ ದಂಗೆಯ ನಂತರದಲ್ಲಿ ಕಾನ್ರಾಡ್ ವುಡ್, ರಾಬರ್ಟ್ ಎಲ್ ಹಾರ್ಡ್ ಗ್ರೇವ್ ಮತ್ತು ಕೆ ಎನ್ ಪಣಿಕ್ಕರ್ ಅವರಂತಹ ವಿದ್ವಾಂಸರಿಂದ ನಡೆದ ಸಂಶೋಧನೆಯು ಮಲಬಾರ್ ದಂಗೆಯ ಕುರಿತು ಕಮ್ಯುನಿಸ್ಟ್ ಪಕ್ಷವು ತೆಗೆದುಕೊಂಡ ನಿಲುವನ್ನು ಸಮರ್ಥಿಸಿದೆ. ಆದಾಗ್ಯೂ, ಸ್ಟೀಫನ್ ಡೇಲ್ ನಂತಹ ಕೆಲವು ವಿದ್ವಾಂಸರು ಬಂಡಾಯವನ್ನು ಪ್ರಚೋದಿಸುವಲ್ಲಿ ಮಾಪ್ಪಿಳ ಮುಸ್ಲಿಂ ಪ್ರಜ್ಞೆ ಪಾತ್ರ ವಹಿಸಿತು ಎಂದು ಒತ್ತಿ ಹೇಳಿದ್ದಾರೆ. ಇಸ್ಲಾಮ್‌ವಾದಿ ನಿಲುವಿಗೆ ಸಹಾನುಭೂತಿ ಹೊಂದಿರುವ ಕೆಲವು ವಿದ್ವಾಂಸರು ಕೂಡ ಬಂಡಾಯವನ್ನು ಹುಟ್ಟುಹಾಕುವ ರಾಜಕೀಯ ಪ್ರಜ್ಞೆಯನ್ನು ರೂಪಿಸಿದ ‘ಮುಸ್ಲಿಂ ಮನಃಸ್ಥಿತಿಯ’ ಬಗ್ಗೆ ಮಾತನಾಡಿದ್ದಾರೆ. ಆರೆಸ್ಸೆಸ್ ಅಂತಹ ವಾದಗಳನ್ನು ತಮ್ಮ ಇಸ್ಲಾಮಿಕ್ ವಿರೋಧಿ ಪ್ರಚಾರವನ್ನು ಹೆಚ್ಚಿಸಲು ಒಂದು ಅವಕಾಶವಾಗಿ ಬಳಸಿಕೊಳ್ಳುತ್ತಿದೆ. ಈ ಮೂಲಕ ಈ ಬಂಡಾಯ ಭಾರತದಲ್ಲಿ ಇಸ್ಲಾಮಿಕ್ ಪ್ರಭುತ್ವವನ್ನು ಸ್ಥಾಪಿಸುವ ಪ್ರಯತ್ನ ಎಂಬ ತಮ್ಮ ಹಳೆಯ ವಾದಕ್ಕೆ ಮತ್ತೆ ಜೀವ ತುಂಬುತ್ತಿದ್ದಾರೆ. ಮಲಬಾರ್ ಬಂಡಾಯವನ್ನು ಅವರು ‘ಹಿಂದೂ ಧರ್ಮ ಅಪಾಯದಲ್ಲಿದೆ’ ಎಂಬ ಕೂಗನ್ನು ಹಬ್ಬಿಸಲು ಮತ್ತು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಹಿಂದೂ ಸಂರಕ್ಷಣಾ ಸಮಿತಿಗಳನ್ನು ರಚಿಸಲು ಒಂದು ನೆಪವಾಗಿ ಬಳಸಿದರು ಎನ್ನುವುದನ್ನು ಮರೆಯಬಾರದು. ಸ್ವತಃ ಆರ್‌ಎಸ್‌ಎಸ್ ಇಂತಹ ಒಂದು ಪ್ರಚೋದನೆಯ ಉತ್ಪನ್ನವಾಗಿದೆ. ಬಂಡಾಯದ ಸಮಯದಲ್ಲಿ ಮುಗಿಸಿಬಿಟ್ಟ ಮತ್ತು ಮರಣದಂಡನೆಗೆ ಗುರಿಯಾದ ಮಲಬಾರ್ ಬಂಡಾಯಗಾರರ ಹೆಸರುಗಳನ್ನು ಅಳಿಸಿಹಾಕುವ ಐಸಿಎಚ್‌ಆರ್ ನ ಪ್ರಯತ್ನ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧದ ಹೋರಾಟದಲ್ಲಿ ಬಲಿದಾನ ನೀಡಿದವರ ಹೆಸರುಗಳನ್ನು ಅಳಿಸಿಹಾಕಲು ನಡಸುತ್ತಿರುವ ಒಂದು ಹೀನ ಪ್ರಯತ್ನವಾಗಿದೆ.
