ಬೆಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಾಯಂಮೇತರ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆರಂಭವಾಗಿದೆ.
ಸಂಘದ ಅಧ್ಯಕ್ಷ ಭಾರತೀಶ ಬ ಶೀಲವಂತರ ಮಾತನಾಡಿ, ಸಿಬ್ಬಂದಿಗಳಿಗೆ ಕಳೆದ 2014-15ರ ನಂತರ (ಕಳೆದ 7 ವರ್ಷಗಳಿಂದ) ಯಾವುದೇ ವೇತನ-ಭತ್ಯೆಗಳು ಹೆಚ್ಚಳವಾಗಿಲ್ಲ. ಹಾಲಿ ನೀಡುತ್ತಿರುವ ವೇತನವೂ ಸಹ ಕನಿಷ್ಟ ವೇತನಕ್ಕಿಂತಲೂ ಕಡಿಮೆ ಇದೆ. ಸಿಬ್ಬಂದಿಗಳಿಗೆ ಸೇವಾ ಭದ್ರತೆಯಾಗಲಿ, ಆರೋಗ್ಯ ಮತ್ತು ಕೋವಿಡ್ ವಿಮೆ ಸೌಲಭ್ಯವಾಗಲಿ ದೊರೆಯುತ್ತಿಲ್ಲ. ಹೊರಗುತ್ತಿಗೆ ಏಜೆನ್ಸಿಗಳ ಕಿರುಕುಳ, ಕೆಲಸದ ಅಪರಿಮಿತ ಒತ್ತಡ ಹಾಗೂ ಹೊರಗುತ್ತಿಗೆ ನೇಮಕಾತಿಯಿಂದ ಮಾನಸಿಕ ಯಾತನೆಗೆ ಸಿಬ್ಬಂದಿ ಒಳಗಾಗುತ್ತಿದ್ದಾರೆ. ಈಗಾಗಲೇ ಮೂರು ಬಾರಿ ಪ್ರತಿಭಟನೆ ಮಾಡಿದ್ದರೂ ಸಹ ಸಮಸ್ಯೆಗಳು ಪರಿಹಾರ ಕಾಣಲಿಲ್ಲ ಎಂದು ಪ್ರತಿಭಟನಾಕಾರರ ಆಗ್ರಹವಾಗಿದೆ ಎಂದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ ಖಾಯಂಮೇತರ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್. ವರಲಕ್ಷ್ಮಿ ಅವರು, ಸಮಗ್ರ ಮಕ್ಕಳ ರಕ್ಷಣಾ ಯೋಜನೆಯನ್ನು 2009 ರಿಂದ ದೇಶದಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆ ಮೂಲಕ ಪಾಲನೆ-ಪೋಷಣೆ, ರಕ್ಷಣೆ ಅವಶ್ಯಕತೆ ಇರುವ ಅನಾಥ, ನಿರ್ಗತಿಕ, ಹಿಂಸೆ ಮತ್ತು ಶೋಷಣೆಗೆ ಒಳಗಾಗಿರುವ ಮಕ್ಕಳಿಗೆ ಸಾಂಸ್ಥಿಕ ಸೇವೆ ಮತ್ತು ಅಸಾಂಸ್ಥಿಕ ಸೇವೆಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ ಒದಗಿಸಿ ಮಕ್ಕಳ ಉತ್ತಮ ಹಿತವನ್ನು ರಕ್ಷಿಸಲಾಗುತ್ತಿದೆ. ಜಿಲ್ಲೆಗಳಲ್ಲಿ ಮಕ್ಕಳ ಅತೀಸೂಕ್ಷ್ಮ ಸಮಸ್ಯೆಗಳಾದ ಬಾಲ್ಯವಿವಾಹ ತಡೆಯುವುದು, ಬಾಲಕಾರ್ಮಿಕತೆ ತಡೆ, ಅನಾಥ, ಪರಿತ್ಯಕ್ತರಾಗುವ, ಶೋಷಣೆ, ಲೈಂಗಿಕ ದೌರ್ಜನ್ಯ, ವಿವಿಧ ರೀತಿಯ ಕಿರುಕುಳಗಳಿಗೆ ಬಲಿಯಾಗುತ್ತಿರುವ ಮತ್ತು ಸಂಕಷ್ಟದಲ್ಲಿರುವ ಮಕ್ಕಳನ್ನು ಸಂರಕ್ಷಿಸಿ ಪುನರ್‌ವಸತಿ ಕಲ್ಪಿಸಲು ಕ್ಷೇತ್ರ ಮಟ್ಟದಲ್ಲಿ ಸಮಯದ ಪರಿವಿಲ್ಲದೆ ಹೊರಗುತ್ತಿಗೆಯಾಧಾರದಲ್ಲಿ ದುಡಿಯುತ್ತಿದ್ದಾರೆ. ಇಷ್ಟೊಂದು ಗಂಭೀರ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಮಕ್ಕಳ ರಕ್ಷಣಾ ಕಾರ್ಯಕ್ರಮಗಳನ್ನು ಜಾರಿಮಾಡುವ ಸಂಸ್ಥೆಗಳ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಿಗೆ ಮಾತ್ರ ರಕ್ಷಣೆ ಇಲ್ಲವಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಕಾಂತರಾಜು ಮಾತನಾಡಿ, ಸಿಬ್ಬಂದಿಗಳು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಬಾಲನ್ಯಾಯ ಕಾಯ್ದೆಯಡಿ ಶಾಸನ ಬದ್ಧ ಖಾಯಂಸ್ವರೂಪದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕತೆಯಿಂದಾಗಿ ವೈಯಕ್ತಿಕ ಜೀವದ ಹಂಗನ್ನು ಲೆಕ್ಕಿಸದೆ ಮಕ್ಕಳ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ರಕ್ಷಣಾ ಕಾರ್ಯದಲ್ಲಿ ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ 2000ಕ್ಕೂ ಹೆಚ್ಚು ಅನಾಥ/ ಬಾಧಿತ ಸಂಕಷ್ಟದಲ್ಲಿರುವ ಮಕ್ಕಳನ್ನು ಗುರುತಿಸಿ ಸರ್ಕಾರದ ಯೋಜನೆಗೆ ಒಳಪಡಿಸಿದ್ದಾರೆ. ಹಾಗಾಗಿ ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ ಎಂದರು.