- ಶಾಲೆಗೆ ಆಗಮಿಸಿದ 1 ರಿಂದ 9ನೇ ತರಗತಿಯ ಮಕ್ಕಳು
- ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ತರಗತಿ
- ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ
- ಮಕ್ಕಳಿಗೆ ಸೈಕಲ್ ವಿತರಣೆ ಇಲ್ಲ
ಬೆಂಗಳೂರು: ಇಂದಿನಿಂದ(16 ಮೇ) 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಆರಂಭ. ಮಕ್ಕಳಿಗೆ ಸಿಹಿಯನ್ನು ಹಂಚುವ ಮೂಲಕ ಶಾಲೆಗೆ ಆಹ್ವಾನ ನೀಡಿದ ಶಿಕ್ಷಣ ಇಲಾಖೆ. ಬೇಸಿಗೆ ರಜೆಯ ಆಟದಲ್ಲೇ ಮೈಮರೆತಿದ್ದ ಮಕ್ಕಳು ಇಂದಿನಿಂದ ಮತ್ತೆ ಪಾಠದೊಳಕ್ಕೆ ಈಜಾಡಲು ಹೊರಟಿದ್ದಾರೆ. ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿವೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಶೈಕ್ಷಣಿಕ ತರಗತಿಗಳು ಮೊಟಕುಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಬೇಸಿಗೆ ರಜೆಯನ್ನು 15 ದಿನ ಮೊಟಕುಗೊಳಿಸಲಾಗಿದೆ. ಪ್ರತಿವರ್ಷ ಜೂನ್ 1ರಂದು ಪ್ರಾರಂವಾಗುವ ಶೈಕ್ಷಣಿಕ ತರಗತಿಗಳು ಇಂದಿನಿಂದಲೇ ಆರಂಭವಾಗಿವೆ.
ಮೊದಲ ದಿನ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಅದ್ಧೂರಿ ಸ್ವಾಗತ ಕೋರಿದರು. ಶಾಲೆಗೆ ಬರುತ್ತಿದ್ದಂತೆಯೇ ಶಿಕ್ಷಕ, ಶಿಕ್ಷಕಿಯರು ಮಕ್ಕಳನ್ನು ಮೈದುಂಬಿ ಅಪ್ಪಿಕೊಂಡು ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ದೇಹದ ತಾಪಮಾನವನ್ನು ಪರೀಕ್ಷಿಸಿ ಶಾಲೆಯೊಳಗೆ ಬರಮಾಡಿಕೊಂಡಿದ್ದಾರೆ.
ಭಾನುವಾರ(ಮೇ 15) ರಜಾ ದಿನವಾಗಿದ್ದರೂ ಸಹ ಶಿಕ್ಷಕರು ಶಾಲೆಗಳಿಗೆ ಆಗಮಿಸಿ ಎಸ್‌ಡಿಎಂಸಿ ಸದಸ್ಯರೂ ಹಾಗೂ ಹಳೇ ವಿದ್ಯಾರ್ಥಿಗಳು, ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ತರಗತಿಗಳನ್ನು ಸಜ್ಜುಗೊಳಿಸಿದ್ದಾರೆ.
ಶ್ರಮದಾನ ಕಾರ್ಯಕ್ರಮದಡಿ ಪ್ರತಿಯೊಂದು ಕೊಠಡಿ, ಬಿಸಿಯೂಟದ ಅಡುಗೆ ಮನೆ, ಶಾಲಾ ಆವರಣ ಸ್ವಚ್ಛತಾ ಕಾರ್ಯ ನಂತರ ಬಾಳೆಕಂದು, ಮಾವಿನ ಪತ್ರೆ ಕಟ್ಟಿ, ರಂಗೋಲಿ ಬಿಡಿಸಿ ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗರಿಸಲಾಗಿದ್ದರು.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳ ಸಂಭ್ರಮ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಸಿಹಿ ನೀಡಿ ಬರಮಾಡಿಕೊಳ್ಳಲಾಗಿದೆ. ಶಾಲೆಗೆ ಬಂದ ಮಕ್ಕಳಿಗೆ ಮೊದಲ ದಿನವೇ ಪಠ್ಯ-ಪುಸ್ತಕ ವಿತರಣೆ ಮಾಡಿ, ಹಾಲು, ಬಿಸ್ಕಿಟ್ ನೀಡಿ ಮಕ್ಕಳಲ್ಲಿ ಉತ್ಸಾಹ ತುಂಬಿದ್ದಾರೆ. ಜಿಲ್ಲೆಯಲ್ಲಿ 975 ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 230 ಸರ್ಕಾರಿ ಪ್ರೌಢಶಾಲೆಗಳು ಇಂದಿನಿಂದ ಆರಂಭವಾಗಿವೆ.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ, ಕಲಬುರಗಿಯಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಶಾಲೆಯತ್ತ ಮಕ್ಕಳು ಮುಖ ಮಾಡಿಲ್ಲ ಎನ್ನಲಾಗಿದೆ. ಕೆಲವು ಕಡೆಗಳಲ್ಲಿ ಹೀಗಾಗಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಕರೆ ಮಾಡಿದ ಶಿಕ್ಷಕರು, ಶಾಲೆಗೆ ಕಳುಹಿಸಿಕೊಡಲು ತಿಳಿಸಿದ್ದಾರೆ.