ಐಸಿಎಚ್‌ಆರ್ ನ ಈ ನಡೆಯನ್ನು ವೈಜ್ಞಾನಿಕ ಇತಿಹಾಸ ಲೇಖನ ಶಾಸ್ತ್ರದ ಮೇಲೆ ಆರ್‌ಎಸ್‌ಎಸ್ ಆಕ್ರಮಣದ ಮುಂದುವರಿಕೆಯಾಗಿ ನೋಡಬೇಕು. ಆರ್‌ಎಸ್‌ಎಸ್ ತನ್ನ ಇತಿಹಾಸವನ್ನು ಹಸಿಸುಳ್ಳುಗಳು ಮತ್ತು ಅರ್ಧ ಸತ್ಯಗಳ ಮೇಲೆ ಕಟ್ಟಿದ್ದು, ಅದನ್ನು ಯಾವಾಗಲೂ ಕಲ್ಪಿತ, ಕಾಲ್ಪನಿಕ ಮತ್ತು ಕಪಟದಿಂದ ಅಲಂಕರಿಸಿದೆ, ಇದನ್ನು ಅವರು ತಮ್ಮ ‘ಸಾಂಸ್ಕೃತಿಕ ರಾಷ್ಟ್ರೀಯತೆ’ ಎಂದು ಕರೆಯುತ್ತಾರೆ. ಅವರು ಈ ಮೋಸದ ಇತಿಹಾಸವನ್ನು ನಮ್ಮದು ಒಂದು ಹಿಂದೂರಾಷ್ಟ್ರ ಎಂಬ ರಾಷ್ಟ್ರದ ಬಗ್ಗೆ ತಮ್ಮದೇ ಆದ ಪರಿಕಲ್ಪನೆಗಳನ್ನು ಹುಟ್ಟುಹಾಕಲು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲು ಹಾಗೂ ಆರ್‌ಎಸ್‌ಎಸ್ ವಿರೋಧಿಗಳನ್ನು ರಾಷ್ಟ್ರವಿರೋಧಿಗಳು ಎಂದು ಟೀಕಿಸಲು ಬಳಸುತ್ತಿದ್ದಾರೆ. ಪ್ರಸ್ತುತ ಐಸಿಎಚ್‌ಆರ್ ನಂತಹ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಮುಸ್ಲಿಂ ವಿರೋಧಿ ಪ್ರಚಾರಕ್ಕೆ ಮೇವು ಒದಗಿಸುವಂತೆ ಮಾರ್ಪಡಿಸಲಾಗಿದೆ. ಅಲಿ ಮುಸಲಿಯಾರ್ ಮತ್ತು ವರಿಯಂಕುನ್ನತ್ ಕುಂಜಹಮ್ಮದ್ ಹಾಜಿಯಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಹುತಾತ್ಮರ ಪಟ್ಟಿಯಿಂದ ತೆಗೆದುಹಾಕುವ ಮೂಲಕ, ಅದು ಆರ್‌ಎಸ್‌ಎಸ್‌ಗೆ ಈ ಬಂಡಾಯಗಾರರನ್ನು ಜಿಹಾದಿಗಳನ್ನಾಗಿ ಮಾಡಲು ಮತ್ತು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧದ ಪ್ರಬಲ ಚಳುವಳಿಗಳಲ್ಲಿ ಒಂದನ್ನು ಬ್ರಿಟಿಶ್ ಸಾಮ್ರಾಜ್ಯಶಾಹಿಗಳು ‘ಜಂಗಲ್ ಮಾಪಿಳ್ಳ’ ಎಂದು ಕರೆದ ಒಂದು ಕ್ರಿಮಿನಲ್ ಸಮುದಾಯ ನಡೆಸಿರುವ ವ್ಯಭಿಚಾರದ, ಅಧಃಪತನದ ದುಷ್ಕೃತ್ಯ ಎಂದು ನಿಂದಿಸಲು ಅವಕಾಶವನ್ನು ಒದಗಿಸುತ್ತಿದೆ.
