ವಿಜಯಪುರ :ಸಂಕ್ರಾಂತಿಯ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಪಕ್ಷದಲ್ಲಿನ ಬದಲಾವಣೆಯ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ ಸಚಿವ ಸಂಪುಟದಲ್ಲಿ ಬದಲಾವಣೆಯಾಗಲಿದೆ, ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ. ವಿಧಾನ ಸಭೆ ಚುನಾವಣೆಗೆ ಪಕ್ಷವನ್ನ ಬಲ ಪಡೆಸಲು ಬದಲಾವಣೆಯಾಗಲಿದೆ. ಪ್ರಧಾನಿಗಳ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ ಎಂದರು.
ಕಚೇರಿಗೆ ಹೋಗದ ಸಚಿವರು ಯಾರು? ಯಾರು ಪಕ್ಷವನ್ನು ಬಲಪಡಿಸಲು ಶ್ರಮ ಹಾಕುತ್ತಿದ್ದಾರೆ ಎಂಬುದು ಸೇರಿದಂತೆ ಎಲ್ಲ ಬೆಳವಣಿಗೆಗಳನ್ನು ಪ್ರಧಾನಿ ಗಮನಿಸುತ್ತಿದ್ದಾರೆ. ಸಂಕ್ರಾಂತಿ ಬಳಿಕ ಮೋದಿ ದೊಡ್ಡನಿರ್ಧಾರ ತೆಗೆದುಕೊಳ್ತಾರೆ. ಪಕ್ಷದಲ್ಲಿ, ಸರಕಾರದಲ್ಲಿ ಹೈಕಮಾಂಡ್ ಬದಲಾವಣೆ ಮಾಡಲಿದೆ. ಕಳೆದ ಸಂಕ್ರಾಂತಿಗೆ ಇದೇ ರೀತಿ ಹೇಳಿದ್ದೆ ಒಂದು ವಿಕೆಟ್ ಹಾರಿತ್ತು. ಈಗಲೂ ಅದೇ ಆಗಲಿದೆ ಎಂದರು.
ಸಿಎಂ ವಿದೇಶಿ ಪ್ರವಾಸ ವದಂತಿ ವಿಚಾರವಾಗಿ ಮಾತನಾಡಿದ ಅವರು, ಅವರ ವೀಸಾ ಬಂದಿದ್ದರೇ ನನಗೆ ತೋರಿಸಿ. ಸಿಎಂ ಫಾರಿನ್ ಟೂರ್ ಇಲ್ಲ, ಇದ್ದರು ಗೊತ್ತಾಗುತ್ತಿತ್ತು. ಸಿಎಂ ಪ್ರವಾಸ ಚಲನವಲನ ಸಾರ್ವಜನಿಕವಾಗಿರುತ್ತೆ. ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ, ಬೇಕು ಅನ್ನೋದು ಇಲ್ಲ. ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ ಯತ್ನಾಳ್ ಗಟ್ಸ್ ಇರೋರು ಗೃಹ ಸಚಿವ ರಾಗಬೇಕು. ನಮ್ಮಂತವರ ಕೈಯಲ್ಲಿ ಕೊಟ್ರೆ ಬರೊಬ್ಬರಿ ಮಾಡ್ತೀವಿ ಎಂದು ಶಾಸಕ ಯತ್ನಾಳ್ ಮತ್ತೆ ಸಚಿವ ಸ್ಥಾನದ ಆಸೆ ಹೊರಹಾಕಿದ್ದಾರೆ. ಸದಾ ವಿವಾದಾತ್ಮಕ ಮಾತುಗಳ ಮೂಲಕ, ಹಾಗೂ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡುವ ಇವರ ಮೇಲೆ ಕ್ರಮ ಜರುಗಿಸಲು ಹೈಕಮಾಂಡ್ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಬಿಜೆಪಿ ವಲಯದಲ್ಲೆ ಪ್ರಶ್ನಿಸುತ್ತಿದ್ದಾರೆ. ಅಧಿಕಾರ ಕೊಟ್ಟು ನೋಡಿ ಏನು ಮಾಡಬೇಕು ಅದನ್ನು ಮಾಡಿ ತೋರಿಸುತ್ತೇನೆ ಎಂದು ಹೇಳುವ ಮೂಲಕ ಗಲಾಟೆಯನ್ನು ಪ್ರಚೋಧಿಸುವ ಹಾಗೂ ಕೋಮುವಾದವನ್ನು ಸಮರ್ಥಿಸುವ ಕೆಲಸವನ್ನು ಯತ್ನಾಳ ಮಾಡುತ್ತದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.