ಇಂದಿನಿಂದಲೇ ಬಿಸಿಯೂಟ
ಮೊದಲ ದಿನವಾದ ಇಂದಿನಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಅಲ್ಲದೇ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೂ ಚಾಲನೆ ಸಿಗಲಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ನಿಗದಿತ ಅವಧಿಗೆ ಶಾಲೆಗಳು ಆರಂಭವಾಗದೆ, ಸಮರ್ಪಕ ರೀತಿಯಲ್ಲಿ ಭೌತಿಕ ತರಗತಿಗಳು ನಡೆಯದೆ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಹೀಗಾಗಿ ಕಲಿಕಾ ಕೊರತೆ ಸರಿದೂಗಿಸಲು 2022-23ನೇ ಶೈಕ್ಷಣಿಕ ಸಾಲನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ ಟಿ ನಗರದ ನಿವಾಸದಲ್ಲಿ ಶಾಲೆಯ ಆರಂಭದ ಕುರಿತು ಮಾತಾಡಿ, ಕೋವಿಡ್ ಸಾಂಕ್ರಮಿಕ ರೋಗದಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ಒದಗಿಸಲು ಸಾಧ್ಯವಾಗಲಿಲ್ಲ. ಎರಡು ವರ್ಷದ ಕಲಿಕಾ ನಷ್ಟವನ್ನು ತುಂಬುವ ಹೊಣೆಗಾರಿಕೆಯಿಂದಾಗಿ ಮುಂಚಿತವಾಗಿಯೇ ಶಾಲೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು.
ಒಳ್ಳೆಯ ವಾತಾವರಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಲೆಯಲ್ಲಿ ಕಲಿತಾಗ ಮಾತ್ರ ಮಕ್ಕಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದ ಎಲ್ಲ ಮಕ್ಕಳಿಗೂ ಶಾಲೆಗೆ ಸ್ವಾಗತ ಕೋರುತ್ತೇನೆ. ಪುಸ್ತಕ, ಬಟ್ಟೆ, ಸೈಕಲ್ ಬೇಕಾದ ಎಲ್ಲವನ್ನು ಕೊಡುವ ಕಾರ್ಯವನ್ನು ಮಾಡುತ್ತೇವೆಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಎಲ್ಲಾವನ್ನು ನೀಡಿ ಒಳ್ಳೆಯ ವಾತವಾರಣ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಶಾಲೆಯನ್ನು ನೈರ್ಮಲ್ಯತೆಯಿಂದ ಕಾಪಾಡಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. 1ರಿಂದ 9ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಿಂದಿನ ವರ್ಷದ ಪುಸ್ತಕಗಳನ್ನು ಮರು ಓದಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಉಚಿತ ಬಸ್ ಸೇವೆ
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಬಿಎಂಟಿಸಿ ಬಸ್ಸುಗಳಲ್ಲಿ ಶಾಲೆಗೆ ತೆರಳುತ್ತಾರೆ. ಹೀಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾಧ್ಯಮ ಪ್ರಕಟಣೆ ಹೊರಡಿಸಿ, ಬಿಎಂಟಿಸಿ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. 2021-22ರಲ್ಲಿ ಪಡೆದಿರುವ ಪಾಸ್ಗಳಿಗೆ ಜೂನ್ 30ರವರೆಗೆ ಮಾನ್ಯತೆ ಇರುತ್ತದೆ. ಮೇ 31ರವರೆಗೆ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುತ್ತದೆ. ಪ್ರವೇಶಾತಿ ರಶೀತಿ, ಐಡಿ ಕಾರ್ಡ್ ತೋರಿಸಿ ಮಕ್ಕಳು ಉಚಿತವಾಗಿ ಬಿಎಂಟಿಸಿ ಬಸ್ನಲ್ಲಿ ಓಡಾಡಬಹುದು ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.
ಇನ್ನು ಕೆಎಸ್ಆರ್ಟಿಸಿ ಬಸ್ಗಳಲ್ಲಿ ವಿದ್ಯಾರ್ಥಿಗಳು ಇಂದಿನಿಂದ ಹಳೆ ಬಸ್ ಪಾಸ್ ತೋರಿಸಿ ಸಂಚಾರ ಮಾಡಬಹುದು.
ಈ ಬಾರಿಯೂ ಸೈಕಲ್ ಭಾಗ್ಯವಿಲ್ಲ
ಈ ಬಾರಿಯೂ ರಾಜ್ಯದ ಮಕ್ಕಳಿಗೆ ಸೈಕಲ್ ಭಾಗ್ಯ ಇಲ್ಲ. ಬಜೆಟ್‍ನಲ್ಲಿ ಅನುದಾನ ಮೀಸಲಿಡದ ಕಾರಣ 2022-23ನೇ ಸಾಲಿನ ಮಕ್ಕಳಿಗೆ ಸೈಕಲ್ ವಿತರಿಸುತ್ತಿಲ್ಲ. ಆರ್ಥಿಕ ಕೊರತೆಯ ನೆಪವೊಡ್ಡಿ ಸೈಕಲ್ ವಿತರಣೆ ಯೋಜನೆಗೆ ಸರ್ಕಾರ ಕ್ರಮಕೈಗೊಂಡಿಲ್ಲ.
ಮುಖ್ಯಮಂತ್ರಿ, ಸಚಿವರ, ಶಾಸಕರ ಸಂಬಳ, ಚರ್ಚೆ ಆಗದ ಅಧಿವೇಶನಕ್ಕೆ ಕೋಟಿ, ಕೋಟಿ ಖರ್ಚು ಮಾಡಿರುವ ಸರ್ಕಾರ, ಬಡ ವಿದ್ಯಾರ್ಥಿಗಳಿಗೆ ಸೈಕಲ್ ನೀಡಲು ಕುಂಟು ನೆಪವನ್ನು ಹೇಳುತ್ತಿದೆ.