ವೈಜ್ಞಾನಿಕ ತನಿಖೆಯ ಉದ್ದೇಶವು ಸತ್ಯವನ್ನು ಗ್ರಹಿಸುವುದು, ಸುಳ್ಳು ಮತ್ತು ವಿರೂಪಗಳ ಮೋಡದಿಂದ ಸತ್ಯವನ್ನು ಅನಾವರಣಗೊಳಿಸುವುದು. ಭಾರತೀಯ ಜನರು ಯಾವಾಗಲೂ ಬಹು-ಪ್ರದೇಶ, ಬಹುಸಂಸ್ಕೃತಿ ಮತ್ತು ಬಹು-ಧರ್ಮೀಯರು ಮತ್ತು ತಮ್ಮ ರಾಷ್ಟ್ರದ ಪರಿಕಲ್ಪನೆಯನ್ನು ವಿವಿಧತೆಯಲ್ಲಿ ಏಕತೆಯ ಅಡಿಪಾಯದ ಮೇಲೆ ರೂಪಿಸಿಕೊಂಡಿದ್ದಾರೆ. ಮಲಬಾರ್ ಬಂಡಾಯವು ನಡೆದದ್ದು ಸ್ಪಷ್ಟವಾದ ರಾಜಕೀಯ ದೃಷ್ಟಿಕೋನ ಮತ್ತು ಸಂಘಟನಾತ್ಮಕ ರೂಪಗಳ ಆಧಾರದ ಮೇಲೆ ಸಂಘಟಿತ ರೈತ ಹೋರಾಟಗಳು ಆಗಷ್ಟೇ ಮೂಡಿ ಬರುತ್ತಿದ್ದ ಮತ್ತು ಅಖಿಲ ಭಾರತ ಕಿಸಾನ್ ಸಭಾದಂತಹ ಪ್ರಮುಖ ರೈತ ಸಂಘಟನೆಗಳು ಇನ್ನೂ ಹುಟ್ಟಿರದಿದ್ದ ಕಾಲಘಟ್ಟದಲ್ಲಿ. ಆದ್ದರಿಂದ ಬಂಡಾಯಗಾರರು ತಮ್ಮ ಲಭ್ಯವಿದ್ದ ಸಂಪನ್ಮೂಲಗಳು ಮತ್ತು ತಮ್ಮ ಸಂಪ್ರದಾಯಗಳ ನೆಲೆಯಲ್ಲೇ ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಿತ್ತು. ಈ ಸಂಪ್ರದಾಯಗಳಲ್ಲಿ ಧರ್ಮ, ಆಧ್ಯಾತ್ಮಿಕತೆ, ಜಾನಪದ ವೀರರ ಪರಿಕಲ್ಪನೆಗಳು ಮತ್ತು ಪುರಾಣಗಳೂ ಸೇರಿರಬಹುದು. ಬಂಡಾಯಗಾರರ ಕರೆಯಾದ ಖಿಲಾಫತ್, ಖಲೀಫಾದ ಅರೆ-ಧಾರ್ಮಿಕ ಅಧಿಕಾರವನ್ನು ಪುನಃಸ್ಥಾಪಿಸುವ ಉದ್ದೇಶ ಹೊಂದಿದ್ದರೂ, ಅದರ ಬುನಾದಿ ಇದ್ದದ್ದು ಆಗ ಅಸ್ತಿತ್ವದಲ್ಲಿದ್ದ ರಾಜಕೀಯ ಪರಿಸ್ಥಿತಿಗಳಲ್ಲಿ ಎಂಬುದನ್ನು ನೆನಪಿನಲ್ಲಿಡಬೇಕು. ಅನೇಕ ಐತಿಹಾಸಿಕ ಅಧ್ಯಯನಗಳು ಹೋರಾಟಗಳು ರೂಪುಗೊಳ್ಳುವಲ್ಲಿ ಇಂತಹ ಸ್ವರೂಪಗಳ ಮಹತ್ವವನ್ನು ಪ್ರದರ್ಶಿಸಿವೆ. ಆದರೆ ಇದು ಅಂತಹ ಹೋರಾಟಗಳನ್ನು ಮಾಡಲು ಕೊಡುಗೆ ನೀಡಿದ ನೈಜ, ವಸ್ತುನಿಷ್ಠ ಪರಿಸ್ಥಿತಿಗಳನ್ನು ಗಮನಿಸುವುದರಿಂದ ನಮ್ಮನ್ನು ದಾರಿ ತಪ್ಪಿಸಬಾರದು ಮತ್ತು ಸ್ವತಂತ್ರ ಭಾರತಕ್ಕಾಗಿ ರಾಷ್ಟ್ರೀಯ ಹೋರಾಟದ ವಾಸ್ತವತೆಯನ್ನು ಕಟ್ಟುವಲ್ಲಿ ಅವುಗಳ ಮಹತ್ವವನ್ನು ಒತ್ತಿ ಹೇಳದಂತೆ ನಮ್ಮನ್ನು ತಡೆಯಬಾರದು.
ಮಲಬಾರ್ ಬಂಡಾಯದ ಈ ನಮ್ಮ ವಿಶ್ಲೇಷಣೆಯು ಈ ಹೋರಾಟವನ್ನು ರಾಷ್ಟ್ರೀಯ ಚಳವಳಿಯ ಕಕ್ಷೆಯೊಳಗೆ ದೃಡವಾಗಿ ಇರಿಸುತ್ತದೆ. ತಮ್ಮ ಪ್ರಾಣವನ್ನು ಅರ್ಪಿಸಿದ ಆ ಜನರು ಖಂಡಿತವಾಗಿ ಬ್ರಿಟಿಷ್ ದಬ್ಬಾಳಿಕೆಯಿಂದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಹುತಾತ್ಮರು, ಮತ್ತು ಅವರನ್ನು ಹಾಗೆಂದೇ ನೆನಪಿಸಿಕೊಳ್ಳಬೇಕು. ಆದಾಗ್ಯೂ, ಇದು, ಹೋರಾಟಕ್ಕೆ ಕಾರಣವಾಗುವ ಪರಿಸ್ಥಿತಿಗಳು ಅದರ ಅವನತಿ ಮತ್ತು ವಿನಾಶಕ್ಕೆ ಕಾರಣವಾದ ಅಂಶಗಳನ್ನೂ ಒಳಗೊಂಡಿರುತ್ತವೆ ಎಂದು 1946 ರಲ್ಲಿ ನೀಡಲಾದ ಎಚ್ಚರಿಕೆಯನ್ನು ಕಡೆಗಣಿಸುವಂತೆ ನಮ್ಮನ್ನು ತಡೆಯಬಾರದು. ಇದನ್ನು ಇಂದಿಗೂ ರಾಜಕೀಯ ಚಳುವಳಿ ನೆನಪಿಟ್ಟುಕೊಳ್ಳಬೇಕಾಗಿದೆ.
ಅನು: ಸಿ.ಆರ್.ಶಾನಭಾಗ